ಜಿಲ್ಲಾ, ತಾಲೂಕು ಪಂಚಾಯಿತಿ ಮೀಸಲು ನಿಗದಿಗೆ ಹೈಕೋರ್ಟಿನಿಂದ 4 ವಾರ ಗಡುವು
ಬೆಂಗಳೂರು: ಸಾಂವಿಧಾನಿಕ ಸಂಸ್ಥೆಗಳನ್ನು ಸುದೀರ್ಘ ಅವಧಿಗೆ ಖಾಲಿ ಬಿಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಹೈಕೋರ್ಟ್, ರಾಜ್ಯದ ಜಿಪಂ-ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರಕಾರಕ್ಕೆ ಕೊನೆಯ ಅವಕಾಶವಾಗಿ ನಾಲ್ಕು ವಾರಗಳ ಗಡುವು ನೀಡಿದೆ.
ಅವಧಿ ಮುಗಿದ ಜಿಪಂ, ತಾಪಂ ಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ರಾಜ್ಯದಲ್ಲಿ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರ ಮರುವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿರು ವುದನ್ನು ಪ್ರಶ್ನಿಸಿ ರಾಜ್ಯ ಚುನಾವಣ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಈ ವೇಳೆ ರಾಜ್ಯ ಸರಕಾರದ ಪರ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟಿ, ತಾ.ಪಂ. ಜಿ.ಪಂ. ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಸರಕಾರದ ಮಟ್ಟದಲ್ಲಿ ಚಾಲ್ತಿಯಲ್ಲಿದೆ. ಅದನ್ನು ಪೂರ್ಣಗೊಳಿಸಲು ನಾಲ್ಕು ವಾರ ಕಾಲಾವಕಾಶ ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಪೀಠ, ನ್ಯಾಯಾಲಯ ಹಿಂದೆ ಅನೇಕ ಬಾರಿ ಸರಕಾರಕ್ಕೆ ನಿರ್ದೇಶನಗಳನ್ನು ನೀಡಿದೆ. 2023ರ ಜೂನ್ 28ರಂದು ಸರಕಾರಕ್ಕೆ ನ್ಯಾಯಾಲಯ 10 ವಾರಗಳ ಕಾಲಾವಕಾಶ ನೀಡಿತ್ತು. ಈಗ ಮತ್ತೆ ಸರಕಾರ ಸಮಯ ಕೇಳುತ್ತಿದೆ. ಇದೊಂದು ಪ್ರಮುಖ ವಿಷಯವಾಗಿದ್ದು, ತ್ವರಿತವಾಗಿ ಕೆಲಸ ಮಾಡಲು ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಗೆ ಸೂಚಿಸಬೇಕು ಎಂದು ಅಡ್ವೊಕೇಟ್ ಜನರಲ್‌ಗೆ ಹೇಳಿತು. ಅಂತಿಮವಾಗಿ ನಾಲ್ಕು ವಾರ ಸಮಯ ನೀಡಿ ವಿಚಾರಣೆಯನ್ನು ಡಿ. 19ಕ್ಕೆ ಮುಂದೂಡಿತು.
ಎಂಪಿ, ಎಂಎಎಲ್‍ಎಗಳ ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಸುಪ್ರೀಂ ಸೂಚನೆ
ನವದೆಹಲಿ: ಸಂಸದರು (MP) ಮತ್ತು ಶಾಸಕರ (MLA) ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳ ಮೇಲೆ ನಿಗಾ ಇಡಲು ವಿಶೇಷ ಪೀಠ ರಚನೆ ಮಾಡುವಂತೆ ಹಾಗೂ ಪೀಠದ ನೇತೃತ್ವವನ್ನು ಹೈಕೋರ್ಟ್ (High Court) ಮುಖ್ಯ ನ್ಯಾಯಮೂರ್ತಿಗಳು ವಹಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ (Supreme Court) ಸೂಚನೆ ನೀಡಿದೆ.
ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ತ್ವರಿತ ವಿಲೇವಾರಿಗಾಗಿ ನಿರ್ದೇಶನ ನೀಡಬೇಕು. ಆರು ವರ್ಷಗಳ ನಿಷೇಧಕ್ಕೆ ವಿರುದ್ಧವಾಗಿ ಹಾಲಿ ಶಾಸಕರು ಸೇರಿದಂತೆ ಅಪರಾಧಿ ರಾಜಕಾರಣಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜೀವಮಾನದ ನಿಷೇಧವನ್ನು ಹೇರುವಂತೆ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ಸಿಜೆಐ ನೇತೃತ್ವದ ಪೀಠ ವಿಚಾರಣೆ ನಡೆಸಿತು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠವು ಮುಖ್ಯವಾಗಿ ಸಂಸದರು ಅಥವಾ ಶಾಸಕರ ವಿರುದ್ಧ ಮರಣದಂಡನೆ ವಿಧಿಸಬಹುದಾದ ಪ್ರಕರಣಗಳಿಗೆ ಇತರ ಪ್ರಕರಣಗಳಿಗಿಂತ ಹೆಚ್ಚಿನ ಆದ್ಯತೆ ನೀಡಬೇಕು. ಇಂತಹ ಪ್ರಕರಣಗಳ ತ್ವರಿತ ವಿಲೇವಾರಿ ಮಾಡುವಂತೆ ಕೋರ್ಟ್ ನಿರ್ದೇಶಿಸಿದೆ. ಸಂಬಂಧಪಟ್ಟ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ಅಂತಹ ಪ್ರಕರಣಗಳ ವಿಚಾರಣೆಗೆ ಸಾಕಷ್ಟು ಮೂಲಸೌಕರ್ಯ ಸೌಲಭ್ಯಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಇದೇ ವೇಳೆ ಹೇಳಿದೆ.
ಉಪಾಧ್ಯಾಯ ಅವರು ಕಳೆದ ಏಪ್ರಿಲ್‍ನಲ್ಲಿ ಗಂಭೀರ ಅಪರಾಧಗಳಿಗಾಗಿ ಚಾರ್ಜ್‍ಶೀಟ್ ಮಾಡಿದ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿದ್ದರು. ಇದು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಟೀಕಿಸಿತ್ತು.