27 ವರ್ಷದ ಮಹಿಳಾ ಶಿಕ್ಷಕಿ 10ನೇ ತರಗತಿ ವಿದ್ಯಾರ್ಥಿಯೊಂದಿಗೆ ಪರಾರಿ!
ಹೈದರಾಬಾದ್: ಗಚ್ಚಿಬೌಳಿ ಪೊಲೀಸರಿಗೆ ತಲೆನೋವಾಗಿ ಕಾಡಿದ್ದ ಶಿಕ್ಷಕಿ ಹಾಗೂ ವಿದ್ಯಾರ್ಥಿ ಪರಾರಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿಗೆ ಆತನ ಮೇಲೆಯೇ ಪ್ರೇಮಾಂಕುರವಾಗಿತ್ತು. ಕಳೆದ ತಿಂಗಳು ಇವರಿಬ್ಬರು ನಾಪತ್ತೆಯಾದಾಗಲೇ ಈ ವಿಚಾರ ಮನೆಯವರಿಗೆ ತಿಳಿದುಬಂದಿತ್ತು. ಹುಡುಗಿಯ ಅಜ್ಜ ಹಾಗೂ ವಿದ್ಯಾರ್ಥಿಯ ಪಾಲಕರು ಗಚ್ಚಿಬೌಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ ಬಳಿಕ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದರು. ಇವರಿಬ್ಬರನ್ನು ಪತ್ತೆಹಚ್ಚಲು ಯಶಸ್ವಿಯಾಗಿರುವ ಪೊಲೀಸರು ಕೌನ್ಸೆಲಿಂಗ್ ನಡೆಸಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಹೈದರಾಬಾದ್‌ನ ಚಂದಾನಗರದಲ್ಲಿ ವಾಸ ಮಾಡುತ್ತಿದ್ದ 27 ವರ್ಷದ ಮಹಿಳೆ, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ವಿದ್ಯಾರ್ಥಿ ಕೂಡ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತನ ತರಗತಿಯಲ್ಲಿ ಪಾಠ ಮಾಡುವ ಸಮಯದಲ್ಲಿಯೇ ಹುಡುಗನ ಪ್ರೇಮಪಾಶದಲ್ಲಿ ಬಿದ್ದಿದ್ದಳು. ಫೆಬ್ರವರಿ 16 ರಂದು ಎಂದಿನಂತೆ ಶಾಲೆಗೆ ಹೋಗುವುದಾಗಿ ತೆರಳಿದ್ದ ಶಿಕ್ಷಕಿ, ಮನೆಗೆ ವಾಪಾಸಾಗಲೇ ಇರಲಿಲ್ಲ. ಈ ವೇಳೆ ಮಹಿಳೆಯ ಅಜ್ಜ ಚಂದಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಫೆಬ್ರವರಿ 20 ರಂದು ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ ಎನ್ನುವ ದೂರು ಗಚ್ಚಿಬೌಳಿ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿತ್ತು. ಈ ವೇಳೆ ಹುಡುಗನ ಪೋಷಕರು ಶಿಕ್ಷಕಿಯ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.
ಫೆಬ್ರವರಿ 16ರಂದೇ ಇವರಿಬ್ಬರು ಬೆಂಗಳೂರಿಗೆ ರೈಲಿನಲ್ಲಿ ತೆರಳಿದ್ದರು. ಬಳಿಕ ಇವರ ಪತ್ತೆಗಾಗಿ ಪೊಲೀಸರು ದೊಡ್ಡ ಮಟ್ಟದ ಶೋಧ ಕಾರ್ಯ ಕೈಗೊಂಡಿದ್ದರು. ಬೆಂಗಳೂರು ಮಾತ್ರವಲ್ಲದೆ, ಹೈದರಾಬಾದ್‌ನ ವಿವಿಧ ಲಾಡ್ಜ್‌ಗಳಲ್ಲಿ ವಾಸ್ತವ್ಯ ಹೂಡಿದ್ದರು. ಕೊನೆಗೆ ಫೆಬ್ರವರಿ 27 ರಂದು ಇಬ್ಬರೂ ಮನೆಗೆ ವಾಪಾಸ್ ಬಂದಿದ್ದಾರೆ. ಎರಡೂ ಕುಟುಂಬದವರು ಠಾಣೆಗೆ ಬಂದು ನೀಡಿರುವ ದೂರನ್ನು ವಾಪಾಸ್ ತೆಗೆದುಕೊಳ್ಳಲು ಬಂದಾಗ ಕೇಸ್ ಕ್ಲೋಸ್ ಆಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ವೇಳೆ ಶಿಕ್ಷಕಿಯನ್ನು ಕರೆದು ಕೌನ್ಸೆಲಿಂಗ್ ನೀಡಿರುವ ಪೊಲೀಸರು, ಮುಂದೇನಾದರೂ ಇಂಥ ಕೃತ್ಯ ಮಾಡಿದಲ್ಲಿ ಅಪ್ರಾಪ್ತ ವಿದ್ಯಾರ್ಥಿಯನ್ನು ಅಪಹರಣ ಮಾಡಿದ ಕೇಸ್ ದಾಳು ಮಾಡುವುದಾಗಿ ಎಚ್ಚರಿಸಿ ಇಬ್ಬರನ್ನೂ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಪ್ರಕರಣಗಳ ಕುರಿತು ಪೊಲೀಸರು ತನಿಖೆ ನಡೆಸಿದಾಗ ಚಂದಾನಗರದ ಶಾಲೆಯೊಂದರಲ್ಲಿ ವಿದ್ಯಾರ್ಥಿಗೆ ಶಿಕ್ಷಕ ಬೋಧಕರು ಮತ್ತು ಅವರಿಬ್ಬರೂ ಒಂದು ವರ್ಷಕ್ಕೂ ಹೆಚ್ಚು ಕಾಲ “ಪ್ರೀತಿ”ಯಲ್ಲಿದ್ದರು ಎಂದು ತಿಳಿದುಬಂದಿದೆ. ಫೆಬ್ರವರಿ 16ರಂದು ಇವರಿಬ್ಬರು ಓಡಿಹೋಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಹುಡುಗನ ಪ್ರೇಮಪಾಶದಲ್ಲಿದ್ದ ಶಿಕ್ಷಕಿಗೆ ಮನೆಯಲ್ಲಿ ಮದುವೆ ಮಾತುಕತೆಗಳು ನಡೆಯುತ್ತಿದ್ದವು. ಆದರೆ, ಮನೆಯಲ್ಲಿ ಪ್ರೀತಿಯ ವಿಷಯ ಹೇಳಲಾಗದೇ ಓಡಿ ಹೋಗುವ ತೀರ್ಮಾನ ಮಾಡಿದ್ದರು ಎನ್ನಲಾಗಿದೆ.