ಸೈನಿಕರ ದುರ್ಮರಣದ ಹಿಂದೆ ಪಾಕ್ ಕೈವಾಡ!
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿ (Poonch Attack) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ದಾಳಿಯ ಒಂದು ವಾರದ ನಂತರ ಭಯೋತ್ಪಾದಕರು ಪಾಕಿಸ್ತಾನದಿಂದ (Pakistan) ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ (Weapons) ಪೂರೈಕೆ ಮಾಡಿಕೊಳ್ಳುತ್ತಿದ್ದಾರೆ. ಸುಮಾರು 12 ಮಂದಿ ಭಯೋತ್ಪಾದಕರು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪೂಂಚ್ ಜಿಲ್ಲೆಯಲ್ಲಿ ಸೈನಿಕರು ಸಂಚರಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದಾಗ ಐವರು ಸೈನಿಕರು ಸಾವನ್ನಪ್ಪಿದರು. ಮರುದಿನ 12 ಜನ ಶಂಕಿತರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಘಟನೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ನೇತೃತ್ವದ ತಂಡ ಕಳೆದ ಒಂದು ವಾರದಿಂದಲೂ ಭಯೋತ್ಪಾದಕರನ್ನ ಸದೆಬಡಿಯಲು ಬಿಗಿ ಕಾರ್ಯಾಚರಣೆ ನಡೆಸುತ್ತಿದ್ದು, ಇದೀಗ ಮಾಹಿತಿ ಬೆಳಕಿಗೆ ಬಂದಿದೆ. ವಶಕ್ಕೆ ಪಡೆಯಲಾದ ಶಂಕಿತರ ಪೈಕಿ ನಾಸಿರ್ ಅಹ್ಮದ್ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಾಸಿರ್ ಅಹ್ಮದ್‌ನನ್ನ ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಮತ್ತಷ್ಟು ಮಹತ್ವದ ಮಾಹಿತಿ ತಿಳಿದು ಬಂದಿದೆ. ಇದೇ ವೇಳೆ ಈ ಪ್ರದೇಶದಲ್ಲಿ ನೆಲೆಸಿರುವ ಭಯೋತ್ಪಾದಕರಿಗೆ ಪಾಕಿಸ್ತಾನದಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದೆ ಅನ್ನೋದು ಗೊತ್ತಾಗಿದೆ. ಆದ್ರೆ ಅವರನ್ನು ಪತ್ತೆಹಚ್ಚಲು ಮಾಹಿತಿ ಸಹಾಯಕವಾಗಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ 12 ಜನ ಶಂಕಿತರನ್ನ ವಶಕ್ಕೆ ಪಡೆದಿದ್ದು, 200ಕ್ಕೂ ಹೆಚ್ಚು ಜನರನ್ನ ವಿಚಾರಣೆಗೆ ಕರೆಸಲಾಗಿದೆ. ದಾಳಿಕೋರರನ್ನ ಪತ್ತೆಹಚ್ಚಲು ಸತತ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಏನಿದು ಘಟನೆ?
ಸೈನಿಕರು ಸಂಚರಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿ ಐವರು ಸೈನಿಕರ ಸಾವನ್ನಪ್ಪಿದ್ದರು. ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಅವರು ತನಿಖೆಯ ಮೇಲ್ವಿಚಾರಣೆಗಾಗಿ ನೆರೆಯ ರಜೌರಿ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದರು. ಇಬ್ಬರು ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದರು. ಡೆಪ್ಯುಟಿ ಇನ್ಸ್‍ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯ ನೇತೃತ್ವದ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿತ್ತು.
ಪ್ರಾಥಮಿಕ ವರದಿಯಲ್ಲಿ ಸುಮಾರು ಐವರು ಭಯೋತ್ಪಾದಕರು ದಾಳಿಯಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ಇತ್ತು. ಸೇನಾ ಟ್ರಕ್ ಮೇಲೆ ಮೂರು ಕಡೆಗಳಿಂದ ದಾಳಿ ನಡೆದಿತ್ತು. ದಾಳಿಯ ನಂತರ, ಭಯೋತ್ಪಾದಕರು ಗ್ರೆನೇಡ್‍ಗಳು ಮತ್ತು ಬಾಂಬ್‍ಗಳನ್ನು ಬಳಸಿ ವಾಹನವನ್ನು ಸುಟ್ಟು ಹಾಕಿದ್ದರು. ದಾಳಿ ನಡೆಸಿದವರು ಒಂದು ವರ್ಷಕ್ಕೂ ಹೆಚ್ಚು ಕಾಲ ರಜೌರಿ ಮತ್ತು ಪೂಂಚ್‍ನಲ್ಲಿ ವಾಸವಾಗಿದ್ದರು. ಇಂತಹ ಕಠಿಣವಾದ ಭೂಪ್ರದೇಶದ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿದ್ದರು. ಪ್ರಸ್ತುತ ಈ ಪ್ರದೇಶದಲ್ಲಿ 3 ರಿಂದ 4 ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿವೆ ಎಂದು ತೀಳಿದು ಬಂದಿತ್ತು. ಜೈಶ್-ಎ-ಮೊಹಮ್ಮದ್‍ನ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ ನಿಷೇಧಿತ ಭಯೋತ್ಪಾದಕ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ಇದು ನಿಷೇಧಿತ ಲಷ್ಕರ್-ಎ-ತೊಯ್ಬಾ ಗುಂಪಿನ ಕೈವಾಡ ಎನ್ನಲಾದ ಮಾಹಿತಿ ಇದೆ ಎಂದೂ ತಿಳಿದುಬಂದಿತ್ತು.