ಸ್ನೇಹಿತರಿಗೆ 1 ಲಕ್ಷ ರೂ. ಸಾಲ ಕೊಡಿಸಲು ಮಧ್ಯಸ್ಥಿಕೆ- ಕಿರುಕುಳದಿಂದ ಮಹಿಳೆ ಆತ್ಮಹತ್ಯೆ
ಕೋಲಾರ: ಸ್ನೇಹಿತ (Friends) ರಿಗೆ 1 ಲಕ್ಷ ರೂಪಾಯಿ ಸಾಲ ಕೊಡಿಸಲು ಮಧ್ಯಸ್ಥಿಕೆ ವಹಿಸಲು ಹೋಗಿ ಸಾಲಗಾರರ ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಪದ್ಮಾ (35) ಆತ್ಮಹತ್ಯೆಗೆ ಶರಣಾದ ಗೃಹಿಣಿ. ನನ್ನ ಸಾವಿಗೆ ಸ್ನೇಹಿತರೇ ಕಾರಣ ಎಂದು ವೀಡಿಯೋ ಮಾಡಿಟ್ಟು ಮಹಿಳೆ ವಿಷ ಸೇವನೆ ಮಾಡಿದ್ದಾರೆ.
ಘಟನೆ ವಿವರ: ಪದ್ಮಾ ಅವರು ದೇಶಿಹಳ್ಳಿಯ ವರಲಕ್ಷ್ಮಿ ಎಂಬವರಿಂದ ಸಾಲವನ್ನು ಪಡೆದು ತನ್ನ ಸ್ನೇಹಿತರಾದ ಅತ್ತಿಗಿರಿ ಗ್ರಾಮದ ಭಾಗ್ಯ ಮತ್ತು ಸಮ್ರತಿಗೆ ಸಾಲವಾಗಿ ಹಣ ಕೊಡಿಸಿದ್ದರು. ಆದರೆ ಇತ್ತೀಚೆಗೆ ಸಾಲದ ಹಣ ಹಾಗೂ ಬಡ್ಡಿ ವಾಪಸ್ ಮಾಡದ ಹಿನ್ನೆಲೆ ಕಿರುಕುಳ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಪದ್ಮಾ ಸಾವಿನ ದಾರಿ ಹಿಡಿದಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆಗೂ ಮುನ್ನ ವೀಡಿಯೋ ಮಾಡಿರುವ ಪದ್ಮಾ, ನನ್ನ ಸಾವಿಗೆ ಸ್ನೇಹಿತರಾದ ಭಾಗ್ಯ, ಸಮ್ರತಿ, ಪ್ರೇಮ ಇವರು ಮೂರು ಜನರೇ ಕಾರಣ. ಸ್ನೇಹಿತರೆಂದು ನಂಬಿಕೆಯಿಟ್ಟು ಸಾಲ ಕೊಡಿಸಿದ್ದಕ್ಕೆ ನನ್ನ ತಲೆ ಮೇಲೆ ಹಾಕಿದ್ರು. ಪಾಪ ನನ್ನ ಮಕ್ಕಳು, ಗಂಡ ಅಮಾಯಕರು. ನಾನು ಸತ್ರೆ ನನ್ನ ಸ್ನೇಹಿತರೇ ಕಾರಣ ಎಂದು ವೀಡಿಯೋದಲ್ಲಿ ಪದ್ಮಾ ತಿಳಿಸಿದ್ದಾರೆ.
ಇದೀಗ ಸಾಲ ಪಡೆದಿದ್ದ ಭಾಗ್ಯ, ಸಮ್ರತಿ, ಪ್ರೇಮಾ ತಲೆ ಮರೆಸಿಕೊಂಡಿದ್ದಾರೆ. ಕಳೆದ 6 ತಿಂಗಳಲ್ಲಿ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ಇದು 2 ನೇ ಪ್ರಕರಣವಗಿದೆ. ಸಾಲ ಪಡೆದಿದ್ದವರು ಹಾಗೂ ಕೊಟ್ಟವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೂದಿಕೋಟೆ ಪೊಲೀಸ್ ಠಾಣೆ (Budikote Police Station) ಯಲ್ಲಿ ಪ್ರಕರಣ ದಾಖಲಾಗಿದೆ.