ಶಿರಾಡಿ ಘಾಟ್ ನಲ್ಲಿ ಓಮ್ನಿ ಕಾರಿನ ಮೇಲೆ ಮಣ್ಣು ಕುಸಿತ; ಅಪಾಯದಿಂದ ಪಾರಾದ ಪ್ರಯಾಣಿಕರು
ನೆಲ್ಯಾಡಿ: ಸಕಲೇಶಪುರ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡತಪ್ಪಲು ಎಂಬಲ್ಲಿ (ಶಿರಾಡಿ ಘಾಟ್ ನಲ್ಲಿ) ಭೂ ಕುಸಿತ ಉಂಟಾಗಿ ಓಮಿನಿಯೊಂದು ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾದ ಘಟನೆ ಜು.18ರ ಗುರುವಾರ ನಸುಕಿನ ಜಾವ 2.30ರ ಸಮಯಕ್ಕೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಘಟನೆ ನಡೆದಿದೆ. ಸಕಲೇಶಪುರ ತಾಲ್ಲೂಕಿನ, ಎತ್ತಿನಹಳ್ಳ ಬಳಿ ಮಳೆಯ ಅಬ್ಬರದ ನಡುವೆ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮಣ್ಣು ಕುಸಿದಿದೆ. ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
KA-17 M 5003 ನಂಬರ್‌ನ ಓಮ್ನಿ ಕಾರು ಮಣ್ಣಿನಡಿ ಸಿಲುಕಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಂದಾಯ ಇಲಾಖೆ ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ಬೇಲೂರು ತಾಲೂಕಿನ ಬಿಕ್ಕೊಡು ಮೂಲದ ಶರತ್ ಎಂಬವರು ಮಂಗಳೂರು ಕಡೆಯಿಂದ ಸಕಲೇಶಪುರ ಮಾರ್ಗವಾಗಿ ಬರುವ ಸಂದರ್ಭ ದೊಡ್ಡತಪ್ಪಲು ಸಮೀಪ ಭೂ ಕುಸಿತ ಉಂಟಾಗಿ ಕಾರಿನ ಮೇಲೆ ಬಿದ್ದಿದ್ದು ಕಾರು ಮಣ್ಣಿನ ರಾಶಿಯಲ್ಲಿ ಸಿಲುಕಿ ಸಂಪೂರ್ಣವಾಗಿ ಕುಸಿದಿದೆ.
ಈ ಸಂದರ್ಭದಲ್ಲಿ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಕಂಪನಿಯ ಬಿಹಾರ ಮೂಲದ ಕಾರ್ಮಿಕಕರು ಅಖಿಲೇಶ್, ಶರತ್ ಅವರನ್ನು ವಾಹನದಿಂದ ಹೊರಗೆ ಕರೆತಂದು ಅವರ ಪ್ರಾಣ ಉಳಿಸಿದ್ದಾರೆ. ಅಖಿಲೇಶ್ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಶರತ್ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭೂ ಕುಸಿತದಿಂದ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಘಟನೆ ನಡೆದ ಸ್ಥಳದಿಂದ ಎರಡೂ ಕಡೆಗೆ 5-5 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೆದ್ದಾರಿ ಕಾಮಗಾರಿಯವರು ಮಣ್ಣು ತೆರವುಗೊಳಿಸು ಕಾರ್ಯದಲ್ಲಿ ನಿರತರಾಗಿದ್ದು, ಮಣ್ಣಿನ ಕುಸಿತ ನಡೆಯುತ್ತಲೇ ಇದೆ. ಸದ್ಯದ ಮಟ್ಟಿಗೆ ಏಕಮುಖ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಹಾಸನದ ಕಂದಲಿ ಗ್ರಾಮದ ಬಳಿಯೇ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದಾರೆ. ಅತ್ತ ಚಾರ್ಮಾಡಿ ಘಾಟ್ ರಸ್ತೆಯಲ್ಲೂ ಪ್ರಯಾಣ ದುಸ್ತರವಾಗಿದ್ದು, ಹಾಸನ ಬಳಿಯೇ ವಾಹನ ನಿಲ್ಲಿಸಲು ಪೊಲೀಸರು ಸೂಚನೆ ನೀಡುತ್ತಿದ್ದಾರೆ.
