10,12ನೇ ತರಗತಿ ಶಿಕ್ಷಣದಲ್ಲಿ ಭಾರೀ ಬದಲಾವಣೆ: ಆರ್ಟ್ಸ್, ಕಾಮರ್ಸ್, ಸೈನ್ಸ್ ಬದಲು ಮಿಶ್ರ ವಿಷಯಗಳು

ನವದೆಹಲಿ: 9 ಮತ್ತು 10ನೇ ತರಗತಿ ಹಾಗೂ ಪಿಯು ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಈ ಸಂಬಂಧ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌ನ) ಅನ್ವಯ ಕರಡು ಪೂರ್ವ ವರದಿಯನ್ನು ಗುರುವಾರ ಬಿಡುಗಡೆ ಮಾಡಿದೆ. ವರದಿಯಲ್ಲಿನ ಅಂಶಗಳ ಬಗ್ಗೆ ಶಿಕ್ಷಣ ಸಂಸ್ಥೆಗಳು, ಪೋಷಕರು, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಇಸ್ರೋ ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್ ಅವರ ನೇತೃತ್ವದ 12 ತಜ್ಞರ ಸಮಿತಿ ಕೇಂದ್ರ ಸರ್ಕಾರದ ಸೂಚನೆ ಅನ್ವಯ ಈ ವರದಿ ಸಿದ್ಧಪಡಿಸಿ ಬಿಡುಗಡೆ ಮಾಡಿದೆ. 2005ರಲ್ಲಿ ಪಠ್ಯಕ್ರಮ ಚೌಕಟ್ಟನ್ನು ಬದಲಿಸಲಾಗಿತ್ತು. ಇದಾದ ನಂತರ ಈಗ ಮತ್ತೆ ಮಹತ್ವದ ಬದಲಾವಣೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಮುಂದಾಗಿದೆ.
ಏನೇನು ಬದಲಾವಣೆ?
- ಈ ಹಿಂದಿನ 10 ಪ್ಲಸ್ 2 ನೀತಿಯ ಬದಲಾಗಿ 5 ಪ್ಲಸ್ 3 ಪ್ಲಸ್ 3 ಪ್ಲಸ್ 3 ಪ್ಲಸ್ 4 ಪದ್ಧತಿ ಜಾರಿ ಮಾಡಬೇಕು. ಶಿಕ್ಷಣ ವ್ಯವಸ್ಥೆ ಪಠ್ಯಕ್ರಮ ಆಧರಿತ ಮತ್ತು ಶಿಕ್ಷಣ ಶಾಸ್ತ್ರೀಯ ಪದ್ಧತಿಯನ್ನು ಅನುಸರಿಸಬೇಕು.
- 11 ಮತ್ತು 12ನೇ ತರಗತಿಗಳಿಗೆ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಆಯೋಜಿಸಬೇಕು. ಇದರಿಂದ ವಿದ್ಯಾರ್ಥಿಗಳು ವಿಷಯಗಳ ಕುರಿತು ಸನ್ನದ್ಧರಾಗಿ ಪರೀಕ್ಷೆ ಎದುರಿಸಬಹುದು. ಅಂದರೆ ಸೆಮಿಸ್ಟರ್ ಮಾದರಿ ಅಳವಡಿಕೆ.
- 10 ಹಾಗೂ 12ನೇ ಕ್ಲಾಸಿನ ವಿದ್ಯಾರ್ಥಿಗಳ ಪರೀಕ್ಷಾ ಮೌಲ್ಯಮಾಪನದ ವೇಳೆ ಹಿಂದಿನ ತರಗತಿಯ ಅಂಕಗಳನ್ನು (10ನೇ ಕ್ಲಾಸಿಗೆ 9ನೇ ತರಗತಿ ಅಂಕ, 12ನೇ ಕ್ಲಾಸಿಗೆ 11ನೇ ತರಗತಿ ಅಂಕ) ಗಣನೆಗೆ ತೆಗೆದುಕೊಳ್ಳಬೇಕು.
- 11 ಮತ್ತು 12ನೇ ತರಗತಿಗೆ ಒಟ್ಟು 16 ವಿಷಯಗಳನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಿ, ಪರೀಕ್ಷೆ ಬರೆಯಬೇಕು.
- 11 ಹಾಗೂ 12ನೇ ತರಗತಿಯಲ್ಲಿ ಆಟ್ಸ್‌ರ್, ಕಾಮರ್ಸ್, ಸೈನ್ಸ್ ಎಂಬ 3 ವಿಭಾಗ ಬೇಡ. ಅದರ ಬದಲು ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.
- 9 ಹಾಗೂ 10ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ಈಗಿನ 5 ವಿಷಯದ ಬದಲು 8 ವಿಷಯದಲ್ಲಿ ಕಡ್ಡಾಯವಾಗಿ ಪಾಸಾಗಬೇಕು ಎಂಬ ನಿಯಮವನ್ನೂ ಜಾರಿಗೆ ತರುವ ನಿರೀಕ್ಷೆಯಿದೆ.
ಸಿಬಿಎಸ್‌ಇ: ಬಹುಆಯ್ಕೆ ಪ್ರಶ್ನೆಗಳಿಗೆ ಹೆಚ್ಚು ಆದ್ಯತೆ
ಸಿಬಿಎಸ್‌ಇ (CBSE)ತನ್ನ ವಾರ್ಷಿಕ ನಿರ್ಧಾರಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು, 2024ರಿಂದ ನಡೆಯುವ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಬಹುಆಯ್ಕೆಯ ಪ್ರಶ್ನೆಗಳಿಗೆ (multiple choice questions) ಹೆಚ್ಚು ಒತ್ತು ನೀಡಲು ನಿರ್ಧರಿಸಿದೆ. ಅಲ್ಲದೆ ಲಘು ಮತ್ತು ದೀರ್ಘ ಉತ್ತರ ಬರೆಯುವಂತಹ ಪ್ರಶ್ನೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹೊಸ ನಿರ್ಧಾರವನ್ನು 2020ರ ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗಿದೆ. ಈ ಹೊಸ ಮಾದರಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಬಹುದು. ನೂತನ ಶಿಕ್ಷಣ ನೀತಿಯ ಪ್ರಕಾರ ಶಿಕ್ಷಣ ಎಂಬುದು ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಮತ್ತು ಯೋಜನೆಯನ್ನು ವೃದ್ಧಿಸುವ ತರಬೇತಿಯಾಗಬೇಕು. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
10ನೇ ತರಗತಿಯಲ್ಲಿ ಶೇ.50ರಷ್ಟುಪ್ರಶ್ನೆಗಳು ಬಹುಆಯ್ಕೆಯ ಪ್ರಶ್ನೆಗಳಾಗಿರಲಿವೆ. ಈ ಹಿಂದೆ ಇದರ ಪ್ರಮಾಣ ಶೇ.40ರಷ್ಟಿತ್ತು. ಹಾಗೆಯೇ ಲಘು ಮತ್ತು ದೀರ್ಘ ಉತ್ತರದ ಪ್ರಶ್ನೆಗಳನ್ನು ಶೇ.40ರಷ್ಟಿಂದ ಶೇ.30ಕ್ಕೆ ಇಳಿಸಲಾಗಿದೆ. ಜೊತೆಗೆ 12ನೇ ತರಗತಿಯಲ್ಲಿ ಬಹುಆಯ್ಕೆಯ ಪ್ರಶ್ನೆಗಳ ಪ್ರಮಾಣವನ್ನು ಶೇ.40ಕ್ಕೆ ಏರಿಕೆ ಮಾಡಲಾಗಿದೆ.