ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ - ಸಿಪಿ ಯೋಗೇಶ್ವರ್; ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ - ಜೆಡಿಎಸ್ ಮೈತ್ರಿ!
ಬೆಂಗಳೂರು: ‘ಮುಂಬರುವ ನಾನು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಕೈತಪ್ಪಿದರೆ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ’ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಸಿಪಿ ಯೋಗೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಚನ್ನಪಟ್ಟಣದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿ ಯೋಗೇಶ್ವರ್ ಅವರನ್ನು ಬಿಜೆಪಿ ಹೈಕಮಾಂಡ್ ಮಾತುಕತೆಗೆ ಬರುವಂತೆ ದೆಹಲಿಗೆ ಕರೆದಿದೆ.
ಮುಂಬರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ‘ಅಗ್ನಿಪರೀಕ್ಷೆ’ಯಂತಾಗುವುದು ನಿಶ್ಚಿತವಾಗಿದೆ.
‘ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡುವ ಮಾತೇ ಇಲ್ಲ. ನನಗೆ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ಟಿಕೆಟ್ ಆಕಾಂಕ್ಷಿಯೂ ಆಗಿರುವ ಬಿಜೆಪಿಯ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಖಡಕ್ಕಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಉಪಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿರುವ ಯೋಗೇಶ್ವರ್ ಅವರು ಸೋಮವಾರ ದೆಹಲಿಗೆ ತೆರಳಲಿದ್ದು, ಎರಡು ಅಥವಾ ಮೂರು ದಿನಗಳ ಕಾಲ ಅಲ್ಲಿ ವಾಸ್ತವ್ಯ ಹೂಡುವ ಮೂಲಕ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ತಮಗೆ ಯಾಕೆ ಟಿಕೆಟ್ ನೀಡಬೇಕು ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಿದ್ದಾರೆ.
ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಯೋಗೇಶ್ವರ್, ಸೋಮವಾರ ದೆಹಲಿಗೆ ತೆರಳಿ ಮೊದಲು ರಾಜ್ಯವನ್ನು ಪ್ರತಿನಿಧಿಸುವ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಚರ್ಚಿಸುವೆ. ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಕಂಡು ಟಿಕೆಟ್ ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಪಕ್ಷದ ವರಿಷ್ಠರಿಗೆ ನನ್ನ ನಿಲುವು ಹೇಳಿ ಬರುತ್ತೇನೆ. ನನಗೆ ಟಿಕೆಟ್ ನೀಡದೆ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಆ ಕ್ಷೇತ್ರ ಕಾಂಗ್ರೆಸ್ ಪಾಲಾಗಬಹುದು. ಹೀಗಾಗಿ, ನನಗೇ ಟಿಕೆಟ್ ನೀಡುವಂತೆ ಕೇಳುತ್ತೇನೆ. ವರಿಷ್ಠರು ನಂತರ ನಮ್ಮ ಪಕ್ಷದ ರಾಜ್ಯ ನಾಯಕರನ್ನು ಕರೆದು ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಮಾತನಾಡಬಹುದು. ಅವರ ಅಭಿಪ್ರಾಯವನ್ನು ಕೇಳಬಹುದು. ಆಮೇಲೆ ಮುಂದಿನದನ್ನು ನೋಡೋಣ ಎಂದರು.
ಒಂದು ವೇಳೆ ವರಿಷ್ಠರು ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ನಿರ್ಧಾರ ಕೈಗೊಂಡರೆ ಏನು ಮಾಡುವಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಯಾವುದೇ ಕಾರಣಕ್ಕೂ ನಾನು ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಟಿಕೆಟ್ ಕೊಡದೇ ಇದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುವೆ ಎಂದು ಸ್ಪಷ್ಟವಾಗಿ ತಿಳಿಸಿದರು.
ಇದೇ ವೇಳೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಯೋಗೇಶ್ವರ್ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎಂದು ಹೇಳಿದ್ದಕ್ಕೆ ಟಾಂಗ್ ನೀಡಿದ ಅವರು, “ನಾನು ಕಾಂಗ್ರೆಸ್ ಗೆ ಹೋಗುವ ಬಗ್ಗೆ ಆಲೋಚನೆ ಮಾಡಿಲ್ಲ. ಯಾರೂ ನನ್ನ ಮಾತಾಡಿಸಿಯೂ ಇಲ್ಲ.
ಡಿಕೆಶಿ ಅವರು ಏನೇನೋ ಮಾತಾಡ್ತಾರೆ, ಅದು ಅವರ ರಾಜಕೀಯ ತಂತ್ರಗಾರಿಕೆ. ಅವರಿಗೆ ಯಾವಾಗ ಏನು ಮಾತಾಡಬೇಕು ಅಂತ ಗೊತ್ತಿದೆ’’ ಎಂದರು. ಅಲ್ಲದೆ, “ನನ್ನ ತಾಲ್ಲೂಕಿನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ, ಯಾವುದೇ ಚಿಹ್ನೆಯಡಿ ನಿಂತರೂ ಗೆಲ್ಲಿಸುತ್ತಾರೆ. ಕ್ಷೇತ್ರದ ಸಮಾನ ಮನಸ್ಕ ವೇದಿಕೆಯಿಂದಲೂ ಸ್ಪರ್ಧೆಗೆ ಒತ್ತಾಯ ಇದೆ’’ ಎಂದೂ ತಿಳಿಸಿದರು.
