ಹಾಕಿ ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೊರಬಿದ್ದ ಭಾರತ
ಒರಿಸ್ಸಾದ ರೊರ್ಕೆಲಾದಲ್ಲಿ ನಡೆದ ಹಾಕಿ ವಿಶ್ವಕಪ್ನ ಕ್ರಾಸ್ಓವರ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ 5-4 ಅಂತರದಿಂದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆಯು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದರೆ, ಟೀಮ್ ಇಂಡಿಯಾ ಹಾಕಿ ವಿಶ್ವಕಪ್ನಿಂದ ಹೊರಬಿದ್ದಿದೆ. ಇದಕ್ಕೂ ಮುನ್ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ಆಟಗಾರರು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಮೊದಲ ಸುತ್ತಿನಲ್ಲೇ ಸತತವಾಗಿ ಗೋಲ್ ಬಲೆಯತ್ತ ಭಾರತೀಯ ಮುನ್ಪಡೆ ಆಟಗಾರರು ಮುನ್ನುಗ್ಗಿದರು. ಇದರಿಂದ ಒತ್ತಡಕ್ಕೆ ಒಳಗಾದ ನ್ಯೂಜಿಲೆಂಡ್ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಎಡವಿದರು. ಇದಾಗ್ಯೂ ಭಾರತಕ್ಕೆ ಕಿವೀಸ್ ರಕ್ಷಣಾ ಕೋಟೆಯನ್ನು ಬೇಧಿಸಲು ಸಾಧ್ಯವಾಗಲಿಲ್ಲ.
ಇನ್ನು ಪಂದ್ಯದ 24ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಸುಖಜೀತ್ ಯಶಸ್ವಿಯಾದರು. 2ನೇ ಸುತ್ತಿನಲ್ಲಿ 2-0 ಮುನ್ನಡೆಯೊಂದಿಗೆ ಆಟ ಮುಂದುವರೆಸಿದ್ದ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ತಂಡದಿಂದ ಕೌಂಟರ್ ಅಟ್ಯಾಕ್ ಎದುರಾಯಿತು. ಪರಿಣಾಮ ಸ್ನ್ಯಾಪಿ ಪಾಸ್ಗಳ ಮೂಲಕ ಭಾರತೀಯ ಆಟಗಾರರನ್ನು ಚದುರಿಸಿದ ಕಿವೀಸ್ ಪಡೆ ಮೊದಲ ಗೋಲುಗಳಿಸಿತು. ಇದರೊಂದಿಗೆ 2ನೇ ಸುತ್ತಿನ ಮುಕ್ತಾಯದ ವೇಳೆ ಗೋಲುಗಳ ಅಂತರ 2-1 ಕ್ಕೆ ಇಳಿಯಿತು.
ಮೂರನೇ ಹಂತದಲ್ಲೂ ಉಭಯ ತಂಡಗಳಿಂದಲೂ ರೋಚಕ ಪೈಪೋಟಿ ಕಂಡು ಬಂತು. ಇದರ ನಡುವೆ ಪಂದ್ಯದ 40ನೇ ನಿಮಿಷದಲ್ಲಿ ವರುಣ್ ಬಾರಿಸಿದ ಸೂಪರ್ ಶಾಟ್ ತಡೆಯುವಲ್ಲಿ ಕಿವೀಸ್ ಗೋಲ್ ಕೀಪರ್ ವಿಫಲರಾದರು. ಇದರ ಬೆನ್ನಲ್ಲೇ ಮತ್ತೊಮ್ಮೆ ಭಾರತದ ಗೋಲು ಬಲೆಯತ್ತ ಮುನ್ನುಗ್ಗಿದ ಮುನ್ಪಡೆ ಆಟಗಾರ ರಸೆಲ್ ಗೋಲಿ ಶ್ರೀಜೇಶ್ ರನ್ನು ವಂಚಿಸಿ ಗೋಲುಗಳಿಸಿದರು. ಪರಿಣಾಮ 3ನೇ ಹಂತದ ಮುಕ್ತಾಯದ ವೇಳೆಗೆ ಭಾರತ 3-2 ಅಂತರವನ್ನು ಹೊಂದಿತ್ತು.
