ಸಿಗರೇಟಿನಿಂದ ಖಾಸಗಿ ಅಂಗವನ್ನು ಸುಟ್ಟು ಅವಳಿ ಸಹೋದರಿಯರಿಗೆ ಕಿರುಕುಳ ನೀಡಿದ ವೈದ್ಯ ದಂಪತಿ

ಗುವಾಹಟಿ: ಅವಳಿ ಸಹೋದರಿಯರನ್ನು ಮನೆಯಲ್ಲಿರಿಸಿ ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವೈದ್ಯ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಡಾ. ವಲಿಯುಲ್ ಇಸ್ಲಾಂ ಮತ್ತು ಮನೋವೈದ್ಯ ಡಾ. ಸಂಗೀತಾ ದತ್ತಾ ಹಾಗೂ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿನಾಥ್ ಬಂಧಿತರು.
“ವೈದ್ಯ ದಂಪತಿಗಳು ರೋಮಾ ಎನ್‌ಕ್ಲೇವ್‌ನ ನಾಲ್ಕನೇ ಮಹಡಿಯಲ್ಲಿ ಅಪ್ರಾಪ್ತ ಬಾಲಕಿಯರನ್ನು ಬಂಧಿಯಾಗಿರಿಸಿದ್ದಾರೆ. 3 ವರ್ಷದ ಬಾಲಕಿಯ ಖಾಸಗಿ ಭಾಗಗಳಲ್ಲಿ ಸುಟ್ಟ ಗಾಯಗಳಾಗಿದ್ದು, ಆಕೆಯ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿವೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟಿರುವುದು ಕಂಡುಬಂದಿದೆ” ಎಂದು ಗುವಾಹಟಿ ಪೊಲೀಸ್ ಕಮಿಷನರ್ ದಿಗಂತ ಬರಾಹ್ ಹೇಳಿದ್ದಾರೆ.
ಅವಳಿ ಸಹೋದರಿಯರ ಪೋಷಕರನ್ನು ನಾವು ಹುಡುಕುತ್ತಿದ್ದೇವೆ. ಪುಟ್ಟ ಮಕ್ಕಳಿಗೆ ಈ ರೀತಿಯಾಗಿ ಹಿಂಸೆ ನೀಡಿದ್ದು ಯಾಕೆ ಎನ್ನುವುದನ್ನು ನಾವು ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ವೈದ್ಯರ ಮನೆಯ ಸಹಾಯಕಿ ಲಕ್ಷ್ಮಿನಾಥ್ ಸೇರಿದಂತೆ ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ಭಾನುವಾರ ಗುವಾಹಟಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ದಂಪತಿಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಮತ್ತು ಸಹಾಯಕಿ ಲಕ್ಷ್ಮಿನಾಥ್ ಅವರನ್ನು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಚಾರ ಬಯಲಿಗೆ ಬಂದದ್ದೇಗೆ?: ಮಕ್ಕಳ ಹಕ್ಕುಗಳ ಕಾರ್ಯಕರ್ತ ಮಿಗುಯೆಲ್ ದಾಸ್ ಕ್ವಾಹ್ ಅವರಿಗೆ ವೈದ್ಯ ದಂಪತಿಯ ಮನೆಯಲ್ಲಿ ಬಾಲಕಿಯನ್ನು ಬಿಸಿಲಿನ ಶಾಖದಲ್ಲಿ ಟೆರೇಸ್‌ನಲ್ಲಿ ಕಂಬಕ್ಕೆ ಕಟ್ಟಿರುವುದನ್ನು ಕೆಲ ಮಾಹಿತಿದಾರರು ಹೇಳಿದ್ದಾರೆ. ಇದೇ ವಿಚಾರವನ್ನು ಮಿಗುಯೆಲ್ ದಾಸ್ ಪೊಲೀಸರಿಗೆ ಹೇಳಿದ ಬಳಿಕ ಕಳೆದ ತಿಂಗಳು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.