10 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಳೆದ ವಾರ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಈ ಹಿಂದಿನ 2 ಪಟ್ಟಿಗಳಲ್ಲಿ 212 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು. ಇದೀಗ 10 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ.
ಮೂರನೇ ಪಟ್ಟಿಯಲ್ಲಿ ಯಾರಿಗೆಲ್ಲ ಬಿಜೆಪಿ ಟಿಕೆಟ್?
ಕ್ಷೇತ್ರ – ಅಭ್ಯರ್ಥಿ
- ಹುಬ್ಬಳ್ಳಿ ಧಾರವಾಡ ಸೆಂಟ್ರಲ್ – ಮಹೇಶ್ ಟೆಂಗಿನಕಾಯಿ
- ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ – ಉಮೇಶ್ ಶೆಟ್ಟಿ
- ಬೆಂಗಳೂರಿನ ಹೆಬ್ಬಾಳ ಕ್ಷೇತ್ರ – ಕಟ್ಟಾ ಜಗದೀಶ್
- ಮೈಸೂರಿನ ಕೃಷ್ಣರಾಜ ಕ್ಷೇತ್ರ – ಶ್ರೀವತ್ಸ
- ಹಗರಿಬೊಮ್ಮನಹಳ್ಳಿ ಕ್ಷೇತ್ರ – ಬಿ.ರಾಮಣ್ಣ
- ನಾಗಠಾಣ ಕ್ಷೇತ್ರ – ಸಂಜಯ್ ಐಹೊಳೆ
- ಸೇಡಂ ಕ್ಷೇತ್ರ – ರಾಜಕುಮಾರ ಪಾಟೀಲ್ಕೊ
- ಕೊಪ್ಪಳ ಕ್ಷೇತ್ರ – ಮಂಜುಳಾ ಅಮರೇಶ್
- ರೋಣ ಕ್ಷೇತ್ರ – ಕಳಕಪ್ಪ ಬಂಡಿ
- ಮಹದೇವಪುರ – ಮಂಜುಳಾ ಲಿಂಬಾಳಿ
ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿತ್ತು. 52 ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿತ್ತು. ಎರಡನೇ ಪಟ್ಟಿಯಲ್ಲಿ 23 ಮಂದಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಆರು ಮಂದಿ ಹಾಲಿ ಶಾಸಕರಿಗೆ ಎರಡನೇ ಪಟ್ಟಿಯಲ್ಲಿ ಅವಕಾಶ ನೀಡಿರಲಿಲ್ಲ. ಇದೀಗ ಮೂರನೇ ಪಟ್ಟಿಯಲ್ಲಿ 10 ಮಂದಿಗೆ ಟಿಕೆಟ್ ನೀಡುವುದರೊಂದಿಗೆ ಒಟ್ಟು 222 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾದಂತಾಗಿದೆ. 2 ಕ್ಷೇತ್ರಗಳ ಟಿಕೆಟ್ ಅನ್ನು (ಶಿವಮೊಗ್ಗ ನಗರ ಹಾಗೂ ಮಾನ್ವಿ) ಬಿಜೆಪಿ ಬಾಕಿ ಉಳಿಸಿಕೊಂಡಿದೆ.
ಈಶ್ವರಪ್ಪ ಪುತ್ರನಿಗೆ ಇನ್ನೂ ಸಿಕ್ಕಿಲ್ಲ ಟಿಕೆಟ್
ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಜತೆಗೆ ಮಾನ್ವಿ ಕ್ಷೇತ್ರದ ಟಿಕೆಟ್ ಅನ್ನೂ ಬಾಕಿ ಇರಿಸಿಕೊಂಡಿದೆ. ಶಿವಮೊಗ್ಗ ನಗರ ಕ್ಷೇತ್ರವನ್ನು ಈವರೆಗೆ ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಪ್ರತಿನಿಧಿಸುತ್ತಿದ್ದರು. ಇತ್ತೀಚೆಗಷ್ಟೇ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ, ತಮ್ಮ ಮಗ ಕಾಂತೇಶ್ಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ.