128 ಗಂಟೆಗಳ ನಂತರ ಭೂಕಂಪ ಅವಶೇಷಗಳಡಿಯಿಂದ ಬದುಕಿ ಬಂದ 2 ತಿಂಗಳ ಮಗು!
![128 ಗಂಟೆಗಳ ನಂತರ ಭೂಕಂಪ ಅವಶೇಷಗಳಡಿಯಿಂದ ಬದುಕಿ ಬಂದ 2 ತಿಂಗಳ ಮಗು!](https://urtv24.com/wp-content/uploads/2023/02/pro.webp)
ಇಸ್ಲಾಂಬುಲ್: ಸಿರಿಯಾ (Syria Earthquake) ಮತ್ತು ಟರ್ಕಿಯಲ್ಲಿ (Turkey Earthquake) ಸಂಭವಿಸಿರುವ ಭೀಕರ ಭೂಕಂಪದಲ್ಲಿ ಇದುವರೆಗೂ 28,000 ಜನರು ಸಾವನ್ನಪ್ಪಿದ್ದು, 6,000 ಕಟ್ಟಡಗಳು ಕುಸಿದುಬಿದ್ದಿವೆ. ಕಳೆದ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದ ಟರ್ಕಿ ಸಂಪೂರ್ಣ ತತ್ತರಿಸಿದೆ. ಆದರೆ, ಈ ದುರಂತದಲ್ಲೂ ಅಚ್ಚರಿಯ ರೀತಿಯಲ್ಲಿ ಬದುಕುಳಿದವರ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಟರ್ಕಿಯ ಭೂಕಂಪದಲ್ಲಿ 128 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದರೂ ಬದುಕುಳಿದಿದ್ದ 2 ತಿಂಗಳ ಮಗುವೊಂದನ್ನು ರಕ್ಷಿಸಲಾಗಿದ್ದು, ಆ ಮಗುವಿನ ಅದೃಷ್ಟ ಮತ್ತು ರಕ್ಷಣಾ ಸಿಬ್ಬಂದಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
![index 12](https://urtv24.com/wp-content/uploads/2023/02/index-12.jpg)
ಶನಿವಾರ ದಕ್ಷಿಣ ಟರ್ಕಿಯಲ್ಲಿ 128 ಗಂಟೆಗಳ ನಂತರ ಭೂಕಂಪದ ಅವಶೇಷಗಳ ಅಡಿಯಿಂದ 2 ತಿಂಗಳ ಮಗುವನ್ನು ರಕ್ಷಿಸಲಾಗಿದೆ. ಆ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ತಕ್ಷಣ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಫೆಬ್ರವರಿ 6ರಂದು ಸಂಭವಿಸಿದ ಭಾರೀ ಭೂಕಂಪವು ಟರ್ಕಿಯನ್ನು ಹೈರಾಣಾಗಿಸಿದೆ. ಅದೆಷ್ಟೋ ಕುಟುಂಬಗಳೇ ಭೂಕಂಪಕ್ಕೆ ಸಿಲುಕಿ ಸಂಪೂರ್ಣವಾಗಿ ನಾಶವಾಗಿವೆ.
ಶನಿವಾರ ಮುಂಜಾನೆ ಟರ್ಕಿಯ ಆಗ್ನೇಯ ಆದಿಯಮಾನ್ ಪ್ರಾಂತ್ಯದಲ್ಲಿ ದಂಪತಿಯನ್ನು ರಕ್ಷಿಸಲಾಯಿತು. ಅದಕ್ಕೂ ಮೊದಲು ಟರ್ಕಿಯ ದಕ್ಷಿಣ ಹಟಾಯ್ ಪ್ರಾಂತ್ಯದಲ್ಲಿ 13 ವರ್ಷದ ಬಾಲಕನನ್ನು ಅವಶೇಷಗಳಿಂದ ರಕ್ಷಿಸಲಾಯಿತು. ಈ ಹಿಂದೆ, ಕಹ್ರಮನ್ಮರಸ್ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದ 120 ಗಂಟೆಗಳ ನಂತರ ಅಜರ್ಬೈಜಾನಿ ರಕ್ಷಣಾ ತಂಡವು 50 ವರ್ಷದ ಮಹಿಳೆಯನ್ನು ಕುಸಿದ ಕಟ್ಟಡದಿಂದ ಹೊರತೆಗೆದಿತ್ತು.