ಹೃದಯಾಘಾತದಿಂದ ಎಎಸ್‌ಐ ಸಾವು
ಬೆಂಗಳೂರು: ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆ ಎಎಸ್‌ಐ ಶಿವಶಂಕರ ಚಾರಿ(45) ಮೃತರು.
ಶಿವಶಂಕರ ಅವರು ಗುರುವಾರ ಬೆಳಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ರೌಂಡ್ಸ್‌ಗೆ ಹೋದಾಗ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
1999ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಶಿವಶಂಕರ್ ಚಾರಿ ಕಳೆದ ಒಂದೂವರೆ ವರ್ಷದಿಂದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರ ಸಾವಿಗೆ ಕುಟುಂಬ ಸದಸ್ಯರು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
ಅನಾರೋಗ್ಯದ ಕಾರಣ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜಿನಾಮೆ: ಸಚಿವ ಭೈರತಿ ಸುರೇಶ್
ಕೋಲಾರ: ಅನಾರೋಗ್ಯದ ಕಾರಣ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಕೆ.ಮರೀಗೌಡ ರಾಜೀನಾಮ ನೀಡಿದ್ದಾರೆ ಎಂದು ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, ಮುಡಾ ನಿವೇಶನ ಹಗರಣದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಕೆ.ಮರೀಗೌಡ ರಾಜೀನಾಮೆ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು, ಮರಿಗೌಡ ರಾಜೀನಾಮೆಗೆ ಯಾವುದೇ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷಗಳ ಆರೋಪಗಳು ಆಧಾರರಹಿತವಾಗಿವೆ, “ಅವರು (ಪ್ರತಿಪಕ್ಷಗಳು) ಮುಡಾ ವಿಷಯದಲ್ಲಿ ಸಮಸ್ಯೆ ಸೃಷ್ಟಿಸಲು ಬಯಸುತ್ತಿದ್ದಾರೆ ಹೀಗಾಗಿ ಈ ರೀತಿ ಹೇಳಿಕೆನೀಡುತ್ತಿದ್ದಾರೆ ಎಂದು ಹೇಳಿದರು.
ಉಪಚುನಾವಣೆ ಕುರಿತು ಮಾತನಾಡಿದ ಸುರೇಶ್, ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ ಎಂಎಲ್ಸಿ ಸಿ.ಪಿ.ಯೋಗೇಶ್ವರ ಅವರಿಗೆ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅವರಿಗೆ ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅಭ್ಯರ್ಥಿಗಳು ಮತ್ತು ಟಿಕೆಟ್ ಹಂಚಿಕೆ ಸೇರಿದಂತೆ ಎಲ್ಲಾ ನಿರ್ಧಾರಗಳನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಸುರೇಶ್ ಹೇಳಿದರು.
ಸಿಂಧನೂರು ಡಿವೈಎಸ್‌ಪಿ ಕಚೇರಿಗೆ ಸೂಲಿಬೆಲೆ ಹಾಜರು:
ರಾಯಚೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಅಪಮಾನಕರ ಭಾಷಣ ಪ್ರಕರಣ ಎದುರಿಸುತ್ತಿರುವ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ನಿರೀಕ್ಷಣಾ ಜಾಮೀನು ಮಂಜೂರು ಹಿನ್ನೆಲೆ ಶ್ಯೂರಿಟಿ ನೀಡಲು ಸಿಂಧನೂರು ಡಿವೈಎಸ್‌ಪಿ ಕಚೇರಿಗೆ ಗುರುವಾರ ಹಾಜರಾದರು.
ಸಿರವಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಕಲಬುರ್ಗಿ ಹೈಕೋರ್ಟ್ (Kalaburagi High Court) ಜಾತಿನಿಂದನೆ ಆರೋಪದ ಎಫ್‌ಐಆರ್ ರದ್ದುಗೊಳಿಸಿತ್ತು. ಸದ್ಯ ಚಕ್ರವರ್ತಿ ಸೂಲಿಬೆಲೆ ಅಪಮಾನಕರ ಭಾಷಣ, ದ್ವೇಷ ಭಾಷಣ ಪ್ರಕರಣ ಎದುರಿಸುತ್ತಿದ್ದಾರೆ.
