ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಆಲ್ರೌಂಡರ್ ಅಕ್ಷರ್ ಪಟೇಲ್
ಕ್ರಿಕೆಟ್ ಲೋಕದಲ್ಲಿ ಮದುವೆಯ ಗುಂಗು ಜೋರಾಗಿದೆ. ಮೊನ್ನೆಯಷ್ಟೆ ಟೀಮ್ ಇಂಡಿಯಾದ ಉಪ ನಾಯಕ ಕೆ.ಎಲ್ ರಾಹುಲ್, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಭಾರತ ತಂಡದ ಆಫ್ ಸ್ಪಿನ್ನರ್ ಅಕ್ಷರ್ ಪಟೇಲ್ ವಿವಾಹವಾಗಿದ್ದಾರೆ.
ಅಕ್ಷರ್ ಪಟೇಲ್ ತಮ್ಮ ಬಹುಕಾಲದ ಗೆಳತೆ ಮೇಹಾ ಪಟೇಲ್ ಅವರನ್ನು ಗುರುವಾರ (ಜನವರಿ 26ರಂದು)ಮದುವೆಯಾದರು. ಆಪ್ತರು ಹಾಗೂ ಬಂಧುಗಳ ಸಮ್ಮುಖದಲ್ಲಿ ವಡೋದರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಜೋಡಿ ಹಸೆಮಣೆಗೆ ಕಾಲಿಟ್ಟಿತು.
ಡಯೆಟಿಷಿಯನ್ ಆಗಿರುವ ಮೇಹಾ ಅವರು ಪ್ರಾಣಿ ಪ್ರಿಯೆಯೂ ಹೌದು. ಈ ಮದುವೆಯಲ್ಲಿ ಟೀಮ್ ಇಂಡಿಯಾ ಮತ್ತು ಗುಜರಾತ್ನ ಕೆಲವು ಆಟಗಾರರು ಭಾಗಿಯಾಗಿದ್ದರು.
ಅಕ್ಷರ್ ಪಟೇಲ್ ಮತ್ತು ಮೇಹಾ ಪಟೇಲ್ ಇಬ್ಬರೂ ಬಹಳ ಹಿಂದಿನಿಂದಲೂ ಪರಿಚಿತರು. ಗುಜರಾತಿ ಪದ್ಧತಿಯಂತೆ ಇಬ್ಬರೂ ವಿವಾಹವಾಗಲಿದ್ದು, ಅಕ್ಷರ್-ಮೇಹಾ ಒಂದು ವರ್ಷದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಮದುವೆಯ ಸಂಭ್ರಮದಲ್ಲಿ ಅಕ್ಷರ್ ಮತ್ತು ಮೇಹಾ ಪಟೇಲ್ ಸಖತ್ ಸ್ಟೆಪ್ ಹಾಕಿದ್ದು ಅವರ ನೃತ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇವರಿಬ್ಬರ ಜೋಡಿ ತುಂಬಾ ಮುದ್ದಾಗಿ ಕಾಣುತ್ತಿದೆ.
ವಿವಾಹದ ಕಾರಣದಿಂದ ಅಕ್ಷರ್ ಪಟೇಲ್ ಸದ್ಯ ಸಾಗುತ್ತಿರುವ ಭಾರತ-ನ್ಯೂಜಿಲೆಂಡ್ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿದ್ದಾರೆ. ಕಿವೀಸ್ ತಂಡದ ವಿರುದ್ಧದ ಸರಣಿಯಿಂದ ವಿರಾಮ ತೆಗೆದುಕೊಳ್ಳಲು ಅವರು ಬಿಸಿಸಿಐನಿಂದ ಅನುಮತಿ ಕೋರಿದ್ದರು. ಅಕ್ಷರ್ ಫೆಬ್ರವರಿಯಲ್ಲಿ ಮತ್ತೊಮ್ಮೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2021ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಅಕ್ಷರ್ ಪಟೇಲ್ 2014ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು ಕೇವಲ 8 ಟೆಸ್ಟ್ ಪಂದ್ಯಗಳಲ್ಲಿ 47 ವಿಕೆಟ್ ಪಡೆದಿದ್ದಾರೆ. ಏಕದಿನದಲ್ಲಿ 56 ವಿಕೆಟ್ ಹಾಗೂ ಟಿ20ಯಲ್ಲಿ 37 ವಿಕೆಟ್ ಪಡೆದಿರುವ ಈ ಆಲ್ ರೌಂಡರ್ ಬ್ಯಾಟ್ ನಲ್ಲೂ ಅದ್ಭುತ ಸಾಧನೆ ಮಾಡಿದ್ದಾರೆ.