40% ಕಮಿಷನ್ ಸೇರಿ ಬಿಜೆಪಿಯ ಎಲ್ಲ ಹಗರಣ ತನಿಖೆ: ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು (ಮೇ.22): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹಿಂದಿನ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿನ ಪ್ರತಿಯೊಂದು ಹಗರಣವನ್ನೂ ತನಿಖೆ ನಡೆಸಲು ಸಜ್ಜಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಪ್ರತಿಯೊಂದು ಅವ್ಯವಹಾರ ಪ್ರಕರಣಗಳನ್ನೂ ತನಿಖೆ ನಡೆಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ನೂತನ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಮತ್ತೊಂದೆಡೆ ಮಾಜಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಪಕ್ಷದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ‘ಹಿಂದಿನ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಯಾವ್ಯಾವ ಕಾಮಗಾರಿಗಳಲ್ಲಿ, ಯಾವ್ಯಾವ ಇಲಾಖೆಗಳಲ್ಲಿ ಭ್ರಷ್ಟಾಚಾರ ಆಗಿದೆ ಎಂಬುದರ ಬಗ್ಗೆ ತನಿಖೆ ಆಗಬೇಕು’ ಎಂದು ಒತ್ತಾಯಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ‘ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಪ್ರತಿಯೊಂದು ಅವ್ಯವಹಾರ ಪ್ರಕರಣಗಳನ್ನೂ ನಮ್ಮ ಸರ್ಕಾರ ತನಿಖೆ ನಡೆಸಲಿದೆ. ಅದು ನೀರಾವರಿ ಸೇರಿದಂತೆ ಯಾವುದೇ ಇಲಾಖೆಯ ಪ್ರಕರಣಗಳಾಗಿರಬಹುದು, ಗುತ್ತಿಗೆದಾರರಿಂದ ಕೇಳಿಬಂದ 40 ಪರ್ಸೆಂಟ್ ಕಮಿಷನ್ ಆರೋಪ ಇರಬಹುದು, ಪಿಎಸ್‌ಐ ನೇಮಕಾತಿ ಅಕ್ರಮ ಇರಬಹುದು. ಪ್ರತಿಯೊಂದು ಪ್ರಕರಣಗಳ ಆಧಾರದ ಮೇಲೆ ತನಿಖೆ ನಡೆಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮ್ಮ ಮುಂದೆ ಪ್ರಸ್ತಾಪ ಮಾಡಿದ್ದಾರೆ ಎಂದರು.
ಕ್ಷೆಗೆ ಒಳಪಡಿಸಲು ಸಿಎಂ ಸೂಚನೆ: ಎಲ್ಲ ಪ್ರಕರಣಗಳನ್ನೂ ತನಿಖೆ ನಡೆಸಿ ಅಧಿಕಾರಿಗಳು, ಹಿಂದಿನ ಸರ್ಕಾರದ ಸಚಿವರಗಳು ಯಾರೇ ಭಾಗಿಯಾಗಿರುವುದು, ತಪ್ಪೆಸಗಿರುವುದು ಕಂಡುಬಂದರೆ ಅವರನ್ನು ಶಿಕ್ಷೆಗೆ ಒಳಪಡಿಸಬೇಕು. ಬಿಜೆಪಿ ಅವಧಿಯಲ್ಲಿದ್ದ ಕೆಟ್ಟವ್ಯವಸ್ಥೆಯನ್ನು ಬದಲಾಯಿಸಬೇಕೆಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಅಲ್ಲದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಎಲ್ಲ ಯೋಜನೆಗಳನ್ನು ಪುನರ್ ಪರಿಶೀಲಿಸಲು ಹೇಳಿದ್ದಾರೆ. ಅಂದಾಜು ವೆಚ್ಚವನ್ನು ಜಾಕ್‌ಅಪ್ ಮಾಡಿರುವ ಸಾಧ್ಯತೆ ಇರುತ್ತದೆ. ಅವ್ಯವಹಾರಕ್ಕೆ ಅವಕಾಶಗಳಾಗಬಹುದು. ನೀವು ತಿಳಿದವರು. ಯಾವುದೇ ಯೋಜನೆಗೂ ಅಂದಾಜು ವೆಚ್ಚ ಅಗತ್ಯಕ್ಕಿಂತ ಹೆಚ್ಚು ಆಗಬಾರದು. ಅಕ್ರಮಗಳಿಗೆ ಅವಕಾಶವಾಗಬಾರದು. ಒಂದು ರುಪಾಯಿ ಕೂಡ ಅನಾವಶ್ಯಕವಾಗಿ ಹೋಗಬಾರದು. ಈ ನಿಟ್ಟಿನಲ್ಲಿ ಏನೆಲ್ಲಾ ಕ್ರಮಗಳಾಗಬೇಕು ಎಂದು ಪರಿಣಿತರೊಂದಿಗೆ ಮಾತನಾಡಿ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ ಎಂದು ವಿವರಿಸಿದರು.
ತನಿಖೆಗೆ ಒತ್ತಾಯ: ಈ ನಡುವೆ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ‘ಹಿಂದಿನ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು. ಇದರಿಂದ ಜನರು ಬೇಸತ್ತಿದ್ದರು. ಹೀಗಾಗಿ ಜನರ ನಂಬಿಕೆ ಉಳಿಸಿಕೊಳ್ಳಲು ಯಾವ ಕಾಮಗಾರಿಗಳಲ್ಲಿ, ಯಾವ್ಯಾವ ಇಲಾಖೆಗಳಲ್ಲಿ ಭ್ರಷ್ಟಾಚಾರ ಆಗಿದೆ ಎಂಬುದರ ಬಗ್ಗೆ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು. ಇನ್ನು ನಮ್ಮ ಸರ್ಕಾರ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಲಾಗಿದೆ. ಅವರು ಸಹ ಖುಷಿಯಿಂದ ಒಪ್ಪಿಕೊಂಡು ನಾವು ಜನರಿಗೆ ನೀಡಿರುವ ಭರವಸೆಯಂತೆಯೇ ಪಾರದರ್ಶಕ ಆಡಳಿತ ನೀಡುವುದಾಗಿ ಹೇಳಿದ್ದಾರೆ ಎಂದರು. ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿ ಸರ್ಕಾರದ ಹಗರಣದ ಬಗ್ಗೆ ತನಿಖೆ ಆಗಬೇಕು. ಹಿಂದಿನ ಅವಧಿಯಲ್ಲಿ ರಾಜ್ಯದಲ್ಲಿದ್ದ ಭ್ರಷ್ಟವ್ಯವಸ್ಥೆ ಸರಿ ಮಾಡಬೇಕು. ತನ್ಮೂಲಕ ನೂತನ ಸರ್ಕಾರವು ಜನರಲ್ಲಿ ಉತ್ತಮ ಆಡಳಿತ ನೀಡಿ ವಿಶ್ವಾಸ ಮೂಡಿಸಬೇಕು ಎಂದು ಹೇಳಿದರು.