19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ
21 ವರ್ಷದ ಸಂಜು ಅಲಿಯಾಸ್ ಸಲೀಂ ಎಂಬಾತನನ್ನು ಹರ್ಯಾಣದಲ್ಲಿ ತನ್ನ ಗರ್ಭಿಣಿ ಗೆಳತಿಯನ್ನು ಕೊಲೆ ಮಾಡಿ ಶವವನ್ನು ಹೂತಿಟ್ಟ ಆರೋಪದ ಮೇಲೆ ಬಂಧಿಸಲಾಗಿದೆ.
ದೆಹಲಿ: ದೆಹಲಿಯ ಸೋನಿ ಎಂಬ 19 ವರ್ಷದ ಯುವತಿಯನ್ನು ಆಕೆಯ ಪ್ರಿಯಕರ ಸಲೀಂ ಮತ್ತು ಆತನ ಇಬ್ಬರು ಸಹಚರರು ಕೊಂದು ಹೂತು ಹಾಕಿದ್ದಾರೆ. ಆಕೆ ಆತನಿಂದ ಗರ್ಭಿಣಿಯಾದ ನಂತರ ಮದುವೆಯಾಗಲು ಒತ್ತಾಯಿಸಿದ್ದಳು. ಆದರೆ, ಆತನಿಗೆ ಆಕೆಯನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸಿದ್ದ.
ಪಶ್ಚಿಮ ದೆಹಲಿಯ ನಂಗ್ಲೋಯ್ ನಿವಾಸಿಯಾಗಿರುವ ಸೋನಿ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದರು. ಆಗಾಗ ಆಕೆ ಮತ್ತು ಸಲೀಂ ಇಬ್ಬರೂ ಇದ್ದ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು. ಎನ್‌ಡಿಟಿವಿ ವರದಿಯ ಪ್ರಕಾರ, ಸಂಜು ಎಂದು ಹೇಳಿಕೊಂಡಿದ್ದ ಸಲೀಂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ.
ಸೋನಿಯ ಕುಟುಂಬದವರ ಪ್ರಕಾರ, ಆಕೆಗೆ ಪ್ರಿಯಕರ ಇದ್ದಾನೆ ಎಂಬುದು ಅವರಿಗೆ ತಿಳಿದಿತ್ತು ಆದರೆ, ಆಕೆ ಯಾರೊಂದಿಗೆ ಮಾತನಾಡುತ್ತಿದ್ದಾಳೆ ಎಂದು ಕೇಳಿದಾಗ, ಸೋನಿ ಆಗಾಗ ತಮಾಷೆ ಮಾಡುತ್ತಿದ್ದಳು, ತಾನು ದೆವ್ವದೊಂದಿಗೆ ಮಾತನಾಡುತ್ತಿದ್ದೇನೆ ಎಂದು ಹೇಳುತ್ತಿದ್ದಳು. ಸೋನಿ 7 ತಿಂಗಳ ಗರ್ಭಿಣಿಯಾಗಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆದರೆ, ಈ ವಿಷಯ ಆಕೆಯ ಮನೆಯವರಿಗೆ ಗೊತ್ತಿರಲಿಲ್ಲ ಎನ್ನಲಾಗಿದೆ.
ಸಲೀಂ ತನ್ನನ್ನು ಮದುವೆಯಾಗುವಂತೆ ಸೋನಿ ಒತ್ತಾಯಿಸುತ್ತಿದ್ದಳು. ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಇಷ್ಟವಿರಲಿಲ್ಲ. ಆದರೆ ಸಲೀಮ್ ಒಪ್ಪಿಗೆ ನೀಡಿರಲಿಲ್ಲ ಮತ್ತು ಆಕೆಯು ಗರ್ಭಪಾತ ಮಾಡಿಕೊಳ್ಳಬೇಕೆಂದು ಬಯಸಿದ್ದರು. ಇದು ಇಬ್ಬರ ನಡುವೆ ಆಗಾಗ ವಾದಗಳಿಗೆ ಕಾರಣವಾಗಿತ್ತು.
ಕೊಲೆಯಾದ ದಿನ, ಸೋನಿ ಸಲೀಂನನ್ನು ಭೇಟಿಯಾಗಲು ಕೆಲವು ಸಾಮಾನುಗಳೊಂದಿಗೆ ತನ್ನ ಮನೆಯಿಂದ ಹೊರಟು ಹೋಗಿದ್ದಳು. ಅವನು ತನ್ನ ಇಬ್ಬರು ಸಹಚರರೊಂದಿಗೆ ಅವಳನ್ನು ಹರಿಯಾಣದ ರೋಹ್ಟಕ್‌ಗೆ ಕರೆದೊಯ್ದನು. ಅಲ್ಲಿ ಅವರೆಲ್ಲ ಸೇರಿ ಅವಳನ್ನು ಕೊಂದು ಶವವನ್ನು ಹೂತು ಹಾಕಿದರು ಎಂದು ವರದಿಯಾಗಿದೆ.
ಅಕ್ಟೋಬರ್ 22 ರಂದು ಸಂತ್ರಸ್ತೆಯ ಸಹೋದರನಿಂದ ದೂರು ಸ್ವೀಕರಿಸಿದಾಗ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ತನ್ನ ಸಹೋದರಿಯೊಂದಿಗೆ ಸ್ನೇಹ ಬೆಳೆಸಿದ ವ್ಯಕ್ತಿಯೊಬ್ಬ ಆಕೆಯ ನಾಪತ್ತೆಯಲ್ಲಿ ಭಾಗಿಯಾಗಿರಬಹುದು ಎಂದು ಅವರು ಶಂಕಿಸಿದ್ದಾರೆ.
