ಕಾಲರಾ ಭೀತಿಯಲ್ಲಿ ವಲಸೆ ಹೋಗುತ್ತಿದ್ದ ಹಡಗು ಮುಳುಗಿ 94 ಜನ ದುರ್ಮರಣ; ಸಮುದ್ರ ತೀರದಲ್ಲಿ ಶವಗಳ ರಾಶಿ.!
ಮಾಪುಟೊ: ಕರ್ನಾಟಕದಲ್ಲಿ ಕಾಲರಾ ಭೀತಿ ಎದುರಾಗಿದೆ. ಬೆಂಗಳೂರಿನ ಹಾಸ್ಟೆಲ್‌ಗಳಲ್ಲಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ. ರಾಜ್ಯಾದ್ಯಂತ ಹಲವು ಕಾಲರಾ ಪ್ರಕರಣಗಳು (Cholera Outbreak) ಕೂಡ ದಾಖಲಾಗಿವೆ. ಇದರ ಬೆನ್ನಲ್ಲೇ, ಮೊಜಾಂಬಿಕ್ (Mozambique) ದೇಶದಲ್ಲಿ ಕಾಲರಾ ಭೀತಿಯು 94 ಜನರ ಪ್ರಾಣವನ್ನೇ ತೆಗೆದಿದೆ. ಹೌದು, ಕಾಲರಾ ಭೀತಿಯಿಂದಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಹಡಗು ಮುಳುಗಿದ್ದು (Boat Captized), 94 ಜನ ಮೃತಪಟ್ಟಿದ್ದಾರೆ. ಇನ್ನೂ 26 ಜನ ನಾಪತ್ತೆಯಾಗಿದ್ದಾರೆ.
ಹೌದು, ಮೊಜಾಂಬಿಕ್‌ನ ಉತ್ತರ ಕರಾವಳಿ ಭಾಗದಲ್ಲಿ 130 ಜನ ಪ್ರಯಾಣಿಸುತ್ತಿದ್ದ ಹಡಗು ಮುಳುಗಿದೆ. ಇದುವರೆಗೆ 94 ಶವಗಳು ಪತ್ತೆಯಾಗಿವೆ. ಉಳಿದ 26 ಜನರ ಶವಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಂಪುಲ ಪ್ರಾಂತ್ಯದ ಲುಂಗಾ ಪ್ರದೇಶದಿಂದ ಮೊಜಾಂಬಿಕ್ ದ್ವೀಪಕ್ಕೆ ತೆರಳುತ್ತಿದ್ದ ಹಡಗು ಮುಳುಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂಬುದಾಗಿ ಮೊಜಾಂಬಿಕ್ ಸಾಗರ ಸಾರಿಗೆ ಇಲಾಖೆ (INTRASMAR) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂಬುದಾಗಿ ಬಿಬಿಸಿ ವರದಿ ಮಾಡಿದೆ.
#Mozambique Shipwreck makes about 100 victims in #quissanga on the island of Mozambique in the #Nampula province. There is information that shows that they fled from Quissanga (Ilha Moçambique-Nampula), because of the outbreak of #cholera that devastated that region! very sad. pic.twitter.com/dzC4WgLiK9
— José A. M. (@Muianga) April 7, 2024
ಹಡಗು ಮುಳುಗಲು ಕಾರಣವೇನು?
ಹಡಗಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ತೆರಳುತ್ತಿದ್ದುದೇ ಅದು ಮುಳುಗಲು ಕಾರಣ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಡಗಿನಲ್ಲಿ 130 ಪ್ರಯಾಣಿಕರು ತೆರಳುತ್ತಿದ್ದರು. ಅವರ ಭಾರಿ ಪ್ರಮಾಣದ ಬ್ಯಾಗ್‌ಗಳು, ವಸ್ತುಗಳು, ಸಲಕರಣೆಗಳನ್ನು ಹಡಗಿನಲ್ಲಿ ತುಂಬಲಾಗಿತ್ತು. ಅತಿಯಾದ ಭಾರ ತಾಳದೆ ಹಡಗು ಮುಳುಗಿದೆ ಎಂದು ಮಾಹಿತಿ ನೀಡಿದ್ದಾರೆ. ಮೊಜಾಂಬಿಕ್ ಸಮುದ್ರದ ತೀರದಲ್ಲಿ ಪ್ರಯಾಣಿಕರ ಶವಗಳ ರಾಶಿಯ ವಿಡಿಯೊ ಕೂಡ ಹರಿದಾಡಿದ್ದು, ದೃಶ್ಯವು ಮನಕಲಕುವಂತಿದೆ.
ದಕ್ಷಿಣ ಆಫ್ರಿಕಾದ ಮೊಜಾಂಬಿಕ್ ಸೇರಿ ಹಲವು ದೇಶಗಳಲ್ಲಿ ಇತ್ತೀಚೆಗೆ ಕಾಲರಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದರಿಂದಾಗಿ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವ, ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗುವುದು ಸಾಮಾನ್ಯ ಎಂಬಂತಾಗಿದೆ. ಆದರೆ, ಹಡಗಿನಲ್ಲಿ ತೆರಳುವಾಗ ಹೆಚ್ಚಿನ ಪ್ರಯಾಣಿಕರನ್ನು ಕೂರಿಸಿಕೊಳ್ಳುವುದು, ನೋಂದಣಿ ಮಾಡಿಕೊಳ್ಳದ ಹಡಗಿನಲ್ಲಿ ಪ್ರಯಾಣಿಸುವುದು ಸೇರಿ ಹಲವು ಪ್ರಕರಣಗಳು ಸುದ್ದಿಯಾಗುತ್ತಿವೆ. ಇವು ಅಪಾಯಗಳಿಗೂ ಎಡೆಮಾಡಿಕೊಡುತ್ತಿವೆ ಎಂಬುದಕ್ಕೆ ಹಡಗು ಮುಳುಗಿದ್ದೇ ಕಾರಣವಾಗಿದೆ.