ಮಗಳ ಮದುವೆಗೆಂದು ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ 18 ಲಕ್ಷ ರೂ. ಹಣ ತಿಂದು ಹಾಕಿದ ಗೆದ್ದಲು..!
ಮೊರಾದಾಬಾದ್: ಇದೊಂದು ಆಶ್ಚರ್ಯಚಕಿತಗೊಳಿಸುವ, ಆಘಾತಕಾರಿ (shocking News) ಘಟನೆ. ನಿಮ್ಮ ಹಣ ಸೇಫ್ ಆಗಿರುತ್ತದೆ ಎಂದು ನಂಬಿ ಬ್ಯಾಂಕ್ ಲಾಕರ್‌ನಲ್ಲಿ (Bank locker) ಇಡುವವರು ನೀವಾಗಿದ್ದರೆ ಇದನ್ನೊಮ್ಮೆ (viral news) ಓದಿಬಿಡಿ.
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ತಮ್ಮ ಮಗಳ ಮದುವೆಗಾಗಿ ತೆಗೆದಿರಿಸಿದ್ದ 18 ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್ ಲಾಕರ್‌ನಲ್ಲಿ ಮಹಿಳೆಯೊಬ್ಬರು ಇಟ್ಟಿದ್ದರು. ಹಲವು ದಿನಗಳ ಬಳಿಕ ಲಾಕರ್ ತೆಗೆದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಅಷ್ಟೂ ಹಣವನ್ನು ಗೆದ್ದಲು ತಿಂದು ಮುಗಿಸಿತ್ತು! ಬ್ಯಾಂಕ್ ಆಫ್ ಬರೋಡಾದ ಶಾಖೆಯಲ್ಲಿ ಈ ಘಟನೆ ನಡೆದಿದೆ.
ಅಲ್ಕಾ ಪಾಠಕ್ ಎಂಬವರು ಬ್ಯಾಂಕ್ ಆಫ್ ಬರೋಡಾದ ರಾಮಗಂಗಾ ವಿಹಾರ್ ಶಾಖೆಯ ಲಾಕರ್‌ನಲ್ಲಿ ಚಿನ್ನಾಭರಣಗಳ ಜೊತೆಗೆ ಹಣವನ್ನು ಇರಿಸಿದ್ದರು. ಅವರು ತಮ್ಮ ಮಗಳ ಮದುವೆಗಾಗಿ ಈ ಹಣವನ್ನು ಉಳಿಸಿದ್ದರು. ಕೆಲವು ತಿಂಗಳ ಬಳಿಕ ಹಣ ತೆಗೆಯಲು ಬ್ಯಾಂಕ್‌ಗೆ ಹೋದ ಮಹಿಳೆ ಇದನ್ನು ನೋಡಿ ತಮ್ಮ ಜೀವಮಾನದ ಶಾಕ್‌ಗೆ ಒಳಗಾದರು. ಸದ್ಯ ಬ್ಯಾಂಕ್ ಅಧಿಕಾರಿಗಳಿಂದ ಈ ವಿಚಾರದಲ್ಲಿ ತನಿಖೆ ನಡೆದಿದೆ.
ಉದಯಪುರದಲ್ಲಿಯೂ ಇದೇ ರೀತಿಯ ಗೆದ್ದಲಿನ ಹಾವಳಿಯ ಘಟನೆ ವರದಿಯಾಗಿದೆ. ಇದೇ ಫೆಬ್ರವರಿಯಲ್ಲಿ ಉದಯಪುರದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಶಾಖೆಯಲ್ಲಿ ಲಾಕರ್‌ನಲ್ಲಿ ಇರಿಸಲಾಗಿದ್ದ 2.15 ಲಕ್ಷ ರೂ.ಗಳನ್ನು ಗೆದ್ದಲುಗಳು ನಾಶಪಡಿಸಿದ ಘಟನೆ ನಡೆದಿತ್ತು. ಹಣದ ಮಾಲೀಕರಾದ ಸುನೀತಾ ಮೆಹ್ತಾ ಅವರು 2 ಲಕ್ಷ ರೂ.ಗಳನ್ನು ಬಟ್ಟೆಯ ಚೀಲದಲ್ಲಿ ಮತ್ತು ಉಳಿದ ಹಣವನ್ನು ಬ್ಯಾಗ್‌ನ ಹೊರಗೆ ಇಟ್ಟಿದ್ದರು.
ಚೀಲವನ್ನು ತೆರೆದಾಗ, ಹಣವನ್ನು ಗೆದ್ದಲು ತಿಂದಿರುವುದನ್ನು ಗಮನಿಸಿದರು. ಬ್ಯಾಂಕ್‌ನ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ತನಿಖೆ ಹಾಗೂ ಸಮಸ್ಯೆಯ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.