ಡಿವೈಎಸ್‌ಪಿ ಕಚೇರಿ ಭೇಟಿ ಬಳಿಕ ಸಿಂಧನೂರಿನಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಖರ್ಗೆ ಕುಟುಂಬದ ಬಗ್ಗೆ ಹರಿಹಾಯ್ದರು. ಸಿರವಾರದಲ್ಲಿ ಮೋದಿಯವರ ಬಗ್ಗೆ ಮಾತನಾಡುತ್ತಾ ಖರ್ಗೆ ಕುಟುಂಬದ ಭ್ರಷ್ಟಾಚಾರ ಬಯಲಿಗೆಳೆಯುವ ಪ್ರಯತ್ನ ಮಾಡಿದ್ದೆ, ಮಾತನಾಡುವಾಗ ಈ ತರದ ಅಯೋಗ್ಯರು ಸಮಾಜ ಸೇವೆಗೆ ಉಪಯೋಗಿ ಅಲ್ಲ ಎನ್ನುವ ರೀತಿ ಮಾತು ಆಡಿದ್ದೆ.
ಅದನ್ನ ಕಾಂಗ್ರೆಸ್‌ನವರು ತಿರುಚಿದ್ದಾರೆ. ದಲಿತರನ್ನು ಅಯೋಗ್ಯರು ಅಂತ ಕರೆದಿದ್ದಾರೆ ಜಾತಿ ನಿಂದನೆ ಮಾಡಿದ್ದಾರೆ ಅಂತ ತಿರುಚಿದರು. ಅಧಿಕಾರ ತಮ್ಮಬಳಿ ಇದೆ ಎಂಬ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ತಮ್ಮ ಅಧಿಕಾರ ಬಳಸಿ ನನ್ನ ಹಣಿಯುವಂತ ಕೆಲಸಕ್ಕೆ ಮುಂದಾದರು ಎಂದು ಕಿಡಿಕಾರಿದರು.
ಬಡ ದಲಿತರ ಮೇಲೆ ಮೇಲ್ವರ್ಗದ ದಲಿತರು ಅನೇಕ ಬಾರಿ ಎಂಎಲ್‌ಎ ಎಂಪಿ ಆಗಿದ್ದಾರೆ. ಅವರು ಮಿನಿಸ್ಟರ್, ಅವರ ಮಕ್ಕಳು ಮಿನಿಸ್ಟರ್ ಆಗಿದ್ದಾರೆ. ಅಳಿಯ ಸಂಸದರಾದರು. ಇಂತವರು ದಲಿತರ ಕಾರ್ಡ್ ಬಳಸಿಕೊಂಡು ನಿಜವಾದ ದಲಿತರಿಗೆ ಸಿಗಬೇಕಾದ ಸಮಾನತೆ ವಂಚಿತ ಮಾಡುತ್ತಿದ್ದಾರೆ. ಈ ಪ್ರಕ್ರಿಯೆ ನಿಲ್ಲಬೇಕು, ಅಕಸ್ಮಾತ್ ಬಾಬಾ ಸಾಹೇಬರು ಇಲ್ಲದೇ ಹೋಗಿದ್ರೆ ನಮ್ಮಂತವರ ಪರಸ್ಥಿತಿ ಏನಾಗುತ್ತಿತ್ತೋ? ಪ್ರಿಯಾಂಕ್ ಖರ್ಗೆ ಹಾಗೂ ಖರ್ಗೆಯವರು ಇನ್ನು ಮುಂದೆಯಾದರೂ ತಮ್ಮನ್ನ ತಾವು ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು. ಭ್ರಷ್ಟಾಚಾರವಿಲ್ಲದ ಬದುಕನ್ನ ನಡೆಸಲು ಪ್ರಯತ್ನ ಮಾಡಲಿ ಅಂತ ಹೇಳಿದರು.