ದೂರುಗಳನ್ನು ಸ್ವೀಕರಿಸಿದ ಕೂಡಲೇ, ಕೊಲೆಯ ತನಿಖೆಗಾಗಿ ದೆಹಲಿ ಪೊಲೀಸರ ಬಹು ತಂಡಗಳನ್ನು ರಚಿಸಿತ್ತು. ಈ ವೇಳೆ ಮಹಿಳೆಯ ಫೋನ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿತ್ತು. ದೆಹಲಿ ಪೊಲೀಸರು ಸಂಜು ಮತ್ತು ಪಂಕಜ್ ಅವರನ್ನು ಇಲ್ಲಿಯವರೆಗೆ ಬಂಧಿಸಿದ್ದಾರೆ ಮತ್ತು ಅವರು ಗರ್ಭಿಣಿಯಾಗಿದ್ದ 19 ವರ್ಷದ ಯುವತಿಯನ್ನು ಕೊಂದು ಶವವನ್ನು ಹೂತಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳು ವಿಚಾರಣೆಯ ವೇಳೆ, ಅಕ್ಟೋಬರ್ 21 ರಂದು ಕಾರನ್ನು ಬಾಡಿಗೆಗೆ ತೆಗೆದುಕೊಂಡು ಸಂತ್ರಸ್ತೆಯನ್ನು ಆಕೆಯ ಕೆಲವು ವಸ್ತುಗಳ ಜೊತೆಗೆ ಕರೆದುಕೊಂಡು ಹೋಗಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾನೆ.
ತನಿಖಾ ಅಧಿಕಾರಿಗಳು ಹೇಳುವ ಪ್ರಕಾರ ಯುವತಿ, ಸಂಜುನನ್ನು ಮದುವೆಯಾಗಲು ಬಯಸಿದ್ದಳು ಎಂದು ಶಂಕಿಸಿದ್ದಾರೆ. ಆದರೆ, ಸಂಜು ಮಾತ್ರ ಇನ್ನೂ ಸ್ವಲ್ಪ ಸಮಯ ಕೇಳುತ್ತಿದ್ದ. ಪೋಲೀಸರ ಪ್ರಕಾರ, ಕರ್ವಾ ಚೌತ್ ದಿನದಂದು ಸಂತ್ರಸ್ಥೆ ಉಪವಾಸ ಇರಿಸಿಕೊಂಡಿದ್ದಳು. ಈ ವೇಳೆ ಸಂಜು ಜೊತೆ ಈಕೆಯ ಗಲಾಟೆಯಾಗಿದೆ. ಬಳಿಕ ಇಬ್ಬರೂ ಭೇಟಿಯಾಗಲು ನಿರ್ಧಾರ ಮಾಡಿದ್ದರು.
ಗಲಾಟೆ ನಡೆದ ಬಳಕ ಸಂಜು ತನ್ನ ಸ್ನೇಹಿತರಾದ ಪಂಕಜ್ ಹಾಗೂ ರಿತಿಕ್‌ಗೆ ಕರೆ ಮಾಡಿ, ಲಾಂಗ್ ಡ್ರೈವ್‌ಗೆ ಹೋಗಬೇಕು ಒಂದು ಕಾರ್ ಅರೇಂಜ್ ಮಾಡುವಂತೆ ಕೇಳಿಕೊಂಡಿದ್ದಾನೆ. ಅವರೆಲ್ಲರೂ ಕಾರನ್ನು ಹತ್ತಿ ಹರಿಯಾಣದ ರೋಹ್ಟಕ್ ಕಡೆಗೆ ಪ್ರಯಾಣ ಮಾಡಿದ್ದಾರೆ. ನಂತರ ಸಂತ್ರಸ್ತೆಯನ್ನು ಕೊಂದು ಆಕೆಯ ದೇಹವನ್ನು ರೋಹ್ಟಕ್ ಜಿಲ್ಲೆಯ ಮದೀನಾದ ನಿರ್ಜನ ಪ್ರದೇಶದಲ್ಲಿ ನಾಲ್ಕು ಅಡಿ ಆಳದ ಗುಂಡಿಯ ಅಡಿಯಲ್ಲಿ ಹೂತು ಹಾಕಿದರು ಎಂದು ಪ್ರಾಥಮಿಕ ತನಿಖೆಯ ಪ್ರಕಾರ ಪೊಲೀಸರು ತಿಳಿಸಿದ್ದಾರೆ.
19 ವರ್ಷದ ಸಂತ್ರಸ್ತೆಯ ಮೃತದೇಹವು ಮದೀನಾದ ನಿರ್ಜನ ಪ್ರದೇಶದಲ್ಲಿನ ಹಳ್ಳದಿಂದ ಪತ್ತೆಯಾಗಿದೆ. ಪ್ರಕರಣದ ಮೂರನೇ ಆರೋಪಿ ರಿತಿಕ್‌ಗಾಗಿ ಪೊಲೀಸರು ಹುಡುಕುತ್ತಿದ್ದಾರೆ ಮತ್ತು ಸಂತ್ರಸ್ತೆ ಗರ್ಭಿಣಿ ಎಂದು ಕುಟುಂಬದ ಕೆಲವರು ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.