'ಸಾಯುವವರೆಗೆ ನಿಮ್ಮ ಗುಲಾಮರಾಗಿರುತ್ತೇವೆ' 17 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿ ತನ್ನ ತಮ್ಮನನ್ನು ಕಾಪಾಡಲು 7 ವರ್ಷದ ಬಾಲಕಿ ರೋಧಿಸಿದ ವಿಡಿಯೋ ವೈರಲ್
ಡಮಾಸ್ಕಸ್: ಟರ್ಕಿ (Turkey Earthquake) ಮತ್ತು ಸಿರಿಯಾದಲ್ಲಿ (Syria Earthquake) 7.8 ತೀವ್ರತೆಯ ಭೂಕಂಪ ಸಂಭವಿಸಿ, 7,800ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಈ ಭೀಕರ ಭೂಕಂಪದಲ್ಲಿ ಅವಶೇಷಗಳಡಿ ಸಿಲುಕಿರುವ ಲಕ್ಷಾಂತರ ಜನರ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಭೂಕಂಪ ಸಂಭವಿಸಿ ಒಂದೂವರೆ ದಿನವಾದರೂ ಕೆಲವರು ಅಚ್ಚರಿಯ ರೀತಿಯಲ್ಲಿ ಬದುಕಿ ಬಂದಿರುವ ಘಟನೆಗಳು, ಅದರ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸಿರಿಯಾದಲ್ಲಿ ಉಂಟಾದ ಭೂಕಂಪದ ಸಂದರ್ಭದಲ್ಲಿ ಮಾನವೀಯ ಮುಖವನ್ನು ಪರಿಚಯಿಸುವ ಅನೇಕ ಘಟನೆಗಳು ಕೂಡ ನಡೆದಿವೆ. ಸಿರಿಯಾದಲ್ಲಿ ಅಪ್ಪನೊಬ್ಬ ತಾನು ಸಾಯುವ ಕೊನೆ ಕ್ಷಣದಲ್ಲೂ ಮಗನನ್ನು ತಬ್ಬಿ ಹಿಡಿದು, ಆತನನ್ನು ಕಾಪಾಡಲು ಹೆಣಗಾಡಿದ್ದ. ಆದರೆ, ಮಗನನ್ನು ತಬ್ಬಿಕೊಂಡ ರೀತಿಯಲ್ಲೇ ಆ ತಂದೆ-ಮಗು ಇಬ್ಬರೂ ಹೆಣ ಪತ್ತೆಯಾಗಿದ್ದಾರೆ. ಇದರ ನಡುವೆ, ಅವಶೇಷಗಳಡಿ ಸಿಲುಕಿದ್ದ 7 ವರ್ಷದ ಬಾಲಕಿಯೊಬ್ಬಳು ತನ್ನ ತಮ್ಮನನ್ನು ರಕ್ಷಿಸಲು ಆತನ ತಲೆ ಮೇಲೆ ಕೈಯನ್ನು ಇಟ್ಟುಕೊಂಡು, 17 ಗಂಟೆಗಳ ಕಾಲ ತಮ್ಮಿಬ್ಬರನ್ನೂ ಕಾಪಾಡುವ ಕೈಗಳಿಗಾಗಿ ಕಾಯುತ್ತಿದ್ದಳು. ಕೊನೆಗೂ ಆಕೆಯ ಪ್ರಾರ್ಥನೆ ನೆರವೇರಿದ್ದು, ರಕ್ಷಣಾ ಸಿಬ್ಬಂದಿ ಆಕೆ ಹಾಗೂ ಆಕೆಯ ಪುಟ್ಟ ತಮ್ಮನನ್ನು ರಕ್ಷಿಸಿದ್ದಾರೆ.
7 ವರ್ಷದ ಬಾಲಕಿ ತನ್ನ ತಮ್ಮನನ್ನು ಕಾಪಾಡಲು 17 ಗಂಟೆಗಳ ಕಾಲ ತನ್ನ ಜೀವವನ್ನೂ ಒತ್ತೆಯಾಗಿಟ್ಟು ಅವಶೇಷಗಳಡಿ ಅಲುಗಾಡದೆ ಮಲಗಿದ್ದ ವಿಡಿಯೋ ಭಾರೀ ವೈರಲ್ ಆಗಿದೆ. ಈ ವೇಳೆ ರಕ್ಷಣಾ ಸಿಬ್ಬಂದಿ ಆಕೆಯ ಬಳಿ ಹೋದಾಗ ಆಕೆ ನಮ್ಮಿಬ್ಬರನ್ನೂ ಹೇಗಾದರೂ ಇಲ್ಲಿಂದ ಕಾಪಾಡಿ. ನಾವು ಜೀವನಪೂರ್ತಿ ನಿಮಗೆ ಗುಲಾಮರಾಗಿರುತ್ತೇವೆ ಎಂದು ಹೇಳಿರುವ ವಿಡಿಯೋ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಖಚಿತ.
ಈ ಫೋಟೋ ಮತ್ತು ವಿಡಿಯೋವನ್ನು ವಿಶ್ವಸಂಸ್ಥೆಯ ಪ್ರತಿನಿಧಿ ಮೊಹಮದ್ ಸಫಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 17 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿದ್ದಾಗ ತಮ್ಮನನ್ನು ರಕ್ಷಿಸಲು ತನ್ನ ಕೈಗಳನ್ನು ಆತನ ತಲೆಯ ಮೇಲೆ ಇಟ್ಟುಕೊಂಡ 7 ವರ್ಷದ ಬಾಲಕಿ ಕೊನೆಗೂ ಅಪಾಯದಿಂದ ಪಾರಾಗಿದ್ದಾಳೆ. ಒಂದುವೇಳೆ ತಮ್ಮನನ್ನು ಕಾಪಾಡಲು ಹೋಗಿ ಆಕೆ ಮೃತಪಟ್ಟಿದ್ದರೆ ಎಲ್ಲರೂ ಆಕೆಯನ್ನು ಹೀರೋ ರೀತಿ ನೋಡುತ್ತಿದ್ದರು, ಆ ವಿಡಿಯೋವನ್ನು ಹಂಚಿಕೊಂಡು ಸಂತಾಪ ತೋರಿಸುತ್ತಿದ್ದರು. ಇಂತಹ ಪಾಸಿಟಿವ್ ವಿಡಿಯೋಗಳನ್ನೂ ಹಂಚಿಕೊಳ್ಳಿ. ಆ ಬಾಲಕಿಯ ಜೀವನಪ್ರೀತಿಯನ್ನು ಮೆಚ್ಚಿ ಈ ವಿಡಿಯೋ ಶೇರ್ ಮಾಡಿ ಎಂದು ಸಫಾ ಟ್ವೀಟ್ ಮಾಡಿದ್ದಾರೆ.