2008ರ ಮುಂಬೈಯ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿ ಅಜಮ್ ಚೀಮಾ ಸಾವು..!
ಲಷ್ಕರ್-ಎ-ತೊಯ್ಬಾ (Lashkar-e-Taiba) ನಾಯಕ, 2008ರ ಮುಂಬೈಯ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿ ಅಜಮ್ ಚೀಮಾ (Azam Cheema) ಪಾಕಿಸ್ತಾನದ ಫೈಸಲಾಬಾದ್ ನಗರದಲ್ಲಿ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. 2006ರ ಮುಂಬೈ ರೈಲು ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಆಗಿದ್ದ ಅಜಮ್ ಚೀಮಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಆತನಿಗೆ 70 ವರ್ಷ ವಯಸ್ಸಾಗಿತ್ತು.
ಅಜಮ್ ಚೀಮಾ 2008ರಲ್ಲಿ ಬಹವಾಲ್‌ಪುರದಲ್ಲಿ ಲಷ್ಕರ್ ಕಮಾಂಡರ್ ಆಗಿದ್ದ. ಆಗ ಅವನನ್ನು ಝಕಿ-ಉರ್-ರೆಹಮಾನ್-ಲಖ್ವಿಯ ಕಾರ್ಯಾಚರಣೆಯ ಸಲಹೆಗಾರನನ್ನಾಗಿ ನೇಮಿಸಲಾಗಿತ್ತು. ಆ ವರ್ಷ ಮುಂಬೈಯ ತಾಜ್ ಹೋಟೆಲ್ ಮೇಲೆ ನಡೆದ ದಾಳಿಯ ಸಂಚು ರೂಪಿಸುವಲ್ಲಿ ಈತ ಪ್ರಧಾನ ಪಾತ್ರ ವಹಿಸಿದ್ದ. ಆ ದಾಳಿಯಲ್ಲಿ ಸುಮಾರು 175 ಮಂದಿ ಮೃತಪಟ್ಟು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಘಟನೆಯಲ್ಲಿ ಮೃತಪಟ್ಟವರಲ್ಲಿ ಅಮೆರಿಕನ್ನರೂ ಸೇರಿದ್ದರು. ಹೀಗಾಗಿ ಭಯೋತ್ಪಾದಕರಿಗೆ ತರಬೇತಿ ನೀಡಿದ್ದಕ್ಕಾಗಿ ಈತ ಅಮೆರಿಕಗೂ ಬೇಕಾಗಿದ್ದ ವ್ಯಕ್ತಿಯಾಗಿದ್ದ.
ಇನ್ನು 2006ರಲ್ಲಿ ಮುಂಬೈಯಲ್ಲಿ ನಡೆದ ರೈಲು ಬಾಂಬ್ ಸ್ಫೋಟ ಪ್ರಕರಣಕ್ಕೂ ಈತನೇ ಮುಖ್ಯ ಸೂತ್ರಧಾರ ಎನ್ನಲಾಗಿದೆ. ಈ ಘಟನೆಯಲ್ಲಿ ಸುಮಾರು 188 ಮಂದಿ ಮೃತಪಟ್ಟು, 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈತನನ್ನು ಭೂಪಟ ತಜ್ಞ ಎಂದೇ ಕರೆಯಲಾಗುತ್ತಿತ್ತು. ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿದ್ದ ಈತ ಸದಾ 6 ಮಂದಿ ಅಂಗರಕ್ಷಕರೊಂದಿಗೆ ಓಡಾಡುತ್ತಿದ್ದ. ಭಯೋತ್ಪಾದಕರಿಗೆ ನಕ್ಷೆಯಲ್ಲಿ ಭಾರತದ ಪ್ರಮುಖ ಸ್ಥಳಗಳನ್ನು ನೋಡಲು ಕಲಿಸಿದ್ದ ಈತ ಸ್ಯಾಟ್‌ಲೈಟ್ ಫೋನ್ ಮೂಲಕ ಪಾಕಿಸ್ತಾನದಲ್ಲಿಯೇ ಕುಳಿತು ಉಗ್ರರಿಗೆ ಸೂಚನೆ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರ ಪೈಕಿ ಒಬ್ಬೊಬ್ಬರೇ ಸಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪಾಕ್ ನೆಲದಲ್ಲಿ ಲಷ್ಕರ್ ಭಯೋತ್ಪಾದಕರು ನಿಗೂಡವಾಗಿ ಸಾವನ್ನಪ್ಪಿದ್ದರು. ಇದು ಪಾಕಿಸ್ತಾನದ ತಲೆ ನೋವಿಗೆ ಕಾರಣವಾಗಿದೆ. ಈ ಹತ್ಯೆಗಳ ಹಿಂದೆ ಭಾರತದ ಕೈವಾಡವಿದೆ ಎಂದೂ ಅದು ಆರೋಪಿಸಿದೆ. ಆದರೆ ಭಾರತ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಚೀಮಾ ಅಂತ್ಯಕ್ರಿಯೆಯನ್ನು ಫೈಸಲಾಬಾದ್‌ನ ಮಲ್ಖಾನ್‌ವಾಲಾದಲ್ಲಿ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
ಪಾಕಿಸ್ತಾನದಲ್ಲೇ 306 ಉಗ್ರ ದಾಳಿ; 693 ಮಂದಿ ಸಾವು! ʼಉಗ್ರರ ಸ್ವರ್ಗ’ ಎನಿಸಿರುವ ಪಾಕಿಸ್ತಾನದಲ್ಲಿ ಉಗ್ರ ಕೃತ್ಯಗಳು ಹೆಚ್ಚಾಗತೊಡಗಿವೆ. 2023ರಲ್ಲಿ ಪಾಕಿಸ್ತಾನದಲ್ಲಿನ ಭಯೋತ್ಪಾದನಾ ಕೃತ್ಯಗಳಲ್ಲಿ ಶೇ. 17ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಒಟ್ಟು 306 ಉಗ್ರ ದಾಳಿಗಳು ನಡೆದಿದ್ದು, 693 ಜನರು ಮೃತಪಟ್ಟಿದ್ದಾರೆ. ಒಟ್ಟು ಉಗ್ರ ಚಟುವಟಿಕೆಗಳ ಪೈಕಿ ನಿಷೇಧಿತ ಸಂಘಟನೆಗಳಾದ ಪಾಕಿಸ್ತಾನಿ ತಾಲಿಬಾನ್, ಇಸ್ಲಾಮಿಕ್ ಸ್ಟೇಟ್ ಖೋರಾಸನ್, ಬಲೂಚಿಸ್ತಾನ್ ಲಿಬರೇಷನ್ ಆರ್ಮಿಗಳಿಂದ ಶೇ. 82ರಷ್ಟು ಕೊಡುಗೆ ಇದೆ ಎಂದು ವರದಿಯೊಂದು ತಿಳಿಸಿದೆ. 23 ಆತ್ಮಹತ್ಯಾ ಬಾಂಬ್ ದಾಳಿಗಳು ಸೇರಿದಂತೆ ಒಟ್ಟು 306 ಭಯೋತ್ಪಾದಕ ದಾಳಿಗಳಲ್ಲಿ 330 ಭದ್ರತಾ ಸಿಬ್ಬಂದಿ, 260 ನಾಗರಿಕರು ಮತ್ತು 103 ಉಗ್ರಗಾಮಿಗಳು ಮೃತರಾಗಿದ್ದಾರೆ. 1,124 ಮಂದಿ ಗಾಯಗೊಂಡಿದ್ದಾರೆ.