4 ಓವರ್ ಗಳಲ್ಲಿ ಒಂದೇ ಒಂದು ರನ್ ನೀಡದೆ 3 ವಿಕೆಟ್ ಕಬಳಿಸಿ ದಾಖಲೆ ಬರೆದ ಲಾಕಿ ಫರ್ಗುಸನ್..!
T20 World Cup 2024: ಟಿ20 ವಿಶ್ವಕಪ್ನ 39ನೇ ಪಂದ್ಯದ ಮೂಲಕ ನ್ಯೂಝಿಲೆಂಡ್ ವೇಗಿ ಲಾಕಿ ಫರ್ಗುಸನ್ (Lockie Ferguson) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಅಂತಿಂಥ ವಿಶ್ವ ದಾಖಲೆಯಲ್ಲ ಎಂಬುದು ವಿಶೇಷ. ಹಾಗಿದ್ರೆ ಕಿವೀಸ್ ವೇಗಿ ನಿರ್ಮಿಸಿದ ಹೊಸ ವರ್ಲ್ಡ್ ರೆಕಾರ್ಡ್ನ ವಿಶೇಷತೆ ಏನೆಂದು ತಿಳಿಯೋಣ…
ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ಹಾಗೂ ಪಪುವಾ ನ್ಯೂ ಗಿನಿಯಾ ತಂಡಗಳೂ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಪುವಾ ನ್ಯೂ ಗಿನಿಯಾ ತಂಡವು 19.4 ಓವರ್ಗಳಲ್ಲಿ 78 ರನ್ಗಳಿಸಿ ಆಲೌಟ್ ಆಗಿದೆ.
ಹೀಗೆ ಪಪುವಾ ನ್ಯೂ ಗಿನಿಯಾ ತಂಡವು ಅಲ್ಪ ಮೊತ್ತಕ್ಕೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದು ನ್ಯೂಝಿಲೆಂಡ್ ವೇಗಿ ಲಾಕಿ ಫರ್ಗುಸನ್. ಏಕೆಂದರೆ ಈ ಪಂದ್ಯದಲ್ಲಿ ಫರ್ಗುಸನ್ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಇದರಲ್ಲೇನು ವಿಶೇಷ ಎಂದರೆ….
ಲಾಕಿ ಫರ್ಗುಸನ್ ಒಂದೇ ಒಂದು ರನ್ ನೀಡದೇ 3 ವಿಕೆಟ್ ಕಬಳಿಸಿರುವುದು. ಅಂದರೆ 4 ಓವರ್ಗಳನ್ನು ಎಸೆದಿದ್ದ ಫರ್ಗುಸನ್ ಯಾವುದೇ ರನ್ ನೀಡದೇ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ 4 ಓವರ್ಗಳಲ್ಲಿ ಒಂದೇ ಒಂದು ರನ್ ನೀಡದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹಾಗೆಯೇ ಟಿ20 ಕ್ರಿಕೆಟ್ ಇತಿಹಾಸದಲ್ಲಿ 4 ಓವರ್ಗಳಲ್ಲಿ 0 ರನ್ಗೆ ಅತೀ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನೂ ಸಹ ಲಾಕಿ ಫರ್ಗುಸನ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಸಾದ್ ಬಿನ್ ಝಫರ್ ಹೆಸರಿನಲ್ಲಿತ್ತು.
2021 ರಲ್ಲಿ ಪನಾಮ ವಿರುದ್ಧದ ಪಂದ್ಯದಲ್ಲಿ ಕೆನಡಾ ಬೌಲರ್ ಸಾದ್ ಬಿನ್ ಝಫರ್ 4 ಓವರ್ಗಳಲ್ಲಿ ಯಾವುದೇ ರನ್ ನೀಡದೇ 2 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ನ್ಯೂಝಿಲೆಂಡ್ ತಂಡ ಬಲಗೈ ವೇಗಿ ಮುರಿದಿದ್ದಾರೆ.
ಪಪುವಾ ನ್ಯೂ ಗಿನಿಯಾ ವಿರುದ್ಧದ ಪಂದ್ಯದಲ್ಲಿ 4 ಮೇಡನ್ ಓವರ್ಗಳನ್ನು ಎಸೆದಿರುವ ಲಾಕಿ ಫರ್ಗಸನ್ 0 ರನ್ಗೆ 3 ವಿಕೆಟ್ ಕಬಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಶೂನ್ಯ ರನ್ಗೆ ಅತ್ಯಧಿಕ ವಿಕೆಟ್ ಕಬಳಿಸಿ ಬೌಲರ್ ಎನಿಸಿಕೊಂಡಿದ್ದಾರೆ.