ಶಾಸಕಿ ಸೌಮ್ಯಾ ರೆಡ್ಡಿ ಕಾರಿನಲ್ಲಿ 20 ಸೀರೆ, 14 ಮೊಬೈಲ್‌ಗಳು ಪತ್ತೆ: ದೂರು ದಾಖಲು
ಬೆಂಗಳೂರು (ಏ.07): ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಅವರಿಗೆ ಸೇರಿದ ಕಾರನ್ನು ಚುನಾವಣಾ ವಿಚಕ್ಷಣ ದಳದ(ಪ್ಲೈಯಿಂಗ್ ಸ್ಕ್ವಾಡ್) ಅಧಿಕಾರಿಗಳು ಗುರುವಾರ ಜಪ್ತಿ ಮಾಡಿದ್ದಾರೆ. ಜಯನಗರದ ವಾಜಪೇಯಿ ಬಸ್ ನಿಲ್ದಾಣದ ಬಳಿ ವಾಹನಗಳ ತಪಾಸಣೆ ಮಾಡುವಾಗ ಸೌಮ್ಯಾ ರೆಡ್ಡಿ ಅವರ ಇನೋವಾ ಕಾರು ಅಲ್ಲಿಗೆ ಬಂದಿದೆ. ಈ ವೇಳೆ ತಪಾಸಣೆ ಮಾಡಿದಾಗ 20 ಸೀರೆಗಳು, 2 ಪಂಚೆಗಳು, 13 ಶಾಲುಗಳು, 14 ಮೊಬೈಲ್‌ಗಳು, ಪ್ಲಾಸ್ಟಿಕ್ ಹಾರಗಳು, ಪ್ರೋಗ್ರೆಸ್ ರಿಪೋರ್ಟ್ ಇರುವ ಬುಕ್‌ಲೆಟ್‌ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ವಿಚಕ್ಷಣ ದಳದ ಅಧಿಕಾರಿಗಳು ಕಾರನ್ನು ಜಪ್ತಿ ಮಾಡಿದ್ದಾರೆ.
ಕಾರು ತಪಾಸಣೆ ವೇಳೆ ಶಾಸಕಿ ಸೌಮ್ಯಾ ರೆಡ್ಡಿ ಅವರು ಕಾರಿನಲ್ಲಿ ಇರಲಿಲ್ಲ. ಚಾಲಕ ರಾಮಚಂದ್ರ ಅವರು ಕಾರಿನಲ್ಲಿ ತೆರಳುವಾಗ ವಿಚಕ್ಷಣ ದಳದ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಜಪ್ತಿ ಮಾಡಿದ ಕಾರನ್ನು ತಿಲಕನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಸೀರೆ, ಪಂಚೆ, ಮೊಬೈಲ್ ಹಂಚಲು ಸಾಗಿಸುತ್ತಿದ್ದ ಆರೋಪದಡಿ ದೂರು ನೀಡಲಾಗಿದೆ. ಈ ದೂರು ಆಧರಿಸಿ ಎನ್‌ಸಿಆರ್ ದಾಖಲಿಸಿರುವ ತಿಲಕನಗರ ಠಾಣೆ ಪೊಲೀಸರು, ಎಫ್‌ಐಆರ್ ದಾಖಲು ನ್ಯಾಯಾಲಯದ ಅನುಮತಿ ಪಡೆಯಲು ಸಿದ್ಧತೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.