ಆದರೆ ನಾಲ್ಕನೇ ಹಂತದಲ್ಲಿ ನ್ಯೂಜಿಲೆಂಡ್ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಇತ್ತ ಭಾರತೀಯ ಆಟಗಾರರು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದರು. ಆದರೆ ಅತ್ಯುತ್ತಮ ಪಾಸ್ಗಳ ಮೂಲಕ ಗಮನ ಸೆಳೆದ ಕಿವೀಸ್ ಆಟಗಾರರು ಪಂದ್ಯದ 50ನೇ ನಿಮಿಷದಲ್ಲಿ ಯಶಸ್ಸು ಸಾಧಿಸಿದರು. ಅದ್ಭುತ ಕೈಚಳಕ ತೋರಿಸುವ ಮೂಲಕ ಫೈಂಡ್ಲೇ ಅತ್ಯುತ್ತಮ ಗೋಲು ದಾಖಲಿಸಿದರು. ಇದರಿಂದ ಪಂದ್ಯವು 3-3 ಗೋಲುಗಳ ಸಮಬಲದೊಂದಿಗೆ ಅಂತ್ಯವಾಯ್ತು.
ಟೀಮ್ ಇಂಡಿಯಾ ಪರ ಮೊದಲ ಶೂಟೌಟ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಹರ್ಮನ್ಪ್ರೀತ್ ಯಶಸ್ವಿಯಾದರು. ಇದರ ಬೆನ್ನಲ್ಲೇ ರಸೆಲ್ ನ್ಯೂಜಿಲೆಂಡ್ ಪರ ಗೋಲುಗಳಿಸಿದರು. ಇನ್ನು 2ನೇ ಅವಕಾಶದಲ್ಲಿ ಭಾರತದ ಪರ ರಾಜ್ಕುಮಾರ್ ಪಾಲ್ ಗೋಲುಗಳಿಸಿದರೆ, ಕಿವೀಸ್ ಪರ ಫೈಂಡ್ಲೆ ಗೋಲು ಬಾರಿಸಿದರು. ಆದರೆ ಟೀಮ್ ಇಂಡಿಯಾ ಪರ ಅಭಿಷೇಕ್ 3ನೇ ಅವಕಾಶವನ್ನು ಕೈಚೆಲ್ಲಿದರು. ಅತ್ತ ನ್ಯೂಜಿಲೆಂಡ್ ಆಟಗಾರ ಗೋಲು ದಾಖಲಿಸಿ 2-3 ಮುನ್ನಡೆ ಪಡೆದರು. 4ನೇ ಅವಕಾಶದಲ್ಲಿ ಶಂಶೇರ್ ಕೂಡ ಚೆಂಡನ್ನು ಗೋಲು ಬಲೆಯೊಳಗೆ ನುಗ್ಗಿಸುವಲ್ಲಿ ವಿಫಲರಾದರು. ಈ ಹಂತದಲ್ಲಿ ಅತ್ಯುತ್ತಮ ಗೋಲ್ ಕೀಪಿಂಗ್ ಮಾಡಿದ ಶ್ರೀಜೇಶ್ ಸ್ಯಾಮ್ ಲೇನ್ ಬಾರಿಸಿದ ಚೆಂಡನ್ನು ತಡೆದರು. 5ನೇ ಅವಕಾಶದಲ್ಲಿ ಸುಖ್ಜೀತ್ ಗೋಲುಗಳಿಸಿದರು. ಅಂತಿಮ ಅವಕಾಶದಲ್ಲಿ ಗೆಲ್ಲುವ ಅವಕಾಶ ಹೊಂದಿದ್ದ ನ್ಯೂಜಿಲೆಂಡ್ಗೆ ಮತ್ತೊಮ್ಮೆ ಶ್ರೀಜೇಶ್ ತಡೆಗೋಡೆಯಾದರು. ನಿರ್ಣಾಯಕ ಶೂಟೌಟ್ ಅನ್ನು ಅತ್ಯಾದ್ಭುತವಾಗಿ ತಡೆದ ಟೀಮ್ ಇಂಡಿಯಾ ಗೋಲಿ ಶೂಟೌಟ್ ಅನ್ನು ಸಹ 3-3 ಅಂತರದಿಂದ ಟೈ ಮಾಡಿದರು. ಪರಿಣಾಮ ಪಂದ್ಯವು ಸಡನ್ ಡೆತ್ ಶೂಟೌಟ್ನತ್ತ ಸಾಗಿತು.