ಶೌಚಾಲಯಕ್ಕೆ ಹೋಗಿದ್ದ ಪತ್ನಿಯನ್ನು ಮರೆತು ಟ್ರಿಪ್ ಮುಂದುವರಿಸಿ ಫಜೀತಿಗೊಳಗಾದ ಪತಿ!
ಬ್ಯಾಂಕಾಕ್: ವ್ಯಕ್ತಿಯೊಬ್ಬ ಶೌಚಾಲಯಕ್ಕೆ ಹೋಗಿದ್ದ ತನ್ನ ಪತ್ನಿಯನ್ನು ಮರೆತು ಪ್ರವಾಸವನ್ನು ಮುಂದುವರಿಸಿದ ವಿಚಿತ್ರ ಘಟನೆ ಥೈಲ್ಯಾಂಡ್‍ನಲ್ಲಿ (Thailand) ನಡೆದಿದೆ.
ಬೂಂಟೊಮ್ ಚೈಮೂನ್ (55) ಮತ್ತು ಆತನ ಪತ್ನಿ (Wife) ಅಮ್ನುವೇ ಚೈಮೂನ್ (49) ರಜೆಯ ಮಜಾ ಕಳೆಯಲು ರೋಡ್ ಟ್ರಿಪ್ (Road Trip) ಕೈಗೊಂಡಿದ್ದರು. ಟ್ರಿಪ್ ಸಮಯದಲ್ಲಿ ಶೌಚಾಲಯಕ್ಕೆಂದು ಬೆಳಗಿನ ಜಾವ 2 ಗಂಟೆಗೆ ತಮ್ಮ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಆದರೆ ಅಲ್ಲಿ ಸುತ್ತಲೂ ಕಾಡುಗಳಿದ್ದರಿಂದ ಕಾರಿನಿಂದ ಇಳಿದು ಶೌಚಕ್ಕೆಂದು ಮಹಿಳೆ ಹತ್ತಿರದ ಕಾಡಿನೊಳಗೆ ಹೋಗಿದ್ದಾಳೆ. ಆದರೆ ಇತ್ತ ಆಕೆಯ ಪತಿ ಬೂಂಟೊಮ್ ತನ್ನ ಪತ್ನಿ ಅಮ್ನುವೇ ಚೈಮೂನ್ ವಾಹನದಿಂದ ಇಳಿದಿರುವುದನ್ನು ಗಮನಿಸಿರಲಿಲ್ಲ. ಇದರಿಂದಾಗಿ ಆತ ತನ್ನ ಪ್ರವಾಸವನ್ನು ಮುಂದುವರಿಸಿದ್ದಾನೆ.
ಇತ್ತ ಅಮ್ನುವೇ ಚೈಮೂನ್ ಕಾಡಿನಿಂದ ಹಿಂದಿರುಗಿ ಬಂದಿದ್ದಾಳೆ. ಆದರೆ ಆ ವೇಳೆ ಕಾರಾಗಲೀ, ಗಂಡನಾಗಲೀ ಕಾಣಿಸಲಿಲ್ಲ. ಇದರಿಂದಾಗಿ ಆಕೆ ತನ್ನನ್ನು ಬಿಟ್ಟು ಹೋಗಿದ್ದಾನೆ ಎಂದು ಬಹುಬೇಗನೇ ಅರಿತುಕೊಂಡಿದ್ದಾಳೆ. ಈ ವಿಷಯವನ್ನು ತನ್ನ ಪತಿಗೆ ತಿಳಿಸಬೇಕು ಎಂದುಕೊಂಡರೂ ಆಕೆ ಬಳಿ ಮೊಬೈಲ್ ಇರಲಿಲ್ಲ ಬದಲಿಗೆ ಕಾರಿನಲ್ಲೇ ಇರುವುದನ್ನು ನೆನಪಿಸಿಕೊಂಡಿದ್ದಾಳೆ. ಇತ್ತ ತುಂಬಾ ಕತ್ತಲಾಗಿದ್ದರಿಂದ ಭಯಭೀತಳಾಗಿದ್ದಳು.
ಆದರೂ ಆಕೆ ಸುಮಾರು 20 ಕಿ.ಮೀ ಸಂಚರಿಸಿ ಕಬಿನ್ ಬುರಿ ಜಿಲ್ಲೆಯನ್ನು ತಲುಪಿದ್ದಾಳೆ. ಅಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿದ್ದು, ತನ್ನ ಪತಿಗೆ ಈ ವಿಷಯವನ್ನು ತಿಳಿಸಲು ಕೇಳಿಕೊಂಡಿದ್ದಾಳೆ. ಆದರೆ ಆಕೆಗೆ ಪತಿಯ ನಂಬರ್ ನೆನಪಿಲ್ಲದ ಕಾರಣ 20 ಬಾರಿ ತನ್ನ ನಂಬರ್‌ಗೆ ಕರೆ ಮಾಡಿದ್ದಾಳೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಅದಾದ ಬಳಿಕ ಬೆಳಗ್ಗೆ 8ರ ಸುಮಾರಿಗೆ ಪೊಲೀಸರ ಸಹಾಯದಿಂದ ಪತಿಯನ್ನು ಸಂಪರ್ಕಿಸಿದ್ದಾಳೆ. ಆದರೆ ಆವರೆಗೂ ಆತನಿಗೆ ಪತ್ನಿ ಕಾರಿನಲ್ಲಿ ಇರಲಿಲ್ಲವೆಂಬ ಯಾವುದೇ ಸುಳಿವಿರಲಿಲ್ಲ. ಆತ ಕಾರಿನ ಹಿಂಬದಿ ಸೀಟಿಯಲ್ಲಿ ತನ್ನ ಪತ್ನಿ ಗಾಢ ನಿದ್ದೆಯಲ್ಲಿದ್ದಾಳೆ ಎಂದುಕೊಂಡಿದ್ದ. ಅಷ್ಟೇ ಅಲ್ಲದೇ ಆತ ಸುಮಾರು 159 ಕಿ.ಮೀ ದೂರದವರೆಗೆ ಹೋಗಿದ್ದ.
ತನ್ನ ಪತ್ನಿಯನ್ನು ಬಿಟ್ಟುಬಂದಿದ್ದೇನೆ ಎಂಬ ವಿಷಯ ತಿಳಿದಾಕ್ಷಣ ಆತ ತನ್ನ ಪತ್ನಿಯನ್ನು ಕರೆದುಕೊಂಡು ಬರಲು ವಾಪಸ್ ತೆರಳಿದ್ದಾನೆ. ಅಷ್ಟೇ ಅಲ್ಲದೇ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾನೆ. ದಂಪತಿಗೆ 27 ವರ್ಷಗಳ ಹಿಂದೆ ಮದುವೆಯಾಗಿದ್ದು, 26 ವರ್ಷದ ಮಗನಿದ್ದಾನೆ.