ರಾಜ್ಯದಲ್ಲಿ 195 ಬರ ಪೀಡಿತ ತಾಲ್ಲೂಕುಗಳು: ಸರ್ಕಾರದಿಂದ ಅಧಿಕೃತ ಘೋಷಣೆ!
ಬೆಂಗಳೂರು, (ಸೆಪ್ಟೆಂಬರ್ 14) : ರಾಜ್ಯ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸಿನಂತೆ ಸರ್ಕಾರವು ರಾಜ್ಯದ 195 ತಾಲೂಕುಗಳು ಬರ ಪೀಡಿತ ಎಂದು ಅಧಿಕೃತವಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಕೇಂದ್ರ ಸರ್ಕಾರದ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳ ಅನ್ವಯ ಒಟ್ಟು 195 ಬರ ತಾಲ್ಲೂಕುಗಳು ಎಂದು ಘೋಷಿಸಲಾಗಿದೆ.
ಜಿಲ್ಲಾಧಿಕಾರಿಗಳಿಂದ ಬೆಳೆಹಾನಿಯ ಸಮೀಕ್ಷೆಯ ವರದಿಯ ಅನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದೆ ಎಂದು ಹೇಳಿದೆ. ಇನ್ನೂ 195 ತಾಲ್ಲೂಕುಗಳ ಪೈಕಿ 161 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕು ಹಾಗೂ 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕು ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದೇ ಮೊದಲು ಅಲ್ಲಿಯವರೆಗೂ ಘೋಷಿಸಿ ಆದೇಶಿಸಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಬರ ನಿರ್ವಹಣೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸೂಚಿಸಿದ್ದು, ಕಾಲ ಕಾಲಕ್ಕೆ ಎಸ್ಡಿಆರ್ಎಫ್, ಎನ್ಡಿಆರ್ಎಫ್ ನಿಯಮಗಳ ಅನ್ವಯ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ನಿನ್ನೆ(ಸೆಪ್ಟೆಂಬರ್ 13) ವಿಧಾನಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಮಳೆಯಿಂದ ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿನ ಬರ ಪರಿಸ್ಥಿತಿಯ ಬಗ್ಗೆ ನಡೆಸಿದ ವಿಸ್ತೃತ ಸಮೀಕ್ಷೆಯ ಮಾಹಿತಿಯ ವರದಿ ಪರಿಶೀಲಿಸಲಾಯಿತು. ಬರ ಪೀಡಿತ ಎಂದು ಘೋಷಿಸುವ ಸಂಬಂಧ ಕೇಂದ್ರದ ಮಾನದಂಡದ ಮಾರ್ಗಸೂಚಿಯ ಅಡಿಯಲ್ಲಿ ಬರುವ 161 ತಾಲ್ಲೂಕು ಸೇರಿದಂತೆ ಮಳೆಯ ಕೊರತೆ ಇದ್ದರೂ “ಸಾಧಾರಣ” ಬರ ಸ್ಥಿತಿ ಇರುವ 34 ತಾಲ್ಲೂಕುಗಳನ್ನು ಸಹ ಬರ ಪೀಡಿತ ಎಂದು ಘೋಷಿಸುವಂತೆ ರಾಜ್ಯ ಸಚಿವ ಸಂಪುಟಕ್ಕೆ ಶಿಫಾರಸು ಮಾಡಿತ್ತು.