2024ರ T20 World Cup ಟೂರ್ನಿಯ ದಿನಾಂಕ ಬಹಿರಂಗ; ಇಲ್ಲಿದೆ ವಿವಾರವಾದ ಮಾಹಿತಿ!
ವಾಷಿಂಗ್ಟನ್: ಭಾರತದಲ್ಲಿ ಏಕದಿನ ವಿಶ್ವಕಪ್ ಟೂರ್ನಿ (ODI WorldCup 2023) ಆರಂಭಕ್ಕೆ ಇನ್ನೂ 2 ತಿಂಗಳು ಬಾಕಿಯಿರುವ ಹೊತ್ತಿನಲ್ಲಿ 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ (T20 World Cup 2024) ದಿನಾಂಕ ಬಹಿರಂಗಗೊಂಡಿದೆ.
ಮುಂದಿನ ಬಾರಿ ಟಿ20 ವಿಶ್ವಕಪ್ ಚುಟುಕು ಸಮರಕ್ಕೆ ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕ (USA) ಜಂಟಿ ಆತಿಥ್ಯ ವಹಿಸಲಿವೆ. 2022ರ ಟಿ20 ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾ (Australia) ಸಂಪೂರ್ಣ ಆತಿಥ್ಯ ವಹಿಸಿತ್ತು.
ಮಾಹಿತಿ ಪ್ರಕಾರ, 2024ರ T20 ವಿಶ್ವಕಪ್ ಟೂರ್ನಿಯು ಮುಂದಿನ ಜೂನ್ 4 ರಿಂದ ಜೂನ್ 30ರ ವರೆಗೆ ನಡೆಯಲಿದೆ. ಕಳೆದ ಎರಡು ಆವೃತ್ತಿಗಳಲ್ಲಿಯೂ ಅಕ್ಟೋಬರ್‌ನಲ್ಲಿ ಟೂರ್ನಿ ಆಯೋಜನೆ ಮಾಡಲಾಗಿತ್ತು. ಈಗಾಗಲೇ ಐಸಿಸಿ ಅಧಿಕಾರಿಗಳು ಅಮೆರಿಕದಲ್ಲಿ ಆತಿಥ್ಯ ವಹಿಸುವ ಸಂಭಾವ್ಯ ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆ ಕೆರೆಬಿಯನ್ ಮತ್ತು ಯುಎಸ್‌ನ 10 ಸ್ಥಳಗಳಲ್ಲಿ ವಿಶ್ವಕಪ್ ಟೂರ್ನಿ ಜರುಗಲಿದ್ದು, ಯುನೈಟೆಡ್ ಸ್ಟೇಟ್ಸ್‌ನ ಲಾಡರ್ ಹಿಲ್, ಮೋರಿಸ್ವಿಲ್ಲೆ, ಡಲ್ಲಾಸ್, ನ್ಯೂಯಾರ್ಕ್ ಜೊತೆಗೆ ಫ್ಲೋರಿಡಾದಲ್ಲಿಯೂ ಪಂದ್ಯಗಳನ್ನ ಆಯೋಜಿಸಲಾಗುತ್ತಿದೆ ಎಂದು ತಿಳಿಬಂದಿದೆ.
ಲಾಡರ್‌ಹೀಲ್‌ನಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ಆಯೋಜನೆಗೊಂಡಿವೆ. ಪ್ರಸ್ತುತ ಮೇಜರ್ ಲೀಗ್ ಕ್ರಿಕೆಟ್ ಕೂಡ ಆಯೋಜನೆಗೊಂಡಿದೆ. ಆದ್ರೆ ಡಲ್ಲಾರ್, ಮಾರಿಸ್ವಿಲ್ಲೆ ಮತ್ತು ನ್ಯೂಯಾರ್ಕ್‌ನ ಸ್ಥಳಗಳು ಐಸಿಸಿಯಿಂದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದುಕೊಂಡಿಲ್ಲ. ಹಾಗಾಗಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅಧಿಕೃತ ಸ್ಥಳಗಳ ಮಾಹಿತಿ ಹೊರಬೀಳಲಿದೆ. ಸದ್ಯ ಏಕದಿನ ವಿಶ್ವಕಪ್ ತಯಾರಿಯಲ್ಲಿರುವ ಬಿಸಿಸಿಐ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಬಾರಿ ಭಾರತದ ಸಂಪೂರ್ಣ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯೂ ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ.
