- ಅಂತಾರಾಷ್ಟ್ರೀಯ, ಕರಾವಳಿ
- 7:14 ಅಪರಾಹ್ನ
- ಜನವರಿ 8, 2023
10ನೇ ಕ್ಲಾಸ್ ಬಿಟ್ಟು ಮನೆ ಕೆಲಸ, ಬೀಡಿ ಕಟ್ಟುತ್ತಿದ್ದ ಹುಡುಗ ಈಗ ಅಮೆರಿಕದಲ್ಲಿ ನ್ಯಾಯಾಧೀಶ!

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ನ ಜಿಲ್ಲಾ ನ್ಯಾಯಾಧೀಶರಾಗಿ ಕೇರಳ ಮೂಲದ 51 ವರ್ಷದ ಸುರೇಂದ್ರನ್ ಕೆ ಪಟ್ಟೇಲ್ ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೆರಿಕದ ಅನೇಕ ಪ್ರಮುಖ ಹುದ್ದೆಗಳನ್ನು ಭಾರತೀಯರು ಅಲಂಕರಿಸುತ್ತಿರುವುದು ಹೊಸ ವಿಚಾರವಲ್ಲ. ಆದರೆ ಸುರೇಂದ್ರನ್ ಅವರು ಬೆಳೆದು ಬಂದ ಹಾದಿ, ಎಂತಹವರಿಗೂ ಸ್ಫೂರ್ತಿದಾಯಕ.
ಕಡುಬಡತನದ ಕುಟುಂಬದಲ್ಲಿ ಜನಿಸಿ, ಬೀಡಿ ಕಟ್ಟುತ್ತಾ, ಮನೆಗೆಲಸಗಳನ್ನು ಮಾಡಿ ಹಣ ಸಂಪಾದಿಸುತ್ತಲೇ ಕಷ್ಟಪಟ್ಟು ಶಿಕ್ಷಣ ಪೂರೈಸಿದ್ದ ಅವರು ಅಮೆರಿಕದಲ್ಲಿ ಯಶಸ್ಸು ಕಂಡಿದ್ದಾರೆ.

ಕೇರಳದ ಕಾಸರಗೋಡು ಮೂಲದವರಾದ ಸುರೇಂದ್ರನ್ ಬಡ ಕುಟುಂಬದಲ್ಲಿ ಹುಟ್ಟಿ ಬೆಳದವರು, ಈ ಬಗ್ಗೆ ಮಾತಾನಾಡುವ ಅವರು, “ನಾನು ಹತ್ತನೇ ತರಗತಿ ಮುಗಿದ ಬಳಿಕ ಶಾಲೆಗೆ ಹೋಗಲಿಲ್ಲ. ಏಕಂದರೆ ನನ್ನನ್ನು ಶಾಲೆಗೆ ಕಳುಹಿಸಲು ನನ್ನ ಕುಟುಂಬದ ಬಳಿ ಹಣವಿರಲಿಲ್ಲ. ಶಾಲೆಗೆ ಹೋಗದೇ ಬೀಡಿ ಕಟ್ಟುಗಳನ್ನು ರೋಲ್ ಮಾಡಲು ಹೋಗುತ್ತಿದ್ದೆ. ಮನೆ ಕೆಲಸಕ್ಕೆ ಅಲ್ಲಿ ಇಲ್ಲಿ ಹೋಗುತ್ತಿದ್ದೆ. ಹೀಗೆ ಹೋಗುತ್ತಿದ್ದಾಗ ನನ್ನ ಜೀವನದ ದೃಷ್ಟಿಕೋನ ದಿನ ಕಳೆದಂತೆ ಏನಾದರು ಮಾಡಬೇಕೆನ್ನುವ ಕಡೆಗೆ ವಾಲಿತು” ಎನ್ನುತ್ತಾರೆ.
ನನ್ನ ಮನೆಯ ಪಕ್ಕದವರು, ಊರಿನವರು ನನ್ನ ಶಿಕ್ಷಣಕ್ಕೆ ಸಹಾಯ ಮಾಡಿದರು. ಇದರಿಂದ ನಾನು ಕಾನೂನು ಪದವಿ ಶಿಕ್ಷಣವನ್ನು ಮುಗಿಸಲು ಸಾಧ್ಯವಾಯಿತು. ಓದುವ ಸಮಯದಲ್ಲಿ ಖರ್ಚಿಗಾಗಿ ಮನೆ ಕೆಲಸಕ್ಕೂ ಹೋಗುತ್ತಿದ್ದೆ. ಎಲ್ ಎಲ್ ಬಿ ಓದು ಮುಗಿಸಿದ ಬಳಿಕ ಭಾರತದಲ್ಲಿ ಕಾನೂನಿನ ಅಭ್ಯಾಸವನ್ನು ಮಾಡಿದ ಪರಿಣಾಮ ಇದು ನನಗೆ ಅಮೆರಿಕಾದಲ್ಲಿ ತುಂಬಾ ಸಹಾಯ ಮಾಡಿತು” ಎನ್ನುತ್ತಾರೆ ಸುರೇಂದ್ರನ್.
ನಾನು ಟೆಕ್ಸಾಸ್ ನಲ್ಲಿ ಈ ಸ್ಥಾನಕ್ಕಾಗಿ ಸ್ಪರ್ಧಿಸಿದಾಗ, ನನ್ನ ಉಚ್ಚಾರಣೆಯನ್ನು ಕೆಲ ಮಂದಿ ವ್ಯಂಗ್ಯವಾಡಿದರು. ನನ್ನ ಬಗ್ಗೆ ನಕಾರಾತ್ಮಕ ಪ್ರಚಾರ ಮಾಡಿದರು. ನನ್ನ ಪಕ್ಷ ಕೂಡ ನಾನು ಗೆಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಯಾರೂ ಕೂಡ ನಾನು ಇದನ್ನು ಸಾಧಿಸುತ್ತೇನೆ ಎಂದು ನಂಬಿರಲಿಲ್ಲ. ನಾನು ಎಲ್ಲರಿಗೂ ಮಾತು ಹೇಳುತ್ತೇನೆ, ಯಾರನ್ನೂ ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಬಿಡಬೇಡಿ, ನಿಮ್ಮ ಭವಿಷ್ಯವನ್ನು ನೀವೇ ನಿರ್ಧರಿಸಬೇಕಿರುವುದು ಎನ್ನುತ್ತಾರೆ ಸುರೇಂದ್ರನ್.