ಸಂಪತ್ ಸುವರ್ಣ, ಉಮಾನಾಥ ಕೋಟ್ಯಾನ್, ಸತೀಶ್ ಕುಂಪಲ. ಮೂರು ಬಿಲ್ಲವರಿಗೆ ಅವಕಾಶ ನೀಡಿ ಕಾಂಗ್ರೆಸ್ ವಿರುದ್ಧ ತಂತ್ರಗಾರಿಕೆ ಮೆರೆಯಲು ಬಿಜೆಪಿ ತಯಾರಿ?
ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಕುತೂಹಲ ಕೆರಳಿಸುತ್ತದೆ. ಈ ನಡುವೆ ಬಿಜೆಪಿ ಮಹತ್ವದ ತಂತ್ರಗಾರಿಕೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ. ಈ ತಂತ್ರಗಾರಿಕೆ ಭಾಗವಾಗಿ ಬೆಳ್ತಂಗಡಿ, ಮೂಡಬಿದ್ರೆ ಹಾಗೂ ಮಂಗಳೂರು ಕ್ಷೇತ್ರಗಳಲ್ಲಿ ಬಿಲ್ಲವ ಸಮುದಾಯಕ್ಕೆ ಅವಕಾಶ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ನಲ್ಲಿ ಬಿಲ್ಲವ ಸಮುದಾಯಕ್ಕೆ ಸರಿಯಾದ ಸ್ಥಾನ ಮಾನ ನೀಡಲು ಅಸಾಧ್ಯವಾಗುತ್ತದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಬಿಜೆಪಿ ಈ ಬಹುದೊಡ್ಡ ಮಾಸ್ಟರ್ ಸ್ಟ್ರೋಕ್ ಎಸೆಯಲು ಮುಂದಾಗಿದ್ದು, ಒಂದು ವೇಳೆ ಬಿಜೆಪಿ ಈ ತಂತ್ರಗಾರಿಕೆ ಅನುಸರಿಸಿದ ಪಕ್ಷದಲ್ಲಿ ಕಾಂಗ್ರೆಸ್ ಎಂಟು ಕ್ಷೇತ್ರಗಳಲ್ಲಿ ಕಠಿಣ ಸ್ಪರ್ಧೆ ಎದುರಿಸಬೇಕಾಗಿ ಬರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಈ ತಂತ್ರಗಾರಿಕೆ ಭಾಗವಾಗಿ ಬೆಳ್ತಂಗಡಿಯಿಂದ ಸಂಪತ್ ಸುವರ್ಣ, ಮೂಡಬಿದ್ರೆಯಿಂದ ಉಮಾನಾಥ ಕೋಟ್ಯಾನ್, ಮಂಗಳೂರಿನಿಂದ ಸತೀಶ್ ಕುಂಪಲ ಅಭ್ಯರ್ಥಿಗಳಾಗುವ ಸಾಧ್ಯತೆ ಇದೆ, ಬಿಜೆಪಿ ಮೂಲಗಳಿಂದ ವರದಿಯಾಗಿದೆ.
ಇದಕ್ಕೆ ಪ್ರತಿಯಾಗಿ ಬಂಟರಿಗೆ ಬಂಟ್ವಾಳ, ಮಂಗಳೂರು ಉತ್ತರ ನೀಡಲಾಗುತ್ತದೆ. ಅಲ್ಲದೆ ಲೋಕಸಭಾ ಸದಸ್ಯ ಸ್ಥಾನ ಆ ಸಮುದಾಯಕ್ಕೆ ಈ ಮೊದಲು ನೀಡಲಾಗಿದ್ದ ವಿಷಯವನ್ನು ಪರಿಗಣಿಸಿ ಎರಡು ಸಮುದಾಯದ ನಡುವೆ ಬ್ಯಾಲೆನ್ಸ್ ಮಾಡಲು ಬಿಜೆಪಿ ಯೋಚಿಸಿದೆ ಎಂದು ತಿಳಿದುಬಂದಿದೆ. ಎರಡು ಪ್ರಬಲ ಪಂಗಡಕ್ಕೆ ಸಮಾನ ಸ್ಥಾನಮಾನ ನೀಡಲು ಬಿಜೆಪಿ ಯೋಚಿಸಿದೆ ಎಂದು ಮಾಹಿತಿ ಬಿಜೆಪಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.