ಕಾನ್ಪುರ, ಡಿಸೆಂಬರ್ 27: ಕಾನ್ಪುರ ಮೂಲದ ಸುಗಂಧ ದ್ರವ್ಯ ತಯಾರಕ ಪಿಯೂಷ್ ಜೈನ್ ಅವರ ಮನೆ ಮೇಲೆ ನಡೆಯುತ್ತಿರುವ ಶೋಧ ಕಾರ್ಯಕ್ಕೆ 120 ಗಂಟೆಗಳಿಗೂ ಹೆಚ್ಚು ಸಮಯವಾಗಿದೆ. ಆದರೆ ಬಗೆದಷ್ಟು ದಾಖಲೆ ಇಲ್ಲದ ಹಣ ಚಿನ್ನಾಭರಣ ಪತ್ತೆಯಾಗುತ್ತಲೇ ಇದೆ. ಕಾನ್ಪುರ ಮತ್ತು ಕನೌಜ್‌ನಲ್ಲಿರುವ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಅವರ ನಿವಾಸದ ಮೇಲೆ 120 ಗಂಟೆಗಳ ದಾಳಿಯಲ್ಲಿ, ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯ (ಡಿಜಿಜಿಐ) ಜಂಟಿ ತಂಡವು 284 ಕೋಟಿ ರೂ.ಗೂ ಹೆಚ್ಚು ನಗದು ವಶಪಡಿಸಿಕೊಂಡಿದೆ. ಇದಲ್ಲದೇ ಪಿಯೂಷ್ ಜೈನ್ ಮನೆಯಲ್ಲಿ ನಡೆದ ದಾಳಿ ವೇಳೆ 16 ದುಬಾರಿ ಆಸ್ತಿಗಳ ದಾಖಲೆಗಳು ಪತ್ತೆಯಾಗಿವೆ. ಇವುಗಳಲ್ಲಿ ಕಾನ್ಪುರದಲ್ಲಿ 4, ಕನೌಜ್‌ನಲ್ಲಿ 7, ಮುಂಬೈನಲ್ಲಿ 2 ಮತ್ತು ದೆಹಲಿಯಲ್ಲಿ 1 ಆಸ್ತಿಗಳಿವೆ. ದುಬೈನಲ್ಲಿ ಎರಡು ಆಸ್ತಿಗಳನ್ನು ಪತ್ತೆಹಚ್ಚಲಾಗಿದೆ. ನಗದು ಮತ್ತು ಆಸ್ತಿ ಪತ್ರಗಳಲ್ಲದೆ, ಪಿಯೂಷ್ ಜೈನ್ ಅವರ ಮನೆಯಲ್ಲಿ ಹಲವಾರು ಕಿಲೋಗ್ರಾಂಗಳಷ್ಟು ಚಿನ್ನವನ್ನು ಸಹ ವಶಪಡಿಸಲಾಗಿದೆ.
ತೆರಿಗೆ ವಂಚನೆ ಆರೋಪದಲ್ಲಿ ಕಾನ್ಪುರ ಮೂಲದ ಉದ್ಯಮಿ ಪಿಯೂಷ್ ಜೈನ್ ಅವರನ್ನು ಬಂಧಿಸಲಾಗಿದೆ. ಪಿಯೂಷ್ ಜೈನ್ ವಿರುದ್ಧ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಕಾಯ್ದೆಯ ಸೆಕ್ಷನ್ 69 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 120 ಗಂಟೆಗಳಿಗೂ ಹೆಚ್ಚು ಕಾಲ ನಡೆದ ತನಿಖೆಯ ನಂತರ ಪಿಯೂಷ್ ಜೈನ್ ಅವರನ್ನು ಬಂಧಿಸಲಾಯಿತು. ಆತನ ಬಂಧನಕ್ಕೂ ಮುನ್ನ ಸುಮಾರು 50 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.
ಕಳೆದ ವಾರ, ಆದಾಯ ತೆರಿಗೆ ಇಲಾಖೆ ಮತ್ತು ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಜಂಟಿ ತಂಡ ಪಿಯೂಷ್ ಜೈನ್ ಅವರ ಕಾನ್ಪುರದ ಮನೆಯ ಮೇಲೆ ದಾಳಿ ನಡೆಸಿ 257 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದೆ. ಕನೌಜ್‌ನಲ್ಲಿರುವ ಪಿಯೂಷ್ ಜೈನ್ ಅವರ ಪೂರ್ವಜರ ಮನೆಯಿಂದ 18 ಲಾಕರ್‌ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸುಮಾರು 500 ಕೀಗಳು ಕಂಡುಬಂದಿವೆ. ಈ ಕೀಗಳಿಂದ ಲಾಕರ್ ಅನ್ನು ತೆರೆಯಲು ಪ್ರಯತ್ನಿಸುತ್ತಿದ್ದಾರೆ.
ಡಿಸೆಂಬರ್ 22 ರಂದು ಆದಾಯ ತೆರಿಗೆ ಇಲಾಖೆ ಮತ್ತು ಡಿಜಿಜಿಐ ಅಧಿಕಾರಿಗಳ ಜಂಟಿ ತಂಡ ಕಾನ್ಪುರದಲ್ಲಿರುವ ಪಿಯೂಷ್ ಜೈನ್ ಅವರ ಮನೆಗೆ ತಲುಪಿದಾಗ, ಪಿಯೂಷ್ ಜೈನ್ ದೆಹಲಿಯಲ್ಲಿದ್ದರು. ಇಡೀ ಕುಟುಂಬ ತಮ್ಮ ತಂದೆಯ ಚಿಕಿತ್ಸೆಗಾಗಿ ದೆಹಲಿಗೆ ಹೋಗಿದ್ದರು ಎಂದು ಮನೆಯ ಸಹಾಯಕ ಹೇಳಿದರು. ಮನೆಯಲ್ಲಿ ಅವರ ಇಬ್ಬರು ಪುತ್ರರು ಮಾತ್ರ ಇದ್ದರು. ಆದರೆ, ತನಿಖಾಧಿಕಾರಿಗಳ ಕರೆಯ ಮೇರೆಗೆ ಪಿಯೂಷ್ ಜೈನ್ ದೆಹಲಿಗೆ ವಾಪಸಾಗಿದ್ದರು. ಪಿಯೂಷ್ ಜೈನ್ ಅವರ ಕಿರಿಯ ಸಹೋದರ ಕುಟುಂಬದೊಂದಿಗೆ ಜಾರ್ಖಂಡ್‌ಗೆ ತೆರಳಿದ್ದರು.
ಪಿಯೂಷ್ ಜೈನ್ ಸುಗಂಧ ದ್ರವ್ಯದ ವ್ಯಾಪಾರಕ್ಕೆ ಹೆಸರುವಾಸಿಯಾದ ಕಾನ್ಪುರದ ಇಟ್ಟರ್ವಾಲಿ ಗಲ್ಲಿಯಲ್ಲಿ ತಮ್ಮ ವ್ಯಾಪಾರವನ್ನು ಮಾಡುತ್ತಿದ್ದರು. ಮಾತ್ರವಲ್ಲದೆ ಅವರು ಕನೌಜ್, ಕಾನ್ಪುರ ಮತ್ತು ಮುಂಬೈನಲ್ಲಿ ಕಚೇರಿಗಳನ್ನು ಹೊಂದಿದ್ದಾರೆ. ಕಾನ್ಪುರದ ದಾಳಿಯ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ಸುಮಾರು 40 ಕಂಪನಿಗಳನ್ನು ಪತ್ತೆಹಚ್ಚಿದೆ. ಈ ಕಂಪನಿಗಳ ಮೂಲಕ ಪಿಯೂಷ್ ಜೈನ್ ತನ್ನ ವ್ಯವಹಾರವನ್ನು ನಡೆಸುತ್ತಿದ್ದರು.
ಕನೌಜ್‌ನಿಂದ 107 ಕೋಟಿ ವಶ : ಡಿಜಿಜಿಐ ಮೂಲಗಳ ಪ್ರಕಾರ, ಕಾನ್ಪುರದ ಆನಂದನಗರದಲ್ಲಿರುವ ಪಿಯೂಷ್ ಜೈನ್ ಅವರ ಮನೆಯಿಂದ 177 ಕೋಟಿ ರೂಪಾಯಿ ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಮತ್ತು ಕನ್ನೌಜ್‌ನಲ್ಲಿರುವ ಅವರ ನಿವಾಸದಿಂದ 107 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯ ಸಂದರ್ಭದಲ್ಲಿ ಯುಪಿ ಮತ್ತು ಗುಜರಾತ್ (ಅಹಮದಾಬಾದ್) ಘಟಕಗಳ ಅಧಿಕಾರಿಗಳು ಸೇರಿದಂತೆ 50 ಅಧಿಕಾರಿಗಳು ಇದ್ದರು. ಪಿಯೂಷ್ ಜೈನ್ ಅವರನ್ನು ಸುರಕ್ಷಿತ ಮನೆಗೆ ಕರೆದೊಯ್ದು 50 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು ಎಂದು ತನಿಖೆಯ ನಿಕಟ ಮೂಲಗಳು ತಿಳಿಸಿವೆ. ಅವರಿಗೆ ಹಲವಾರು ಪ್ರಶ್ನೆಗಳನ್ನು ಹಾಕಲಾಯಿತು. ಅವರ ಹೇಳಿಕೆಗಳು ತನಿಖಾಧಿಕಾರಿಗಳನ್ನು ತೃಪ್ತಿಪಡಿಸಲು ಸಾಧ್ಯವಾಗಲಿಲ್ಲ. ತೆರಿಗೆ ವಂಚನೆ ಮತ್ತು ನಕಲಿ ಸಂಸ್ಥೆಗಳ ಹೆಸರಿನಲ್ಲಿ ಹಲವಾರು ಚಲನ್‌ಗಳನ್ನು ಮಾಡಿದ ಆರೋಪದ ಮೇಲೆ ಪಿಯೂಷ್ ಜೈನ್ ಅವರನ್ನು ಬಂಧಿಸಲಾಗಿದೆ.
ತನ್ನ ಮನೆಯಿಂದ ವಶಪಡಿಸಿಕೊಂಡ 284 ಕೋಟಿ ರೂಪಾಯಿ ನಗದು ತನ್ನ ಪೂರ್ವಜರು ಬಿಟ್ಟು ಹೋಗಿದ್ದ 400 ಕೆಜಿ ಚಿನ್ನವನ್ನು ಮಾರಾಟ ಮಾಡಿ ಠೇವಣಿ ಇಟ್ಟ ಹಣ ಎಂದು ಪಿಯೂಷ್ ಜೈನ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಮೂಲಗಳನ್ನು ಉಲ್ಲೇಖಿಸಿದೆ. ಇದು ಅವರ ಹಣ ಎಂದು ಪೀಯೂಷ್ ಜೈನ್ ತಂಡಕ್ಕೆ ತಿಳಿಸಿದ್ದಾರೆ. ಈ ಹಣ ಮತ್ತು ಚಿನ್ನಾಭರಣಗಳ ಮೇಲೆ ನೀವು ಆದಾಯ ತೆರಿಗೆಯನ್ನು ಕಡಿತಗೊಳಿಸಿ ಉಳಿದ ಹಣವನ್ನು ನನಗೆ ಹಿಂತಿರುಗಿಸಬಹುದು ಎಂದು ಪಿಯೂಷ್ ಜೈನ್ ತಮ್ಮ ತಂಡಕ್ಕೆ ತಿಳಿಸಿದ್ದರು ಎಂದು ತನಿಖಾಧಿಕಾರಿ ಡಿಸೆಂಬರ್ 26ರಂದು ತಿಳಿಸಿದ್ದಾರೆ. ಹಣದ ಮೂಲದ ಬಗ್ಗೆ ಕೇಳಿದಾಗ, ಮನೆಯ ಪೂರ್ವಜರ ಚಿನ್ನ ಸುಮಾರು 400 ಕೆಜಿ ಇದ್ದು, ಅದನ್ನು ಸಣ್ಣಪುಟ್ಟ ಆಭರಣ ವ್ಯಾಪಾರಿಗಳಿಗೆ ಹಣಕ್ಕಾಗಿ ಮಾರಾಟ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ ಎನ್ನಲಾಗುತ್ತಿದೆ.
25 ಕೆಜಿ ಚಿನ್ನ ಮತ್ತು 250 ಕೆಜಿ ಬೆಳ್ಳಿ ಪತ್ತೆ
ಇದುವರೆಗಿನ ದಾಳಿಯಲ್ಲಿ ಪಿಯೂಷ್ ಜೈನ್ ಅವರ ಕನೌಜ್ ನಿವಾಸದಿಂದ ಏಜೆನ್ಸಿಗಳು 250 ಕೆಜಿ ಬೆಳ್ಳಿ ಮತ್ತು 25 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿವೆ. ಕನೌಜ್‌ನಲ್ಲಿರುವ ಪಿಯೂಷ್ ಜೈನ್ ಅವರ ಪೂರ್ವಜರ ಅಡಗುತಾಣದ ಮನೆಯ ತಿಜೋರಿಗಳು ಮತ್ತು ಗೋಡೆಗಳನ್ನು ಕೆಡವಲಾಗುತ್ತಿದೆ. ತನಿಖಾ ಅಧಿಕಾರಿಗಳು ಗೋಡೆಗಳ ಹಿಂದೆ ನೆಲಮಾಳಿಗೆಯಿರಬಹುದು ಎಂದು ಶಂಕಿಸಿದ್ದಾರೆ. ಉದ್ಯಮಿಯ ಮನೆ ಮತ್ತು ಕಾರ್ಖಾನೆಯೊಳಗೆ ಜಿಎಸ್‌ಟಿ ಗುಪ್ತಚರ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿದಂತೆ 36 ಜನರಿದ್ದಾರೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.