ಹಿಂದಿ ಚಿತ್ರರಂಗದಲ್ಲಿ ನೈತಿಕತೆ ಮತ್ತು ಮೌಲ್ಯಗಳ ಕೊರತೆಯಿದೆ: ಕಾಜಲ್ ಅಗರ್ವಾಲ್ ಬೋಲ್ಡ್ ಹೇಳಿಕೆ
ನಟಿ ಕಾಜಲ್ ಅಗರ್ವಾಲ್ ಅವರು ಸದಾ ವಿವಾದದಿಂದ ದೂರ ಉಳಿಯೋಕೆ ಪ್ರಯತ್ನಿಸುತ್ತಾರೆ. ಟ್ರೋಲ್ಗಳ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಈಗ ಕಾಜಲ್ ಅಗರ್ವಾಲ್ ಅವರು ನೀಡಿರೋ ಹೇಳಿಕೆ ಸಾಕಷ್ಟು ಚರ್ಚೆಹುಟ್ಟು ಹಾಕಿದೆ. ಬಾಲಿವುಡ್ ಚಿತ್ರರಂಗದಲ್ಲಿ ಕಾಜಲ್ ಗುರುತಿಸಿಕೊಂಡಿದ್ದಾರೆ. ಹೀಗಿದ್ದರೂ ಅಲ್ಲಿನವರಿಗೆ ಎಥಿಕ್ಸ್ನ ಕೊರತೆ ಇದೆ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ. ಇದಕ್ಕೆ ಬಾಲಿವುಡ್ನ ಕೆಲವರು ಅಪಸ್ವರ ತೆಗೆದಿದ್ದಾರೆ. ಈ ಹೇಳಿಕೆಯಿಂದ ಕಾಜಲ್ ಅಗರ್ವಾಲ್ಗೆ ಹಿಂದಿಯಿಂದ ಬರುವ ಆಫರ್ಗಳು ಕೈತಪ್ಪಿದರೂ ಅಚ್ಚರಿ ಏನಿಲ್ಲ.
ಕಾಜಲ್ ಅಗರ್ವಾಲ್ ಅವರು ಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹಿಂದಿ ಚಿತ್ರರಂಗದ ಮೂಲಕ. ‘ಕ್ಯೂ ಹೋ ಗಯಾ ನಾ’ ಅವರ ಮೊದಲ ಚಿತ್ರ. ಈ ಸಿನಿಮಾದಲ್ಲಿ ಐಶ್ವರ್ಯಾ ರೈ ಅವರ ಸಹೋದರಿಯ ಪಾತ್ರವನ್ನು ಮಾಡಿದ್ದರು ಕಾಜಲ್. ಈ ಚಿತ್ರದಲ್ಲಿ ಅವರದ್ದು ಅತಿಥಿ ಪಾತ್ರ ಆಗಿತ್ತು. ಬಳಿಕ ‘ಸಿಂಗಮ್’ ಮೊದಲಾದ ಹಿಂದಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಸದ್ಯ ‘ಉಮಾ’ ಹೆಸರಿನ ಹಿಂದಿ ಚಿತ್ರ ಅವರ ಕೈಯಲ್ಲಿದೆ. ಆದಾಗ್ಯೂ ಅವರು ಬೋಲ್ಡ್ ಹೇಳಿಕೆ ನೀಡಿದ್ದಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಿದ್ದಾರೆ.
ನ್ಯೂಸ್18 ಇಂಗ್ಲಿಷ್ ನಡೆಸಿದ ‘ರೈಸಿಂಗ್ ಇಂಡಿಯಾ ರಿಯಲ್ ಹೀರೋಸ್’ ವೇದಿಕೆ ಮೇಲೆ ಕಾಜಲ್ ಮಾತನಾಡಿದ್ದಾರೆ. ‘ದಕ್ಷಿಣ ಸಿನಿಮಾ ಇಂಡಸ್ಟ್ರಿಯ ನೈತಿಕತೆ, ಶಿಸ್ತು ನನಗೆ ಇಷ್ಟವಾಗುತ್ತದೆ. ಹಿಂದಿ ಚಿತ್ರರಂಗದಲ್ಲಿ ಅದರ ಕೊರತೆಯಿದೆ ಎಂದು ನನಗೆ ಅನಿಸುತ್ತದೆ’ ಎಂದಿದ್ದಾರೆ ಕಾಜಲ್ ಅಗರ್ವಾಲ್. ಬಾಲಿವುಡ್-ದಕ್ಷಿಣ ಭಾರತ ಎಂಬ ಚರ್ಚೆ ಜೋರಾಗಿರುವಾಗಲೇ ಕಾಜಲ್ ನೀಡಿದ ಈ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
‘ಕಾಜಲ್ ಅಗರ್ವಾಲ್ ನಿಜವಾದ ಕ್ವೀನ್. ಇದನ್ನು ವೇದಿಕೆ ಮೇಲೆ ಹೇಳೋಕೆ ಧೈರ್ಯ ಬೇಕು’ ಎಂದು ಅನೇಕರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಕಾಜಲ್ ಅಗರ್ವಾಲ್ ಅವರ ವಿರುದ್ಧ ಕ್ಯಾತೆ ತೆಗೆದಿದ್ದಾರೆ. ‘ಬಾಲಿವುಡ್ನಲ್ಲಿ ನಟಿಸಿ ಈ ರೀತಿ ಹೇಳೋದು ಸರಿ ಅಲ್ಲ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಜಲ್ ಅಗರ್ವಾಲ್ ಅವರು ಸದ್ಯ ‘ಇಂಡಿಯನ್ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಕಮಲ್ ಹಾಸನ್ ಹೀರೋ. ಈ ಚಿತ್ರದ ಶೂಟಿಂಗ್ ವಿದೇಶದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.
Queen @MsKajalAggarwal’s bold statement??
— Aryan (@Pokeamole_) March 30, 2023
‘I prefer the ethics,discipline of South cinema,which i feel is lacking in Hindi Cinema’ pic.twitter.com/JIAMH8jy4p