ಕ್ರಿಕೆಟ್ ನಿಯಮ ಉಲ್ಲಂಘನೆ ಹರ್ಮನ್‍ಪ್ರೀತ್ ಅಮಾನತು – ಮೌನ ಮುರಿದ ಜಯ್ ಶಾ
ನವದೆಹಲಿ: ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಹರ್ಮನ್‍ಪ್ರೀತ್ ಕೌರ್‌ರನ್ನು (Harmanpreet Kaur) ಎರಡು ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ (Jay Shah) ತಮ್ಮ ನಿಲುವಿನ ಬಗ್ಗೆ ಮೌನ ಮುರಿದಿದ್ದಾರೆ.
ಢಾಕಾದಲ್ಲಿ ನಡೆದ ಘಟನೆಯ ಕುರಿತು ಬಿಸಿಸಿಐನ ನಿಲುವನ್ನು ಶಾ ಪ್ರಕಟಿಸಿದ್ದಾರೆ. ಮೇಲ್ಮನವಿಯ ಸಮಯ ಮುಗಿದಿರುವುದರಿಂದ ಹರ್ಮನ್‍ಪ್ರೀತ್ ಅವರ ನಿಷೇಧವನ್ನು ಹಿಂತೆಗೆದುಕೊಳ್ಳಲು ಅಥವಾ ಸಡಿಲಿಸಲು ಮಂಡಳಿಯು ಮನವಿ ಮಾಡುವುದಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.
ಮಂಡಳಿಯ ನಿರ್ದೇಶನದಂತೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಎನ್‍ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಹರ್ಮನ್‍ಪ್ರೀತ್ ಅವರಿಗೆ ಸಲಹೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಐಸಿಸಿ ಮಹಿಳಾ ಚಾಂಪಿಯನ್‍ಶಿಪ್ ಸರಣಿಯ ಮೂರನೇ ಪಂದ್ಯದಲ್ಲಿ ಎರಡು ಪ್ರತ್ಯೇಕ ನೀತಿ ಸಂಹಿತೆ ಉಲ್ಲಂಘನೆಗಾಗಿ ಹರ್ಮನ್‍ಪ್ರೀತ್‍ಗೆ ದಂಡ ವಿಧಿಸಲಾಗಿದೆ. ಮೊದಲು ಕ್ಯಾಚ್ ನೀಡಿ ಔಟಾದ ಹತಾಶೆಯಲ್ಲಿ ಬ್ಯಾಟ್‍ನಿಂದ ವಿಕೆಟ್ ಉರುಳಿಸಿದ್ದರು.
ಪಂದ್ಯದ ನಂತರ ಹರ್ಮನ್ ಪ್ರೀತ್ ಅಂಪೈರ್ ಮಾನದಂಡವನ್ನು ಪ್ರಶ್ನಿಸಿದ್ದರು. ಇದಕ್ಕಾಗಿ ಆಟಗಾರರ ನೀತಿ ಸಂಹಿತೆಯ ಆರ್ಟಿಕಲ್ 2.8ನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಪಂದ್ಯದಲ್ಲಿ ಅಂಪೈರ್ ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಹರ್ಮನ್‍ಪ್ರೀತ್‍ಗೆ ಮೊದಲ ತಪ್ಪಿಗಾಗಿ ಅವರ ಪಂದ್ಯದ ಶುಲ್ಕದ 25% ರಷ್ಟು ದಂಡ ವಿಧಿಸಲಾಯಿತು. ಅಲ್ಲದೇ ಒಂದು ಡಿಮೆರಿಟ್ ಅಂಕವನ್ನು ನೀಡಲಾಯಿತು. ಬಳಿಕ 2ನೇ ಹಂತದ ತಪ್ಪಿಗಾಗಿ ಪಂದ್ಯದ ಶುಲ್ಕದ 50% ರಷ್ಟು ದಂಡವನ್ನು ವಿಧಿಸಲಾಯಿತು. ಇದಕ್ಕಾಗಿ ಅವರು ಮೂರು ಡಿಮೆರಿಟ್ ಅಂಕಗಳನ್ನು ಪಡೆದರು.
ಎರಡು ಪಂದ್ಯಗಳ ಅಮಾನತಿನ ಕಾರಣದಿಂದಾಗಿ ಹರ್ಮನ್‍ಪ್ರೀತ್ 2023ರ ಏಷ್ಯನ್ ಗೇಮ್ಸ್‍ನ ಕ್ವಾರ್ಟರ್‍ಫೈನಲ್ ಮತ್ತು ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.