ಮಾರನಹಳ್ಳಿವರೆಗೆ ನಡೆಯುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯ ಹಲವು ಕಡೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿಯುತ್ತಿದ್ದು ಆತಂಕ ಸೃಷ್ಟಿಯಾಗಿದೆ. ಸಕಲೇಶಪುರ ಪಟ್ಟಣದ ಮಳಲಿ ಬಳಿಯ ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿದು ಬೀಳುತ್ತಿದೆ. ಸಕಲೇಶಪುರದಿಂದ ಆಲೆಬೇಲೂರಿಗೆ ತೆರಳುವ ಮಾರ್ಗದ ಮೇಲ್ಸೇತುವೆಯೇ ಕುಸಿದು ಬೀಳುವ ಭೀತಿ ಎದುರಾಗಿದೆ.
ಸಕಲೇಶಪುರ ಬೈಪಾಸ್ ರಸ್ತೆಯಲ್ಲಿಯೂ ತಡೆಗೋಡೆ ಕುಸಿಯುತ್ತಿದೆ. ಪಟ್ಲಾದಲ್ಲಿಒಂದೇ ದಿನ 12 ಸೆ.ಮೀ. ದಾಖಲೆ ಮಳೆಯಾಗಿ 30ಕ್ಕೂ ಹೆಚ್ಚು ಗ್ರಾಮಗಳು ಕತ್ತಲಲ್ಲಿ ಮುಳುಗಿದೆ. 200ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಸಕಲೇಶಪುರ ಪಟ್ಟಣದ ಹೊಳೆಮಲ್ಲೇಶ್ವರ ದೇವಸ್ಥಾನದ ಊಟದ ಹಾಲ್ ಮೇಲೆ ಒಣಗಿದ ಮರದ ತುಂಡು ಬಿದ್ದು ಚಾವಣಿ ಜಖಂಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ಸಂಚಾರ ದುಸ್ತರವಾಗಿದ್ದು, ಧಾರಾಕಾರ ಮಳೆಯಿಂದ ವಾಹನ ಸವಾರರಿಗೆ ರಸ್ತೆಯೇ ಕಾಣದಂತಾಗಿದೆ. ಮರ ಹಾಗೂ ರಸ್ತೆಬದಿ ಗುಡ್ಡ ಕುಸಿಯುತ್ತಿದ್ದು, ಸಂಚಾರ ತ್ರಾಸದಾಯಕವಾಗಿದೆ. ಜಿಲ್ಲೆಯ ಹಾಸನ, ಸಕಲೇಶಪುರ, ಆಲೂರು, ಬೇಲೂರು ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನ ಮನೆಯಿಂದ ಹೊರ ಬರಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು ಬಸ್ಗಳ ಸಂಚಾರಕ್ಕೆ ತಡೆ: ಸಕಲೇಶಪುರದವರೆಗೆ ತೆರಳುವ ಸಾರಿಗೆ ಬಸ್ಗಳಿಗೆ ಮಾತ್ರ ತೆರಳಲು ಅವಕಾಶ ನೀಡಲಾಗುತ್ತಿದೆ. ಮಂಗಳೂರು ಕಡೆಗೆ ಹೋಗುವ ಬಸ್ಗಳಿಗೂ ಹಾಸನ ತಾಲ್ಲೂಕಿನ ಕಂದಲಿ ಬಳಿ ತಡೆಯೊಡ್ಡಲಾಗುತ್ತಿದೆ. ವಾಹನಗಳನ್ನು ತಡೆದು ಗುಡ್ಡ ಕುಸಿತದ ಬಗ್ಗೆ ಮಾಹಿತಿ ನೀಡಿ ವಾಪಸ್ ಕಳುಹಿಸಲಾಗುತ್ತಿದೆ. ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನಗಳಿಗೆ ತಡೆಯೊಡ್ಡಲಾಗುತ್ತಿದೆ.