ಮೂವರು ಅನಾಥ ಸಹೋದರಿಯರು ಆತ್ಮಹತ್ಯೆಗೆ ಶರಣು
ತುಮಕೂರು: ಅನಾಥರಾಗಿದ್ದ ಮೂವರು ಸಹೋದರಿಯರು ಮನೆಯಲ್ಲಿ ನೇಣು ಬಿಗಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ನಡೆದಿದೆ.
9 ದಿನಗಳ ಹಿಂದೆಯೇ ಈ ದಾರುಣ ಘಟನೆ ನಡೆದಿದ್ದು, ಕೊಳೆತ ವಾಸನೆ ಬಂದ ಬಳಿಕ ಸ್ಥಳೀಯರು ಗಮನಿಸಿದಾಗ ಗುರುವಾರ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಸಹೋದರಿಯರನ್ನು ಬರಕನಹಾಲ್ ತಾಂಡ್ಯದ ರಂಜಿತಾ(24), ಚಂದನಾ(21 ) ಹಾಗೂ ಬಿಂದು(18) ಎಂದು ಗುರುತಿಸಲಾಗಿದೆ.
10 ವರ್ಷಗಳ ಹಿಂದೆಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಈ ಸಹೋದರಿಯರು ಅಜ್ಜಿ ಜೊತೆಯಲ್ಲಿ ವಾಸವಿದ್ದರು. ಆದರೆ ಆಸರೆಯಾಗಿದ್ದ ಅಜ್ಜಿಯೂ ಸಹ ಇತ್ತೀಚೆಗೆ ಮರಣ ಹೊಂದಿದ್ದರು. ಬಳಿಕ ಸಹೋದರಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಈ ಮೂವರು ಸಹೋದರಿಯರ ಪೈಕಿ ಇಬ್ಬರು ಕಿಬ್ಬನಹಳ್ಳಿಯ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಈ ಸಹೋದರಿಯರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಎಎಸ್ಪಿ ಸಿದ್ದಾರ್ಥ್ ಗೋಯೆಲ್, ಸಿಪಿಐ ನಿರ್ಮಲಾ, ಪಿಎಸ್ಐ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.