ಮಂಗಳೂರಿನಲ್ಲಿ ಸಾಂಕೇತ್ ಪ್ರೀಮಿಯರ್ ಶೋ: ಮೈ ಜುಮ್ ಎನಿಸುವ ದೃಶ್ಯಗಳಿಂದ ಮನಸೂರೆ ಗೊಂಡ ಕನ್ನಡ ಚಲನಚಿತ್ರ
ಮಂಗಳೂರು: ಮಂಗಳೂರಿನ ಭಾರತ್ ಮಾಲ್ ನಲ್ಲಿ ರಿವರ್ ಸ್ಟ್ರೀಮ್ ಪ್ರೊಡಕ್ಷನ್ ರವರ ಕಾರ್ತಿಕ್ ರಾಜ್ ಹಾಗೂ ಜೋಶ್ನಾ ರಾಜ್ ನಿರ್ಮಾಣದ ಕನ್ನಡ ಚಲನಚಿತ್ರ ಸಾಂಕೇತ್ ಪ್ರೀಮಿಯರ್ ಶೋ (Sanket premiere show) ಜರುಗಿದ್ದು, ತನ್ನ ಪ್ರಥಮ ಪ್ರದರ್ಶನದಲ್ಲಿ ಜನರ ಮನವನ್ನು ಗೆದ್ದಿದೆ.
ಇದು ಕನ್ನಡದ ಪ್ರಮುಖ ಮೈಲುಗಲ್ಲು ಸೃಷ್ಟಿಸುವ ಚಿತ್ರವಾಗುವ ಎಲ್ಲಾ ಲಕ್ಷಣಗಳನ್ನು ಪ್ರಥಮ ಪ್ರದರ್ಶನದಲ್ಲಿ ತೋರಿಸಿದೆ ಎಂದು ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.
ಮಂಗಳೂರು ಮೂಲದ ನಟಿ ಚೈತ್ರಾ ಶೆಟ್ಟಿ, ವಿಕ್ಕಿ ರಾವ್, ಮೋಹನ್ ಶೇನಿ ಪ್ರಮುಖ ಪಾತ್ರದಲ್ಲಿರುವ ಈ ಚಲನಚಿತ್ರ ಪ್ರೇಕ್ಷಕರನ್ನು ಮೈ ರೋಮಾಂಚನಗೊಳಿಸುವ ದೃಶ್ಯ ಹಾಗೂ ಸಂಗೀತದ ಮೂಲಕ ಬಹುವಾಗಿ ಗಮನ ಸೆಳೆದಿದೆ.
ಈ ತಿಂಗಳ 26 ರಂದು ಕರ್ನಾಟಕ ರಾಜ್ಯದ್ಯಂತ ಬಿಡುಗಡೆಯಾಗಲಿರುವ ಭರವಸೆಯ ಚಲನಚಿತ್ರ ಸಾ೦ಕೇತ್, ತನ್ನ ರೋಮಾಂಚನದ ಕಥೆಯ ಮೂಲಕ ಪ್ರೇಕ್ಷಕರನ್ನು ಮುಟ್ಟಲಿದೆ ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ.