ಈಗಾಗಲೇ ಅವರು 5 ಎಕರೆ ಜಮೀನನ್ನು ಅಯೋಗ್ಯ ರೀತಿಯಲ್ಲೇ ಸಂಪಾದಿಸಿದ್ದರು. ಅಯೋಗ್ಯ ಪದವನ್ನ ಅಧಿಕೃತವಾಗಿ ಬಳಸಬಹುದು ಅಂತ ಕೋರ್ಟ್ ನನಗೆ ಹೇಳಿದೆ. ಜನರ ಯೋಗ್ಯ ಗಲಾಟೆಯಿಂದ ಹೆದರಿ ಯೋಗ್ಯ ರೀತಿಯಲ್ಲಿ ಮರಳಿಸಿ ನಿಜಕ್ಕೂ ನಾನೊಬ್ಬ ಅಯೋಗ್ಯ ಅಂತ ಪ್ರೂ ಮಾಡಿಕೊಂಡಿದ್ದಾರೆ. ರಾಜ್ಯವನ್ನ ಮುನ್ನಡೆಸುವ ಮ್ಯಾಂಡೇಟ್ ಅವರಿಗೆ ಸಿಕ್ಕಿರುವುದರಿಂದ ಮುಂದೆ ಈ ರೀತಿ ಭ್ರಷ್ಟಾಚಾರದಿಂದ ಹೊರಗಿರಲಿ ಅಂತ ಹೇಳಿದರು.
ಈ ದೇಶದ ಎಲ್ಲಾ ಆಸ್ತಿಯನ್ನು ವಕ್ಫ್ ಕಬಳಿಸುವ ಪ್ರಯತ್ನ ಮಾಡುತ್ತಿದ್ದರೆ ವಕ್ಫ ಆಸ್ತಿಯನ್ನೇ ಖರ್ಗೆ ಕುಟುಂಬ ಕಬಳಿಸಿದೆ ಅಂತ ವಕ್ಫ್ ನ ಅಧ್ಯಕ್ಷರೇ ಹೇಳಿದ್ದಾರೆ. ಇದು ಖರ್ಗೆ ಕುಟುಂಬದ ಮೇಲಿರುವ ದೊಡ್ಡ ಆರೋಪ. ಈ ಕುಟುಂಬ ಹಿಂದಿನಿಂದಲೂ ಈ ಕೆಲಸ ಮಾಡಿಕೊಂಡು ಬಂದಿದೆ.ಇದರ ಆರೋಪ ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿಯಲ್ಲಿ ನಡೆಯುತ್ತಿದೆ ಎಂದರು.
ಇವತ್ತು ನಾಡಿನ ಜನತೆಗೆ ಅವರು ಉತ್ತರ ಕೊಡಬೇಕಿದೆ. ವಕ್ಫ್ ಕಬಳಿಸಿದ ಆಸ್ತಿಯನ್ನ ಇವರು ಕಬಳಿಸಿದ್ದಾರಲ್ಲಾ ಅದಕ್ಕೆ ಉತ್ತರ ಕೊಡಬೇಕು. ರಾಷ್ಟ್ರೀಯತೆ ವಿಚಾರವಾಗಿ ರಾಷ್ಟ್ರಧರ್ಮದ ವಿಚಾರವಾಗಿ ಹೋರಾಟ ಮಾಡುವ ನನಗೆ ಈ ರೀತಿಯ ಸಣ್ಣಪುಟ್ಟ ಬೆದರಿಕೆಗಳಿಗೆ ನಿಂದಿಸುವ ಜೀವ ಇದಲ್ಲ ಅಂತ ಪ್ರಿಯಾಂಕ್ ಖರ್ಗೆಗೆ ಪ್ರೀತಿಯಿಂದ ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು.