ಸೀರೆ ನೆರಿಗೆಯಿಂದಾಗಿ ಬೈಕಿನ ಚಕ್ರದೊಳಗೆ ಕಾಲು ಸಿಲುಕಿ ಮಹಿಳೆ ನರಳಾಟ
ಚಿಕ್ಕಮಗಳೂರು: ಬೈಕಿನ ಹಿಂಬದಿಯಲ್ಲಿ ಕೂತಿದ್ದ ಮಹಿಳೆಯ ಸೀರೆ (Saree) ಸೆರಗು ಹಾಗೂ ನೆರಿಗೆ ಬೈಕಿನ ಚಕ್ರಕ್ಕೆ ಸಿಲುಕಿ ಕಾಲು ಕೂಡ ಬೈಕಿನ ಚಕ್ರದೊಳಗೆ ಸಿಲುಕಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಮಹಿಳೆ ನರಳಾಡಿದ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ತರೀಕೆರೆ ಪಟ್ಟಣ ಸಮೀಪದ ಇಟ್ಟಿಗೆ ಗ್ರಾಮದ ಯಶೋದಾ ಬಾಯಿ ಎಂಬ ಮಹಿಳೆ ಬೈಕಿನಲ್ಲಿ ತರೀಕೆರೆ ಪಟ್ಟಣಕ್ಕೆ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕಿನ ಹಿಂದೆ ಕೂತಿದ್ದ ಮಹಿಳೆಯ ಸೀರೆ ಸೆರಗು ಹಾಗೂ ನೆರಿಗೆ ಬೈಕಿನ ಚಕ್ರಕ್ಕೆ ಸಿಲುಕಿ, ಕಾಲು ಕೂಡ ಚಕ್ರದೊಳಗೆ ಸಿಲುಕಿಕೊಂಡಿದೆ. ಕೂಡಲೇ ಬೈಕ್ (Bike) ಸವಾರ ಹಾಗೂ ಮಹಿಳೆ ಕೆಳಕ್ಕೆ ಬಿದ್ದಿದ್ದಾರೆ.
ಮಹಿಳೆಯ ಕಾಲು ಗೇರ್ ಬಾಕ್ಸ್ ಮೂಲಕ ಚಕ್ರದ ಒಳಗೆ ಸಿಲುಕಿಕೊಂಡಿದೆ. ಬೈಕ್ ಸವಾರ ಹಾಗೂ ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಕಾಲನ್ನ ಹೊರಕ್ಕೆ ತೆಗೆಯಲು ಸಾಧ್ಯವಾಗಿಲ್ಲ. ಸುಮಾರು ಒಂದು ಗಂಟೆಗಳ ಕಾಲ ಮಹಿಳೆ ನೋವಿನಿಂದ ನರಳಾಡಿದ್ದಾರೆ. ಬಳಿಕ ಬೈಕಿನ ಚೈನ್ ಕಟ್ ಮಾಡಿ, ಗೇರ್ ಬಾಕ್ಸ್ ಬಿಚ್ಚಿ ಮಹಿಳೆಯ ಕಾಲನ್ನು ಹೊರ ತೆಗೆದಿದ್ದಾರೆ.
ಕಾಲಿಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಈ ದೃಶ್ಯ ನೋಡುವರಿಗೆ ಮೈರೋಮ ಎದ್ದು ನಿಲ್ಲುವಂತೆ ಮಾಡುತ್ತಿದೆ. ಸೀರೆಯುಟ್ಟ ಮಹಿಳೆಯರು ಹಾಗೂ ಚೂಡಿದಾರ ಧರಿಸಿದ ಯುವತಿಯರು ಬೈಕಿನ ಹಿಂಭಾಗ ಕೂತು ಹೋಗುವಾಗ ತೀವ್ರವಾದ ಎಚ್ಚರಿಕೆಯಿಂದ ಇರಬೇಕಾಗಿದೆ. ಚೂಡಿದಾರ ಧರಿಸಿದ ಮಹಿಳೆಯರ ವೇಲ್ ಕೂಡ ಟೈರ್ಗೆ ಸಿಕ್ಕಿ ಬಿದ್ದುವರು ಇದ್ದಾರೆ. ಹಾಗಾಗಿ ಸೀರೆ ಹಾಗೂ ಚೂಡಿದಾರ ಧರಿಸಿ ಬೈಕಿನಲ್ಲಿ ಹೋಗುವ ಮಹಿಳೆಯರು, ಯುವತಿಯರು ಎಚ್ಚರಿಕೆಯಿಂದ ಇರಬೇಕಿದೆ.