ಚುನಾವಣಾ ಬಾಂಡ್ ಸಮಯಾವಕಾಶ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿ ವಜಾ ; ಇಷ್ಟು ದಿನ ಏನು ಮಾಡುತಿದ್ರಿ, ನಾಳೆಯೊಳಗೆ ವಿವರ ಸಲ್ಲಿಸುವಂತೆ ಸುಪ್ರೀಂ ಆದೇಶ.!
ನವದೆಹಲಿ: ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯ ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೊರ್ಟ್ ವಜಾಗೊಳಿಸಿ, ನಾಳೆಯೊಳಗೆ ವಿವರ ಸಲ್ಲಿಸುವಂತೆ ಆದೇಶಿಸಿದೆ.
ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಗಡುವು ವಿಸ್ತರಿಸಲು ಎಸ್‌ಬಿಐ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಇಂದು ವಿಚಾರಣೆ ನಡೆಸಿತು. ಚುನಾವಣಾ ಬಾಂಡ್‌ಗಳ ವಿವರ ಸಲ್ಲಿಸಲು ಸಮಯಾವಕಾಶ ಕೋರಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಳೆದ 26 ದಿನಗಳಿಂದ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದೆ.
ಕಳೆದ ತಿಂಗಳು 15ರಂದು ರಾಜಕೀಯ ಪಕ್ಷಗಳ ರಹಸ್ಯ ನಿಧಿಯನ್ನು ಶಕ್ತಗೊಳಿಸುವ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು ಗೊತ್ತೇ ಇದೆ. ಪಕ್ಷಗಳು ಪಡೆದಿರುವ ಹಣದ ವಿವರ ಹಾಗೂ ನೀಡಿರುವ ದಾನಿಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಈ ತಿಂಗಳ ಮಾರ್ಚ್ 6ರೊಳಗೆ ನೀಡುವಂತೆ ಎಸ್‌ಬಿಐಗೆ ಪೀಠ ಆದೇಶಿಸಿತ್ತು. ಈ ತಿಂಗಳ 12ರೊಳಗೆ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸ್ಪಷ್ಟಪಡಿಸಲಾಗಿದೆ. ಈ ಆದೇಶಕ್ಕೆ ಇನ್ನಷ್ಟು ಕಾಲಾವಕಾಶ ಕೋರಿ ಎಸ್‌ಬಿಐ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
”ಕಳೆದ ತಿಂಗಳು ನೀಡಿದ್ದ ತೀರ್ಪಿನ ಪ್ರಕಾರ ದೇಣಿಗೆ ವಿವರಗಳನ್ನು ಬಹಿರಂಗಪಡಿಸುವಂತೆ ಆದೇಶಿಸಿದ್ದೇವೆ. ನೀವು ಈ ರೀತಿ ಹೆಚ್ಚುವರಿ ಸಮಯ ಕೇಳಿಕೊಂಡು ನಮ್ಮ ಬಳಿ ಬಂದಿರುವುದು ತುಂಬಾ ಗಂಭೀರವಾಗಿದೆ. ನಮ್ಮ ತೀರ್ಪು ಸ್ಪಷ್ಟವಾಗಿದೆ. ಕಳೆದ 26 ದಿನಗಳಲ್ಲಿ ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನಿಮ್ಮ ಅರ್ಜಿಯಲ್ಲಿ ಅಂತಹ ಯಾವುದೇ ಅಂಶಗಳಿಲ್ಲ” ಎಂದು ನ್ಯಾಯ ಪೀಠ ಪ್ರಶ್ನಿಸಿತು. ಕೂಡಲೇ ಚುನಾವಣಾ ಆಯೋಗಕ್ಕೆ ವಿವರ ನೀಡಬೇಕು ಎಂದು ಎಸ್‌ಬಿಐಗೆ ಸ್ಪಷ್ಟವಾಗಿ ತಿಳಿಸಿದೆ.