1ನೇ ಕ್ಲಾಸ್ ಪ್ರವೇಶಕ್ಕೆ 6 ವರ್ಷ: ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ
ನವದೆಹಲಿ (ಫೆಬ್ರವರಿ 23, 2023): 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿಯನ್ನು 6 ವರ್ಷಕ್ಕೆ ನಿಗದಿಪಡಿಸಲು ಕೇಂದ್ರ ಶಿಕ್ಷಣ ಸಚಿವಾಲಯವು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ, ಶಿಕ್ಷಣದ ತಳಹದಿ ಹಂತವು 3 ರಿಂದ 8 ವರ್ಷ ವಯಸ್ಸಿನವರೆಗೆ 5 ವರ್ಷ ಕಾಲ ಇರುತ್ತದೆ. ಇದು 3 ವರ್ಷಗಳ ಪ್ರೀಸ್ಕೂಲ್ ಶಿಕ್ಷಣ ಮತ್ತು ನಂತರ 1 ಮತ್ತು 2ನೇ ತರಗತಿಗಳನ್ನು ಒಳಗೊಂಡಿರುತ್ತದೆ.
‘ಈ ನೀತಿಗೆ ಅನುಗುಣವಾಗಿ ಶಾಲಾ ಪ್ರವೇಶಕ್ಕೆ (School Admission) ವಯಸ್ಸನ್ನು (Age) ಹೊಂದಾಣಿಕೆ ಮಾಡಬೇಕು. 6 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ 1 ನೇ ತರಗತಿಗೆ ಪ್ರವೇಶ ಒದಗಿಸಬೇಕು ಎಂದು ಸಚಿವಾಲಯವು (Ministry) ರಾಜ್ಯ ಸರ್ಕಾರಗಳು (State Governments) ಮತ್ತು ಕೇಂದ್ರಾಡಳಿತಗಳಿಗೆ (Union Territories) ನಿರ್ದೇಶಿಸಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ನೀತಿಯು ಪ್ರೀ-ಸ್ಕೂಲ್‌ನಿಂದ 2 ನೇ ತರಗತಿಯವರೆಗೆ ಮಕ್ಕಳ ತಡೆರಹಿತ ಕಲಿಕೆ ಮತ್ತು ಮಕ್ಕಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಎಲ್ಲ ಮಕ್ಕಳಿಗೆ 3 ವರ್ಷಗಳ ಗುಣಮಟ್ಟದ ಪ್ರೀಸ್ಕೂಲ್ ಶಿಕ್ಷಣ ನೀಡಿಕೆಯಿಂದ ಮಾತ್ರ ಇದನ್ನು ಸಾಧಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕದಲ್ಲಿ 2025-26ರಿಂದ ಜಾರಿ
ಕರ್ನಾಟಕದಲ್ಲಿ 2025-26ರಿಂದ 1ನೇ ತರಗತಿ ಪ್ರವೇಶಕ್ಕೆ 6 ವರ್ಷ ಆಗಿರಬೇಕು ಎಂಬ ನಿಯಮ ಜಾರಿಗೆ ಬರಲಿದೆ. 2023-24ರ ಶೈಕ್ಷಣಿಕ ಸಾಲಿನಲ್ಲೇ 1ನೇ ತರಗತಿ ಪ್ರವೇಶ ಬಯಸುವ ಮಕ್ಕಳಿಗೆ 6 ವರ್ಷ ಆಗಿರಬೇಕು ಎಂದು ಕಳೆದ ವರ್ಷ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಪೋಷಕರ ವಿರೋಧದ ಕಾರಣ ಇದರ ಜಾರಿಯನ್ನು 2025-26ಕ್ಕೆ ಮುಂದೂಡಲಾಗಿತ್ತು.
ಶಾಲಾ ಗ್ರಂಥಾಲಯಗಳಿಗೆ ಮೋದಿ ಎಕ್ಸಾಮ್ ವಾರಿಯರ್ಸ್ ಪುಸ್ತಕಕ್ಕೆ ಕ್ರಮ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬರೆದಿರುವ ‘ಎಕ್ಸಾಮ್ ವಾರಿಯರ್ಸ್’ ಪುಸ್ತಕವನ್ನು ಎಲ್ಲ ಶಾಲೆಯ ಗ್ರಂಥಾಲಯಗಳಲ್ಲಿ ಲಭ್ಯವಿರಿಸುವಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಶಿಕ್ಷಣ ಇಲಾಖೆ ಸೂಚಿಸಿದೆ ಎಂದು ಬುಧವಾರ ಮೂಲಗಳು ತಿಳಿಸಿವೆ. ಸಮಗ್ರ ಶಿಕ್ಷಣ ಅಡಿಯಲ್ಲಿನ ಎಲ್ಲ ಶಾಲೆಗಳಲ್ಲಿ ಪುಸ್ತಕವನ್ನು ಲಭ್ಯಗೊಳಿಸುವುದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಪ್ರಧಾನಿಯವರ ಗುರಿ ಹಾಗೂ ಬುದ್ಧಿವಂತಿಕೆಯ ಕುರಿತ ಪದಗಳಿಂದ ಪ್ರಯೋಜನ ಪಡೆದುಕೊಳ್ಳುತ್ತಾರೆ ಎಂದು ಇಲಾಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುಸ್ತಕವನ್ನು ಕನ್ನಡ, ತೆಲುಗು ಸೇರಿ 11 ಭಾಷೆಗಳಿಗೆ ತರ್ಜುಮೆಗೊಳಿಸಲಾಗಿದೆ.