ತೋಟದ ಮನೆಯೊಂದರಲ್ಲಿ 25 ಮನುಷ್ಯರ ತಲೆಬುರುಡೆಗಳು ಪತ್ತೆ ; ಓರ್ವ ಅರೆಸ್ಟ್..!
ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ 25 ಮನುಷ್ಯರ ತಲೆಬುರುಡೆಗಳು (Human Skulls) ಪತ್ತೆಯಾಗಿವೆ. ಬಲರಾಮ್ ಎಂಬ ವ್ಯಕ್ತಿ ತಲೆ ಬುರುಡೆ ಸಂಗ್ರಹ ಮಾಡುತ್ತಿದ್ದಾನೆ ಎಂಬ ಗಂಬೀರ ಆರೋಪ ಕೇಳಿ ಬಂದಿದೆ. ಬಲರಾಮ್ ತಲೆ ಬುರಡೆಗಳನ್ನು ಸಂಗ್ರಹಿಸಿ ಅವುಗಳಿಂದ ಮಾಟ-ಮಂತ್ರ ಮಾಡುತ್ತಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು ಸದ್ಯ ಸ್ಥಳಕ್ಕೆ ಬಂದ ಪೊಲೀಸರು (Bidadi Police) ಬಲರಾಮ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆಯಷ್ಟೇ ಮಹಾ ಶಿವರಾತ್ರಿಯ ಅಮಾವಸ್ಯೆ ಮುಗಿದಿದೆ. ರಾಮನಗರದ ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ಬಲರಾಮ್ ಎಂಬ ವ್ಯಕ್ತಿ ರಾತ್ರಿ ವೇಳೆ ಸ್ಮಶಾನದಲ್ಲಿ ಪೂಜೆ ಮಾಡಿದ್ದು ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಸ್ಮಶಾನಕ್ಕೆ ಬಂದ ಬಿಡದಿ ಪೊಲೀಸರು ವಿಚಾರಣೆ ನಡೆಸಿ ಬಲರಾಮ್ನನ್ನು ವಶಕ್ಕೆ ಪಡೆದಿದ್ದಾರೆ. ಬಲರಾಮ್ ತೋಟದ ಮನೆಯಲ್ಲಿ ಅನೇಕ ಮಾನವರ ತಲೆ ಬುರಡೆಗಳು ಪತ್ತೆಯಾಗಿವೆ. ನನ್ನ ತಾತನ ಕಾಲದಿಂದಲೂ ಬುರುಡೆ ಪೂಜೆ ಮಾಡುತ್ತಾ ಬಂದಿದ್ದೇವೆ ಎಂದು ಬಲರಾಮ್ ತಿಳಿಸಿದ್ದು ವಿಚಾರಣೆ ಮುಂದುವರೆದಿದೆ.
ಮನುಷ್ಯರ ತಲೆಬುರುಡೆಗಳು ಪತ್ತೆಯಾಗಿದ್ದು ಜನ ಬೆಚ್ಚಿಬಿದ್ದಿದ್ದಾರೆ. ಅರಶಿನ, ಕುಂಕುಮ ಹಾಗೂ ಬಿಳಿಯ ಪಟ್ಟಿಗಳನ್ನು ಈ ಬುರುಡೆಗಳಿಗೆ ಬಳಿಯಲಾಗಿದೆ. ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿದ್ದು, ಬಿಡದಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಎಎಸ್ಪಿ ಟಿ.ವಿ.ಸುರೇಶ್, ಬಿಡದಿ ಇನ್ಸ್‌ಪೆಕ್ಟರ್ ಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಫ್ಎಸ್ಎಲ್ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕಳೆದ 4-5 ವರ್ಷದಿಂದ ತಲೆಬುರಡೆ, ಕೈ ಕಾಲು ಮೂಳೆ ಸಂಗ್ರಹ ಮಾಡಲಾಗಿರುವ ಶಂಕೆ ವ್ಯಕ್ತವಾಗಿದೆ.
ಅರೆಸ್ಟ್ ಆಗಿರುವ ಬಲರಾಮ ಕೋಟ್ಯಾಧೀಶ. ಬಿಡದಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ಜಮೀನು ಹೊಂದಿದ್ದಾರೆ. ಖಾಸಗಿ ಕಂಪನಿಗಳಿಗೆ ಭೂಮಿ ಲೀಸ್ಗೆ ಕೊಟ್ಟಿದ್ದಾರೆ. ತನ್ನದೇ ಜಮೀನನಲ್ಲಿ ಶೇಡ್ ನಿರ್ಮಾಣ ಮಾಡಿ ಶೆಡ್ಗೆ ಶ್ರೀ ಸ್ಮಶಾನ ಪೀಠ ಎಂದು ನಾಮಕರಣ ಮಾಡಿ ಸ್ಮಶಾನದಿಂದ ತಲೆಬುರಡೆ ತಂದು ಪೂಜೆ ಮಾಡುತ್ತಿದ್ದು ಸದ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇನ್ನು ತನಿಖೆಗೆ ಇಳಿದಿದ್ದ ಪೊಲೀಸರು ಬಾಗಿಲು ಮುಚ್ಚಿದ್ದ ಮತ್ತೊಂದು ಕೋಣೆಗೆ ಎಂಟ್ರಿ ಕೊಟ್ಟಿದ್ದು ಅಲ್ಲಿ ಎರಡು ಮೂಟೆಗೂ ಹೆಚ್ಚು ಮುನುಷ್ಯರ ಮೂಳೆಗಳು ಪತ್ತೆಯಾಗಿವೆ. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದು ವಾಸನೆ ತಾಳಲಾಗದೆ ಹೊರ ಬಂದ್ರು. ಬಳಿಕ ಸುಧಾರಿಸಿಕೊಂಡು ಮತ್ತೊಮ್ಮೆ ಕೋಣೆ ಒಳಗೆ ನುಗ್ಗಿ ಪರಿಶೀಲನೆ ನಡೆಸಿದ್ದಾರೆ. ಇಡೀ ಮನೆಯಲ್ಲಿ ಕೊಳೆತ ವಾಸನೆ ಹಬ್ಬಿದೆ. ಆರೋಪಿ ಬಲರಾಮ ಕುಳಿತುಕೊಳ್ಳಲು, ಮಲಗಲು ಮಾನವರ ದೇಹದ ಮೂಳೆಗಳ ಮಂಚವನ್ನೇ ಮಾಡಿಕೊಂಡಿದ್ದಾನೆ.