- ಅಂತಾರಾಷ್ಟ್ರೀಯ
- 9:13 ಫೂರ್ವಾಹ್ನ
- ಜನವರಿ 6, 2023
20 ಕೋಟಿ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸ ಲೀಕ್

ವಾಷಿಂಗ್ಟನ್: ಸುಮಾರು 20 ಕೋಟಿಗೂ ಅಧಿಕ ಟ್ವಿಟ್ಟರ್ (Twitter) ಬಳಕೆದಾರರ ಇ-ಮೇಲ್ ವಿಳಾಸ (Email Addresses) ಸೋರಿಕೆಯಾಗಿರುವುದಾಗಿ (Leaked) ವರದಿಯಾಗಿದೆ.
ಹ್ಯಾಕರ್‌ಗಳು (Hackers) 20 ಕೋಟಿಗೂ ಅಧಿಕ ಟ್ವಿಟ್ಟರ್ ಬಳಕೆದಾರರ ಇ-ಮೇಲ್ ವಿಳಾಸವನ್ನು ಕದ್ದು, ಆನ್‌ಲೈನ್ ಹ್ಯಾಕಿಂಗ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಭದ್ರತಾ ಸಂಶೋಧಕರು ತಿಳಿಸಿದ್ದಾರೆ.
ಈ ಬಗ್ಗೆ ಇಸ್ರೇಲ್‌ನ ಸೈಬರ್ ಭದ್ರತೆ ಮೇಲ್ವಿಚಾರಣಾ ಸಂಸ್ಥೆ ಹಡ್ಸನ್ ರಾಕ್‌ನ ಸಹ ಸಂಸ್ಥಾಪಕ ಅಲೋನ್ ಗಾಲ್ ತಮ್ಮ ಲಿಂಕ್ಡ್ಇನ್‌ನಲ್ಲಿ ತಿಳಿಸಿದ್ದು, ದುರದೃಷ್ಟವಶಾತ್ ಇಂತಹ ದೊಡ್ಡ ಪ್ರಮಾಣದ ಹ್ಯಾಕಿಂಗ್‌ಗೆ ನಿಗದಿತ ಫಿಶಿಂಗ್ ಹಾಗೂ ಡಾಕ್ಸಿಂಗ್ ಕಾರಣವಾಗಿದೆ. ಇದು ನಾನು ನೋಡಿದ ಅತ್ಯಂತ ದೊಡ್ಡ ಸೋರಿಕೆಗಳಲ್ಲಿ ಒಂದಾಗಿದೆ ಎಂದು ಬರೆದಿದ್ದಾರೆ.
ಗಾಲ್ ಈ ಬಗ್ಗೆ ಮೊದಲ ಬಾರಿ ಕಳೆದ ವರ್ಷ ಡಿಸೆಂಬರ್ 24 ರಂದು ವರದಿಯನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ಟ್ವಿಟ್ಟರ್ ಯಾವುದೇ ರೀತಿಯ ಪ್ರತಿಕ್ರಿಯೆನ್ನು ನೀಡಿರಲಿಲ್ಲ. ಟ್ವಿಟ್ಟರ್ ಇಲ್ಲಿಯವರೆಗೆ ಇ-ಮೇಲ್ ಸೋರಿಕೆ ಬಗ್ಗೆ ಕ್ರಮ ತೆಗೆದುಕೊಂಡಿದೆಯೇ ಅಥವಾ ಇಲ್ಲವೇ ಎಂಬುದು ಕೂಡಾ ಇನ್ನೂ ಸ್ಪಷ್ಟವಾಗಿಲ್ಲ.
ವರದಿಗಳ ಪ್ರಕಾರ, ಬುಧವಾರ ಟ್ವಿಟ್ಟರ್ ಬಳಕೆದಾರರ ಇ-ಮೇಲ್‌ಗಳು ಹ್ಯಾಕರ್ ಫೋರಂನ ಸ್ಕ್ರೀನ್ ಶಾಟ್‌ಗಳ ರೂಪದಲ್ಲಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಕೃತ್ಯದ ಹಿಂದಿನ ಹ್ಯಾಕರ್‌ಗಳ ಗುರುತು ಅಥವಾ ಸ್ಥಳದ ಬಗ್ಗೆ ಸುಳಿವು ಸಿಕ್ಕಿಲ್ಲ. ಇ-ಮೇಲ್ ಸೋರಿಕೆ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕಿಂತಲೂ ಮೊದಲೇ ನಡೆದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.