“ನನಗೂ ಕುಮಾರಸ್ವಾಮಿಯವರಿಗೂ ಭಿನ್ನಾಭಿಪ್ರಾಯ ಏನಿದೆ?’’ ಎಂದು ಪ್ರಶ್ನಿಸಿದ ಅವರು, “ಅದನ್ನು ಇನ್ನಷ್ಟು ಬಿರುಕು ಮೂಡಿಸುವ ಪ್ರಯತ್ನ ಡಿಕೆಶಿ ಮಾಡ್ತಿದ್ದಾರೆ. ಕುಮಾರಸ್ವಾಮಿ ಮನಸು ಬದಲಾಯಿಸಬಹುದು. ಕುಮಾರಸ್ವಾಮಿ ಒಪ್ಪದಿದ್ದರೆ ಮುಂದಿನ ದಾರಿ ನೋಡೋಣ ಎಂದರು. ಟಿಕೆಟ್ ವಿಚಾರವಾಗಿ ಎಚ್ ಡಿ ಕುಮಾರಸ್ವಾಮಿ ಮತ್ತು ನಮ್ಮ ವರಿಷ್ಠರು ಏನ್ ತೀರ್ಮಾನ ಮಾಡ್ತಾರೆ’’ ಅಂತ ನೋಡಬೇಕು.
“ಕುಮಾರಸ್ವಾಮಿ ಅವರಿಗೆ ಸ್ವಲ್ಪ ಮುಂಗೋಪ ಇರಬಹುದು. ಆದರೆ, ಅವರು ನನಗೆ ಟಿಕೆಟ್ ಕೊಡಲು ಒಪ್ತಾರೆ ಅನ್ನುವ ಆಶಾ ಭಾವನೆ ಇದೆ. ಅವರ ಜತೆ ಮೈತ್ರಿ ಮೊದಲ ಅಧ್ಯಾಯ ಪ್ರಾರಂಭ ಮಾಡಿದವನೇ ನಾನು. ಅದು ಫಲ ಕೂಡಾ ಕೊಡ್ತು, ಜನಕ್ಕೂ ಮೈತ್ರಿ ಬೇಕಾಗಿದೆ. ಹಾಸನದಲ್ಲಿ ನಮ್ಮ ಪಕ್ಷದ ಮುಖಂಡರು ಸಹಕರಿಸಲಿಲ್ಲ. ಇದರ ಪರಿಣಾಮ ಜೆಡಿಎಸ್ ಗೆ ಅಲ್ಲಿ ಸೋಲಾಯ್ತು. ಇಲ್ಲೂ ನಾನು ಸಹಕರಿಸದಿದ್ದಿದ್ರೆ ಏನಾಗ್ತಿತ್ತು..? ಕುಮಾರಸ್ವಾಮಿ ಒಪ್ತಾರೆ, ಒಪ್ಪದಿದ್ದರೆ ನೋಡೋಣ. ನನ್ನ ತಾಲ್ಲೂಕಿನ ಜನ ಯಾವುದೇ ಚಿಹ್ನೆಯಡಿ ನನ್ನ ಗೆಲ್ಲಿಸಿಕೊಳ್ತಾರೆ’’ ಎಂದರು
ಕಳೆದ ಬಾರಿ ಮೈತ್ರಿ ಮಾಡಿಕೊಳ್ಳುವಂತೆ ಹೇಳಿದವನೇ ನಾನು. ಬಿಜೆಪಿ ಮೈತ್ರಿ ಮಾಡಿಕೊಳ್ಳದಿದ್ದರೆ ನಮ ಭಾಗದಲ್ಲಿ ಜೆಡಿಎಸ್ ಕಥೆ ಏನಾಗುತ್ತಿತ್ತು? ಹೀಗಾಗಿ ಎರಡು ಪಕ್ಷಗಳ ಒಮತದ ಅಭ್ಯರ್ಥಿ ನಾನೇ ಆಗುವ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.
ಈ ಮೂಲಕ ಪಕ್ಷವು ಟಿಕೆಟ್ ನೀಡದಿದ್ದರೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮುನ್ಸೂಚನೆ ಕೊಟ್ಟಿದ್ದು, ಅವರ ನಡೆ ಬಿಜೆಪಿ ಹಾಗೂ ಜೆಡಿಎಸ್‌ಗೆ ದೊಡ್ಡ ತಲೆನೋವಾಗುವ ಸಂಭವವಿದೆ.