ವ್ಯಕ್ತಿಗಳು ಎದುರಿಸುವ ಸಾಮಾಜಿಕ ಹಾಗೂ ಮಾನಸಿಕ ಒತ್ತಡಗಳ ಆಧಾರವಾಗಿರಿಸಿ, ಒಬ್ಬ ವ್ಯಕ್ತಿಯ ಮದುವೆ-ಮಕ್ಕಳ ವಿಷಯದ ತೊಳಲಾಟವನ್ನು ಬಿಂಬಿಸುವ ವಿಭಿನ್ನ ಶೈಲಿಯ ‘ಸಾಂಕೇತ್’ ಕನ್ನಡ ಸಿನೆಮಾ ಜು.26ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಪತ್ರಿಕಾಭವನದಲ್ಲಿ ಸೋಮವಾರ (ಜು.15ರಂದು) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿನೆಮಾದ ನಿರ್ದೇಶಕಿ ಜ್ಯೋತ್ಸ್ನಾ ಕೆ.ರಾಜ್ ಅವರು, ತನ್ನ ಜೀವನವು ಮದುವೆ ಆಗಿ ಮಕ್ಕಳನ್ನು ಹೊಂದಿದಾಗ ಮಾತ್ರ ಪೂರ್ಣವಾಗುತ್ತದೆ ಎಂದು ಒಬ್ಬ ಯುವಕ ನಂಬಿರುತ್ತಾನೆ. ಆದರೆ ಮದುವೆಯ ಕೆಲವು ವರ್ಷಗಳ ನಂತರ ಮಕ್ಕಳನ್ನು ಹೊಂದುವ ಯಾವುದೇ ವಿಧಾನ ಫಲ ನೀಡದಾಗ ತಲ್ಲಣಗೊಂಡ ವ್ಯಕ್ತಿ ಅಸಾಂಪ್ರದಾಯಿಕ ವಿಧಾನ ಪರಿಶೀಲಿಸಲು ಹೊರಡುತ್ತಾನೆ. ತನ್ನ ಸುತ್ತಲಿನ ಪ್ರತಿಯೊಬ್ಬರ ಜೀವನವನ್ನು ಯಾವ ರೀತಿ ಅಪಾಯಕ್ಕೆ ಸಿಲುಕಿಸುತ್ತಾನೆ ಎಂಬುದನ್ನು ಆಧಾರವಾಗಿಸಿ ಸಿನಿಮಾ ಮಾಡಲಾಗಿದೆ. ಇದೊಂದು ಕನ್ನಡದ ವಿಭಿನ್ನ ಪ್ರಯತ್ನ ಎಂದರು.
ನಟಿ ಚೈತ್ರಾ ಶೆಟ್ಟಿ ಮಾತನಾಡಿ, ಸ್ವತಃ ಸಂಪಾದನೆ, ಧ್ವನಿ ವಿನ್ಯಾಸ ಹಾಗೂ ನಿರ್ದೇಶನವನ್ನು ಜ್ಯೋತ್ಸ್ನಾ ಕೆ.ರಾಜ್ ನಿಭಾಯಿಸಿದ್ದಾರೆ. ವಿಕ್ಕಿ ರಾವ್, ಮೋಹಣ್ ಶೇಣಿ, ರೂಪಾಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರೀಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ ರಕ್ಷಿತಾ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ಟ್ರೈಲರ್ ಈಗಾಗಲೇ ಸಾಕಷ್ಟು ಗಮನಸೆಳೆದಿದೆ. ಹೀಗಾಗಿ ಸಿನೆಮಾದ ಬಗ್ಗೆ ಭಾರೀ ನಿರೀಕ್ಷೆ ಇದೆ ಎನ್ನುತ್ತಾರೆ.
ನಿರ್ದೇಶಕಿ ಜ್ಯೋತ್ಸ್ನಾ ಕೆ.ರಾಜ್ ಅವರು ಸಂಕಲನಕಾರ ಹಾಗೂ ಧ್ವನಿ ವಿನ್ಯಾಸಕಿಯಾಗಿ ಸಾಧನೆ ಮಾಡಿದ್ದು ಕೇರಳದ ಕುಂಬಳೆಯವರು. 2018ರಲ್ಲಿ ನಾಟಕ ತಂಡವನ್ನು ಕಟ್ಟುವ ಪ್ರಯತ್ನ ನಡೆಸಿದ್ದರು. ಸಿನಿಮಾ ಕುರಿತಾದ ವಿಶೇಷ ಅನುಭವ ಪಡೆದಿದ್ದಾರೆ. ರಾಜ್ ಕಾರ್ತಿಕ್ ಅವರು ಸಿನೆಮಾಟೊಗ್ರಫಿ ನಡೆಸಿದ್ದಾರೆ. ಪ್ರಕಾಶ್ ವಿ.ರಾವ್ ಸಾಹಿತ್ಯ ಬರೆದಿದ್ದು, ವಿವಿಧ ಯುವ ತಂಡವೇ ಸಿನೆಮಾ ಮಾಡಿದ್ದಾರೆ ಎಂದರು.