ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!
ಹುಬ್ಬಳ್ಳಿ/ದಾವಣಗೆರೆ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಮನೆಯೊಳಗೆ ನುಗ್ಗಿ ಮಲಗಿದ್ದಲ್ಲೇ ಯುವತಿಯನ್ನು ಹತ್ಯೆ ಮಾಡಿದ ಆರೋಪಿಯನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ದಾವಣಗೆರೆಯಲ್ಲಿ ಬಂಧಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಎರಡು ದಿನಗಳ ಹಿಂದೆ ಅಂಜಲಿ ಅಂಬಿಗೇರ್ ಎಂಬ ಯುವತಿಯನ್ನು ವಿಶ್ವನಾಥ್ ಸಾವಂತ್ ಎಂಬ ಯುವಕ ತನ್ನ ಪ್ರೇಮ ನಿವೇದನೆಗೆ ಸಹಕರಿಸುತ್ತಿಲ್ಲ ಎಂದು ಸಿಟ್ಟಿನಿಂದ ಬೆಳ್ಳಂಬೆಳಗ್ಗೆ ಆಕೆಯ ಮನೆಯೊಳಗೆ ನುಗ್ಗಿ ಚಾಕುವಿನಿಂದ ಮನಸೋ ಇಚ್ಛೆ ತಿವಿದು ಹತ್ಯೆ ಮಾಡಿ ಪರಾರಿಯಾಗಿದ್ದ.
ಹುಬ್ಬಳ್ಳಿ ಪೊಲೀಸರು ಆರೋಪಿ ವಿಶ್ವನಾಥ್ ಸಾವಂತ್ ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಇದೀಗ ದಾವಣಗೆರೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಪೊಲೀಸರು ವಿಶ್ವನಾಥ್ ಸಾವಂತ್ ಕೊಲೆ ಮಾಡುವುದಕ್ಕೆ ಮುನ್ನ ಮೊಬೈಲ್ ನಲ್ಲಿ ಸಂವಾದ ನಡೆಸುತ್ತಿದ್ದ ಮೂವರನ್ನು ಕರೆದು ತೀವ್ರ ವಿಚಾರಣೆ ನಡೆಸಿದ್ದರು. ಅದರ ಸುಳಿವಿನ ಆಧಾರದಲ್ಲಿ ಇದೀಗ ವಿಶ್ವನಾಥ್ ನನ್ನು ದಾವಣಗೆರೆಯಲ್ಲಿ ಬಂಧಿಸಿದ್ದಾರೆ.
ಮುಂಬೈಗೆ ಪರಾರಿಯಾಗಲು ಯತ್ನ, ರೈಲಿನಿಂದ ಬಿದ್ದು ಗಾಯ: ಅಂಜಲಿಯನ್ನು ಹತ್ಯೆಗೈದ ನಂತರ ಆರೋಪಿ ವಿಶ್ವ ಬೆಂಗಳೂರು ಮೂಲಕವಾಗಿ ರೈಲಿನಲ್ಲಿ ಗೋವಾಕ್ಕೆ ಹೋದ ನಂತರ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ. ರೈಲಿನಲ್ಲಿ ಪ್ರಯಾಣಿಸುತ್ತಿರುವ ಮಾಹಿತಿ ಸಿಕ್ಕ ಹುಬ್ಬಳ್ಳಿ ಪೊಲೀಸರು ದಾವಣಗೆರೆಯಲ್ಲಿ ಅವನನ್ನು ಬಂಧಿಸಲು ಯತ್ನಿಸುವ ವೇಳೆ ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ರೈಲಿನಿಂದ ಬಿದ್ದ ರಭಸಕ್ಕೆ ಆತನಿಗೆ ಗಾಯಗಳಾಗಿವೆ. ಆತನ ಮುಖ ಮತ್ತು ತಲೆಗೆ ಗಂಭೀರ ಗಾಯವಾಗಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಪತ್ರೆಗೆ ಭೇಟಿ ನೀಡಿದ ಹುಬ್ಬಳ್ಳಿ ನಗರ ಪೊಲೀಸ್ ಆಯುಕ್ತೆ ರೇಣುಕಾ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ್ದಾರೆ.