ಮೊದಲ ಪಂದ್ಯದಲ್ಲೇ 155.8 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆ ಬರೆದ ಮಯಾಂಕ್ ಯಾದವ್.!
ಮಯಾಂಕ್ ಯಾದವ್, ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಯಾದ ಹೆಸರು. ಆಡಿದ ಮೊದಲ ಪಂದ್ಯದಲ್ಲೇ ವಿಶ್ವಕ್ರಿಕೆಟ್‌ನ ಗಮನ ಸೆಳೆದಿರುವ 21 ವರ್ಷದ ಈ ಹುಡುಗ, ಐಪಿಎಲ್‌ನ ಸೆನ್ಸೇಷನ್ ಆಗಿದ್ದಾರೆ.ಶನಿವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲ್ಲಲು ಪ್ರಮುಖ ಕಾರಣ, ಮಯಾಂಕ್ ಯಾದವ್ ಅವರ ಅತ್ಯುತ್ತಮ ಬೌಲಿಂಗ್. 4 ಓವರ್ ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದ ಮಯಾಂಕ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಐಪಿಎಲ್ 2024ರ ಆವೃತ್ತಿಯಲ್ಲಿ ಅತಿ ವೇಗದ ಎಸೆತವನ್ನು ಬೌಲಿಂಗ್ ಮಾಡಿ ದಾಖಲೆ ಮಾಡಿದರು.
ಪಂಜಾಬ್‌ನ ಜಾನಿ ಬೈರ್‌ಸ್ಟೋವ್ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಅವರ ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಗಂಟೆಗೆ 147 ಕಿ.ಮೀ ವೇಗದಲ್ಲಿ ಬೌಲಿಂಗ್ ಆರಂಭಿಸಿದ ಅವರು ಗಂಟೆಗೆ 155.8 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ದಾಖಲೆ ಬರೆದರು.
ಮೂರು ವರ್ಷದಿಂದ ಬೆಂಬಲ
ಲಕ್ನೋ ಸೂಪರ್ ಜೈಂಟ್ಸ್ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ವೇಗದ ಬೌಲರ್ ಮಯಾಂಕ್‌ಗೆ ಬೆಂಬಲ ನೀಡಿದರು. ಮಾಕ್ ವುಡ್ ಈ ಬಾರಿ ಐಪಿಎಲ್‌ನಿಂದ ಹೊರಗುಳಿದರೂ ತಂಡದಲ್ಲಿ ಉತ್ತಮ ವೇಗಿಗಳು ಇದ್ದಾರೆ ಎಂದು ಹೇಳಿದ್ದರು. ಜೂನ್ 17, 2002 ರಂದು ಜನಿಸಿದ ಮಯಾಂಕ್ ಯಾದವ್ ದೆಹಲಿ ತಂಡಕ್ಕಾಗಿ ಆಡುವ 21 ವರ್ಷದ ವೇಗದ ಬೌಲರ್. ಮಂಡಿರಜ್ಜು ಗಾಯ ಸೇರಿದಂತೆ ಹಲವು ಸವಾಲುಗಳನ್ನು ಮೀರಿ ನಿಂತು ಐಪಿಎಲ್ ಪಂದ್ಯಾವಳಿಯಲ್ಲಿ ಮೊದಲ ಪಂದ್ಯವನ್ನು ಆಡಿದರು
ಮಯಾಂಕ್ ಯಾದವ್ ಲಕ್ನೋ ಸೂಪರ್ ಜೈಂಟ್ಸ್ ಹುಡುಕಿದ ಬೌಲರ್. ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡಕ್ಕಾಗಿ ಆಡುವ ಅವರು 51 ವಿಕೆಟ್ ಪಡೆದಿದ್ದಾರೆ. ಮೂರು ವರ್ಷಗಳ ಹಿಂದೆಯೇ ಮಯಾಂಕ್ ಯಾದವ್ ಲಕ್ನೋ ತಂಡವನ್ನು ಸೇರಿಕೊಂಡಿದ್ದರು ಮೊದಲ ಪಂದ್ಯ ಆಡಲು ಮೂರು ವರ್ಷ ಕಾಯಬೇಕಾಯಿತು.
ಕಳೆದ ವರ್ಷ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಐಪಿಎಲ್‌ನಿಂದ ಹೊರಗುಳಿದಿದ್ದರು. ಈ ಬಾರಿ ಗಾಯದ ಸಮಸ್ಯೆಯನ್ನು ಎದುರಿಸಿ ಫಿಟ್ ಆಗಿದ್ದು, ತಂಡಕ್ಕೆ ಮರಳಿದ್ದರು. ಮೊದಲ ಪಂದ್ಯದಲ್ಲೇ ಅವರು ತಮ್ಮ ಬೌಲಿಂಗ್ ಸಾಮರ್ಥ್ಯ ತೋರಿಸಿದ್ದಾರೆ. ಮಯಾಂಕ್ ಯಾದವ್ ಶೀಘ್ರದಲ್ಲೇ ಭಾರತ ತಂಡದಲ್ಲಿ ಆಡುವ ಸಾಧ್ಯತೆಗಳನ್ನು ಕೂಡ ತಳ್ಳಿಹಾಕುವಂತಿಲ್ಲ. ಅವರು ಈ ಮೊದಲಿನಿಂದಲೂ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರ ಆಯ್ಕೆಯ ಪಟ್ಟಿಯಲ್ಲಿದ್ದು ಯಾವುದೇ ಸಂದರ್ಭದಲ್ಲಾದರೂ ಭಾರತ ತಂಡಕ್ಕಾಗಿ ಆಡುವಂತೆ ಕರೆಬರುವ ಸಾಧ್ಯತೆ ಇದೆ.