ಸುಧಾರಿಸಿಕೊಳ್ಳುವ ಬೆನ್ನಲ್ಲೇ ಟರ್ಕಿ-ಸಿರಿಯಾದಲ್ಲಿ ಮತ್ತೆ ಪ್ರಬಲ ಭೂಕಂಪ!
ಟರ್ಕಿ(ಫೆ.20): ಟರ್ಕಿ ಹಾಗೂ ಸಿರಿಯಾ ತತ್ತರಿಸಿದೆ. ಫೆಬ್ರವರಿ 6 ರಂದು ಸಂಭವಿಸಿದ 7.8ರ ತೀವ್ರತೆಯ ಭೂಕಂಪದಿಂದ 50 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನೂ ಈ ಭೂಕಂಪದ ರಕ್ಷಣಾ ಕಾರ್ಯಗಳು, ಅವಶೇಷಗಳ ತೆರವು ಮುಗಿದಿಲ್ಲ. ಅಷ್ಟರಲ್ಲೇ ಟರ್ಕಿ ಹಾಗೂ ಸಿರಿಯಾ ಗಡಿಯಲ್ಲಿ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ. ಇಂದು(ಫೆ.20) ರಾತ್ರಿ 10.34ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 6.3ರ ತೀವ್ರತೆ ದಾಖಲಾಗಿದೆ. ಸಿರಿಯಾದ ಲಟಾಕಿಯಾ ಪ್ರಾಂತ್ಯದ ಸುಮಾರು 70 ಕಿಲೋಮೀಟರ್ ವಲಯದಲ್ಲಿ ಭೂಮಿ ಕಂಪಿಸಿದರೆ, ಇತ್ತ ಟರ್ಕಿಯ ಆ್ಯಂಟಕ್ಯಾ ಪ್ರದೇಶ 14 ಕಿಲೋಮೀಟರ್ ಸುತ್ತಳೆತೆ ಪ್ರದೇಶದಲ್ಲಿ ಭೂಮಿ ಕಂಪಿಸಿದೆ.
ಟರ್ಕಿ ಹಾಗೂ ಸಿರಿಯಾ ಭಾಗದಲ್ಲಿ ಸಂಭವಿಸಿದ ಎರಡನೇ ಭೂಕಂಪದ ತೀವ್ರತೆಗೆ ಈಜಿಪ್ಟಿ ಹಾಗೂ ಲೆಬೆನಾನ್‌ನಲ್ಲಿ ಭೂಮಿ ಲಘುವಾಗಿ ಕಂಪಿಸಿದ ಅನುಭವಾಗಿದೆ. ಇದೀಗ ರಕ್ಷಣಾ ತಂಡಗಳು ಹೊಸದಾಗಿ ಭೂಕಂಪ ಸಂಭವಿಸಿದ ಸ್ಥಳಕ್ಕೆ ಧಾವಿಸಿದೆ.
12 ದಿನಗಳ ಹಿಂದೆ ಟರ್ಕಿ ಮತ್ತು ಸಿರಿಯಾಗಳಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 46,002ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 40,402 ಹಾಗೂ ಸಿರಿಯಾದಲ್ಲಿ 5,800 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದೆ. 7.8 ತೀವ್ರತೆಯ ಭೂಕಂಪಕ್ಕೆ ಟರ್ಕಿಯಲ್ಲಿ 5 ಲಕ್ಷ ಕಟ್ಟಡಗಳು ನಾಶವಾಗಿದ್ದು ಹಲವಾರು ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಉರುಳಿದ ಕಟ್ಟಡಗಳ ಅಡಿಯಿಂದ ಜನರ ರಕ್ಷಣಾ ಕಾರ್ಯಚರಣೆ ಭಾನುವಾರ ಬಹುತೇಕ ಕೊನೆಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಟರ್ಕಿಗೆ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಎನ್‌ಡಿಆರ್‌ಎಫ್‌ನ ಮೂರೂ ತಂಡಗಳು ತಮ್ಮ ಕಾರ್ಯಾಚರಣೆ ಮುಗಿಸಿ ಭಾನುವಾರ ಭಾರತಕ್ಕೆ ಮರಳಿವೆ.
ಇಂದು ಸಂಭವಿಸಿದ ಭೂಕಂಪದಲ್ಲಿ ಕೆಲ ಕಟ್ಟಗಳು ಧರೆಗುರುಳಿದೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ. ಆದರೆ ಸಾವು ನೋವಿನ ಕುರಿತ ಮಾಹಿತಿ ಲಭ್ಯವಾಗಿಲ್ಲ.