ಇಂದು ದೇಶದ ಸಂವಿಧಾನ ಜಾರಿಗೆ ಬಂದ ದಿನ: ಘನತೆಯತ್ತ ಸಾಗುತ್ತಿದೆ ಭಾರತದ ಗಣತಂತ್ರ
ಭಾರತ ಇಂದು ಜಗತ್ತಿನ 5ನೇ ಪ್ರಬಲ ಆರ್ಥಿಕ ಶಕ್ತಿಯಾಗಿದೆ. ಹಾಲು, ಸಕ್ಕರೆ, ಧಾನ್ಯ, ಹಣ್ಣು, ತರಕಾರಿ ಉತ್ಪಾದನೆಯಲ್ಲಿ ಹಲವಾರು ಪ್ರಥಮಗಳನ್ನು ಸಾಧಿಸಿದೆ. ನೆರೆಯ ದೇಶಗಳಲ್ಲಿ ಆಹಾರಕ್ಕಾಗಿ ಹಾಹಾಕಾರ ಎದ್ದಿದೆ. ಆದರೆ ಭಾರತ ತನ್ನ ಶೇ.80ರಷ್ಟು ಜನರಿಗೆ ಉಚಿತ ಆಹಾರಧಾನ್ಯ ಹಂಚುವಷ್ಟು ಸಮೃದ್ಧವಾಗಿದೆ. ವ್ಯಾಪಾರ, ವ್ಯವಹಾರ, ವೈದ್ಯಕೀಯ ಮತ್ತು ರಾಜತಾಂತ್ರಿಕತೆ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ವಿಷಯದಲ್ಲೂ ಭಾರತವನ್ನು ಕಡೆಗಣಿಸಲಾಗದ ಸ್ಥಿತಿ ಜಾಗತಿಕ ವಲಯದಲ್ಲಿ ನಿರ್ಮಾಣವಾಗಿದೆ.
ಭಯೋತ್ಪಾದನೆ, ದೇಶದ್ರೋಹ, ನಕ್ಸಲ್‌ವಾದಗಳ ಮಗ್ಗಲು ಮುರಿದಿದೆ. ಪ್ರಬಲ ರಕ್ಷಣಾ ವ್ಯವಸ್ಥೆಯ ವ್ಯೂಹ ದೇಶವನ್ನು ಆಂತರಿಕ ಮತ್ತು ಬಾಹ್ಯ ವೈರಿಗಳಿಂದ ಸುರಕ್ಷಿತವಾಗಿಸಿದೆ. ಇಡೀ ಜಗತ್ತಿಗೆ ಆರ್ಥಿಕ ಕುಸಿತ ಉಂಟಾದರೂ ಭಾರತ ನಲುಗದಂತೆ ನಿಂತಿದೆ. ಕೊರೊನಾದಂತಹ ಹೆಮ್ಮಾರಿಯನ್ನು ಕಟ್ಟಿಹಾಕುವ ಔಷಧಿ ಕಂಡು ಹಿಡಿದಿದೆ. ಅಭಿವೃದ್ಧಿಯ ಹೊಸ ಪರ್ವವೇ ಆರಂಭವಾಗಿದೆ. ಹೀಗಾಗಿ ಜಗತ್ತು ಇಂದು ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.
ಮುಂಬರುವ ದಿನಗಳಲ್ಲಿ ಭಾರತ ಜಗತ್ತಿನ ಪ್ರಬಲ ರಾಷ್ಟ್ರವಾಗಲಿದೆ. ಅದಕ್ಕೆಲ್ಲ ಕಾರಣ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ವಿದೇಶಾಂಗ ನೀತಿ, ಅಭಿವೃದ್ಧಿ ಯೋಜನೆಗಳು ಮತ್ತು ಸರ್ವೋತ್ತಮ ನಾಯಕತ್ವ. ಸಂವಿಧಾನ ನಿರ್ಮಾಪಕರ ಉದ್ದೇಶ ಈ ದೇಶ ಸಹಕಾರಿ ತತ್ವದ ಮೇಲೆ ರಚನೆಯಾದ ಸಶಕ್ತ ಒಕ್ಕೂಟ ವ್ಯವಸ್ಥೆಯಾಗಬೇಕು. ಪಕ್ಷ ರಾಜಕಾರಣದ ಭಿನ್ನ ಹಿತಾಸಕ್ತಿಯ ಕಾರಣಕ್ಕೆ ರಾಜ್ಯ ಸರ್ಕಾರಗಳು ಪ್ರತ್ಯೇಕ ಡೋಮಿನಿಯನ್ ರೀತಿಯಲ್ಲಿ ವರ್ತಿಸಬಾರದು ಎಂಬುದಾಗಿತ್ತು. ಅಭಿವ್ಯಕ್ತಿ ಹೆಸರಿನಲ್ಲಿ ಸ್ಯೂಡೋ ಸೆಕ್ಯೂಲರ್‌ಗಳು, ಭಯೋತ್ಪಾದಕರು ಹಾಗೂ ಅಭಿವೃದ್ಧಿವಿರೋಧಿ ಮನಸ್ಥಿತಿಯ ಕೆಲ ಮಾಧ್ಯಮಗಳು ದೇಶದ ಅಖಂಡತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಲೇ ಇದ್ದರೂ ಕಠಿಣ ಕಾನೂನು ವ್ಯವಸ್ಥೆ ಮತ್ತು ಸಶಕ್ತ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿವೆ.