ವೃತ್ತಿಜೀವನದ ಕೊನೇ ಗ್ರ್ಯಾಂಡ್ ಸ್ಲಾಂ ಟೂರ್ನಿಯ ಫೈನಲ್‌ನಲ್ಲಿ ಸೋಲು ಕಂಡ ಸಾನಿಯಾ ಮಿರ್ಜಾ!
ಮೆಲ್ಬೋರ್ನ್ (ಜ.27): ಸಾನಿಯಾ ಮಿರ್ಜಾ ತಮ್ಮ ಕೊನೆಯ ಗ್ರ್ಯಾಂಡ್ ಸ್ಲಾಂನಲ್ಲಿ ಸೋಲು ಕಂಡಿದ್ದಾರೆ. ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸಾನಿಯಾ ಮತ್ತು ರೋಹನ್ ಬೋಪಣ್ಣ ಜೋಡಿ 6-7, 6-2 ಸೆಟ್‌ಗಳಿಂದ ಸೋತರು. ಆಸ್ಟ್ರೇಲಿಯನ್ ಓಪನ್ ಟೂರ್ನಿ ತಮ್ಮ ವೃತ್ತಿಜೀವನದ ಕೊನೆಯ ಗ್ರ್ಯಾಂಡ್ ಸ್ಲಾಂ ಟೂರ್ನಿ ಎಂದು ಸಾನಿಯಾ ಮಿರ್ಜಾ ಈಗಾಗಲೇ ಘೋಷಣೆ ಮಾಡಿದ್ದರು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ 2ನೇ ಸುತ್ತಿನಲ್ಲಿಯೇ ಸೋಲು ಕಂಡು ನಿರಾಸೆ ಎದುರಿಸಿದ್ದ ಸಾನಿಯಾ ಮಿರ್ಜಾ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೇರುವ ಮೂಲಕ ಪ್ರಶಸ್ತಿಯ ನಿರೀಕ್ಷೆ ಇಟ್ಟಿದ್ದರು. ಆದರೆ, ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಗೆಲುವಿನ ವಿದಾಯ ಹೇಳುವ ಸಾನಿಯಾ ಮಿರ್ಜಾ ಅವರ ಕನಸು ಭಗ್ನಗೊಂಡಿತು. ಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ 6-7. 2-6 ರಿಂದ ಬ್ರೆಜಿಲ್ ಜೋಡಿ ಲೂಯಿಸಾ ಸ್ಟೆಫಾನಿ ಹಾಗೂ ರಾಫೆಲ್ ಮಾಟೋಸ್ ಜೋಡಿಗೆ ಶರಣಾಯಿತು.
ಸಾನಿಯಾ ಮಿರ್ಜಾ ಅವರು ತಮ್ಮ ವೃತ್ತಿಜೀವನದಲ್ಲಿ ಮೂರು ಮಹಿಳಾ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮತ್ತು ಮೂರು ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬೋಪಣ್ಣ ಒಂದು ಮಿಶ್ರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್‌ನ ಸೆಮಿಫೈನಲ್‌ನಲ್ಲಿ ಭಾರತದ ಶ್ರೇಯಾಂಕ ರಹಿತ ಜೋಡಿ ಸಾನಿಯಾ ಮತ್ತು ಬೋಪಣ್ಣ 7-6(5), 6-7(5), 10-6 ಸೆಟ್‌ಗಳಿಂದ ಡಿಸೈರಿಯಾ ಕ್ರಾವ್‌ಜಿಕ್ ಮತ್ತು ನೀಲ್ ಸ್ಕುಪ್ಸ್ಕಿ ಅವರನ್ನು ಸೋಲಿಸಿದರು. ಈ ಜೋಡಿ ಕ್ವಾರ್ಟರ್‌ಫೈನಲ್‌ನಲ್ಲಿ ವಾಕ್‌ಓವರ್ ಪಡೆದುಕೊಂಡಿತ್ತು. ಭಾರತದ ಜೋಡಿಯು ಉರುಗ್ವೆ ಮತ್ತು ಜಪಾನ್‌ನ ಏರಿಯಲ್ ಬೆಹರ್ ಮತ್ತು ಮಕಾಟೊ ನಿನೋಮಿಯಾ ಜೋಡಿಯನ್ನು 6-4, 7-6 (11-9) ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿತ್ತು.