ಹೆಸರಿಲ್ಲದ 21 ಅಂಡಮಾನ್ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿಟ್ಟ ಪ್ರಧಾನಿ ಮೋದಿ
ನವದೆಹಲಿ (ಜನವರಿ 23, 2023): ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವ. ಈ ಹಿನ್ನೆಲೆ, ಈ ಮಹತ್ತರ ದಿನದ ನೆನಪಿಗಾಗಿ ಕೇಂದ್ರ ಸರ್ಕಾರವು 2021 ರಲ್ಲಿ ಜನವರಿ 23 ಅನ್ನು ಪರಾಕ್ರಮ್ ದಿವಸ್ ಎಂದು ಘೋಷಿಸಿತ್ತು. ಈ ಹಿನ್ನೆಲೆ ಈ ಸಂದರ್ಭದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದೊಡ್ಡ ಹೆಸರಿಸದ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿಡಲಾಗಿದೆ. ಅಲ್ಲದೆ, ಈ ಹಿಂದೆ ರಾಸ್ ಐಲ್ಯಾಂಡ್ಸ್ ಎಂದು ಕರೆಯಲಾಗುತ್ತಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲಾಗಿದ್ದ ನೇತಾಜಿಗೆ ಮೀಸಲಾಗಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಸಹ ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಡೆದ ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಉಪಸ್ಥಿತರಿದ್ದರು.
ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ನುಸುಳುಕೋರರ ವಿರುದ್ಧ ಹೋರಾಡುವಾಗ ನವೆಂಬರ್ 3, 1947 ರಂದು ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡ ಮೊದಲ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಮೇಜರ್ ಸೋಮನಾಥ್ ಶರ್ಮಾ ಅವರ ಹೆಸರನ್ನು ಹೆಸರಿಸದ ಅತಿದೊಡ್ಡ ದ್ವೀಪಕ್ಕೆ ಇಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪ್ರಧಾನ ಮಂತ್ರಿ ಕಾರ್ಯಾಲಯ, “ಈ ದ್ವೀಪಗಳಿಗೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿಡಲಾಗಿದೆ. ಮೇಜರ್ ಸೋಮನಾಥ ಶರ್ಮಾ; ಸುಬೇದಾರ್ ಮತ್ತು ಹೋನಿ ಕ್ಯಾಪ್ಟನ್ (ಆಗ ಲ್ಯಾನ್ಸ್ ನಾಯಕ್) ಕರಮ್ ಸಿಂಗ್, ಎಂಎಂ; 2ನೇ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ; ನಾಯಕ್ ಜಾದೂನಾಥ್ ಸಿಂಗ್; ಕಂಪನಿ ಹವಾಲ್ದಾರ್ ಮೇಜರ್ ಪಿರು ಸಿಂಗ್; ಕ್ಯಾಪ್ಟನ್ ಜಿಎಸ್ ಸಲಾರಿಯಾ; ಲೆಫ್ಟಿನೆಂಟ್ ಕರ್ನಲ್ (ಆಗಿನ ಮೇಜರ್) ಧನ್ ಸಿಂಗ್ ಥಾಪಾ; ಸುಬೇದಾರ್ ಜೋಗಿಂದರ್ ಸಿಂಗ್; ಮೇಜರ್ ಶೈತಾನ್ ಸಿಂಗ್; CQMH. ಅಬ್ದುಲ್ ಹಮೀದ್; ಲೆಫ್ಟಿನೆಂಟ್ ಕರ್ನಲ್ ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್; ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ; ಮೇಜರ್ ಹೋಶಿಯಾರ್ ಸಿಂಗ್; 2ನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್; ಫ್ಲೈಯಿಂಗ್ ಆಫೀಸರ್ ನಿರ್ಮಲಜಿತ್ ಸಿಂಗ್ ಸೆಖೋನ್; ಮೇಜರ್ ರಾಮಸ್ವಾಮಿ ಪರಮೇಶ್ವರನ್; ನಾಯಬ್ ಸುಬೇದಾರ್ ಬನಾ ಸಿಂಗ್; ಕ್ಯಾಪ್ಟನ್ ವಿಕ್ರಮ್ ಬಾತ್ರಾ; ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ; ಸುಬೇದಾರ್ ಮೇಜರ್ (ಆಗಿನ ರೈಫಲ್ಮ್ಯಾನ್) ಸಂಜಯ್ ಕುಮಾರ್; ಮತ್ತು ಸುಬೇದಾರ್ ಮೇಜರ್ ನಿವೃತ್ತ (ಗೌರವಾನ್ವಿತ ಕ್ಯಾಪ್ಟನ್) ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್’’ ಅವರುಗಳ ಹೆಸರನ್ನು ದ್ವೀಪಗಳಿಗೆ ಇಡಲಾಗಿದೆ ಎಂದೂ ಪಿಎಂಒ ಹೇಳಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ನೆನಪಿಗಾಗಿ ಸರ್ಕಾರವು 2021 ರಲ್ಲಿ ಜನವರಿ 23 ಅನ್ನು ಪರಾಕ್ರಮ್ ದಿವಸ್ ಎಂದು ಘೋಷಿಸಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ನೇತಾಜಿ ಅವರ ಸ್ಮರಣೆಯನ್ನು ಗೌರವಿಸಲು, ರಾಸ್ ದ್ವೀಪಗಳನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಪ್ರಧಾನಿ ಮೋದಿ 2018ರಲ್ಲಿ ಆ ದ್ವೀಪಕ್ಕೆ ಭೇಟಿ ನೀಡಿದ್ದ ವೇಳೆ ಮರುನಾಮಕರಣ ಮಾಡಲಾಗಿತ್ತು. ಹಾಗೆ, ನೀಲ್ ದ್ವೀಪ ಹಾಗೂ ಹ್ಯಾವ್ಲಾಕ್ ದ್ವೀಪವನ್ನು ಶಹೀದ್ ದ್ವೀಪ ಮತ್ತು ಸ್ವರಾಜ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ.
“ದೇಶದ ನಿಜಜೀವನದ ಹೀರೋಗಳಿಗೆ ಸರಿಯಾದ ಗೌರವವನ್ನು ನೀಡುವುದು ಯಾವಾಗಲೂ ಪ್ರಧಾನ ಮಂತ್ರಿಯ ಅತ್ಯುನ್ನತ ಆದ್ಯತೆಯಾಗಿದೆ. ಈ ಮನೋಭಾವದೊಂದಿಗೆ ಮುಂದುವರಿಯುತ್ತಾ, ಈಗ ದ್ವೀಪ ಸಮೂಹದ 21 ದೊಡ್ಡ ಹೆಸರಿಸದ ದ್ವೀಪಗಳಿಗೆ 21 ಪರಂ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿಸಲು ನಿರ್ಧರಿಸಲಾಗಿದೆ” ಎಂದೂ ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹೆಸರಿಸದ ಅತಿದೊಡ್ಡ ದ್ವೀಪಕ್ಕೆ ಮೊದಲ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗಿದೆ. ಹಾಗೆ, ಎರಡನೇ ಅತಿ ದೊಡ್ಡ ಹೆಸರಿಲ್ಲದ ದ್ವೀಪಕ್ಕೆ ಎರಡನೇ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರು, ಹೀಗೆ ಹೆಸರು ಇಡಲಾಗಿದೆ. ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಅಂತಿಮ ತ್ಯಾಗ ಮಾಡಿದ ನಮ್ಮ ವೀರರಿಗೆ ಈ ಹಂತವು ಶಾಶ್ವತ ಗೌರವವಾಗಿದೆ ಎಂದೂ ಅವರು ಹೇಳಿದರು.