ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!
ಉಡುಪಿ : ವಿಪರೀತ ಸೆಖೆ ಹಿನ್ನಲೆ ರಾತ್ರಿ ಮಲಗಲು ಮನೆಯ ಟೆರೇಸ್ ಮೆಲೆ ತೆರಳಿದ್ದ ಶಿಕ್ಷಕರೊಬ್ಬರು ಟೆರೇಸ್ ನಿಂದ ಕೆಳಗೆ ಬಿದ್ದು ಸಾವನಪ್ಪಿದ ಘಟನೆ ಅಜೆಕಾರು ಆಶ್ರಯನಗರದಲ್ಲಿ ನಡೆದಿದೆ. ಮೃತರನ್ನು ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಸುಂದರ ನಾಯ್ಕ್ ( 55) ಎಂದು ಗುರುತಿಸಲಾಗಿದೆ.
ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದರು. ಬೆಳಿಗ್ಗೆ 6:30 ವೇಳೆಗೆ ಗಮನಿಸಿದಾಗ ಟೆರೇಸ್ ಮೇಲಿಂದ ಕೆಳಗೆ ಬಿದ್ದಿರೋದು ಬೆಳಕಿಗೆ ಬಂದಿದೆ. ಗಾಢ ನಿದ್ರೆಯಲ್ಲಿ ಆಯತಪ್ಪಿ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ. ಇನ್ನು ನೆಚ್ಚಿನ ಶಾಲಾ ಶಿಕ್ಷಕ ಸಾವನ್ನಪ್ಪಿದ ಸಂಗತಿ ತಿಳಿದು ವಿದ್ಯಾರ್ಥಿಗಳು ಕಣ್ಣೀರು ಸುರಿಸಿದ್ದಾರೆ.
ರೈಲ್ವೆ ಹಳಿ ಮೇಲೆ ರೀಲ್ಸ್ ಹುಚ್ಚು – ರೈಲು ಬಡಿದು 20 ವರ್ಷದ ಯುವತಿ ಸಾವು
ಹರಿದ್ವಾರ : ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹುಚ್ಚು ಯುವತಿಯೊಬ್ಬಳ ಪ್ರಾಣವನ್ನೇ ತೆಗೆದಿದೆ. ರೈಲ್ವೆ ಹಳಿ ಮೇಲೆ ನಿಂತು ರೀಲ್ಸ್ ಮಾಡುತ್ತಿರುವ ವೇಳೆ ರೈಲೊಂದು ಡಿಕ್ಕಿ ಹೊಡೆದು ಯುವತಿ ಸಾವನಪ್ಪಿದ ಘಟನೆ ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ನಡೆದಿದೆ.
ಮೃತ ಯುವತಿಯನ್ನು 20 ವರ್ಷ ಪ್ರಾಯದ ವೈಶಾಲಿ ಎಂದು ಗುರುತಿಸಲಾಗಿದ್ದು, ಈಕೆ ಹರಿದ್ವಾರ ಜಿಲ್ಲೆಯ ಹರಿಪುರದವರು ಎಂದು ಗುರುತಿಸಲಾಗಿದೆ. ಈ ಘಟನೆ ಬುಧವಾರ ಸಂಜೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೈಶಾಲಿ ತನ್ನ ಗೆಳತಿಯೊಂದಿಗೆ ರಹೀಂಪುರದ ರೈಲ್ವೆ ಗೇಟ್ ಬಳಿ ನಿಂತು ರೀಲ್ಸ್ ಗಾಗಿ ವಿಡಿಯೋ ಮಾಡುತ್ತಿದ್ದಳು. ಈ ವೇಳೆ ಬಂದ ರೈಲು ವೈಶಾಲಿಗೆ ಡಿಕ್ಕಿ ಹೊಡೆದಿದ್ದು, ಈಕೆ ಸ್ಥಳದಲ್ಲೇ ಸಾವನಪ್ಪಿದ್ದಾಳೆ.
ಆಳ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ದಾರಿ ತಪ್ಪಿ ಮರಳಿನಲ್ಲಿ ಸಿಲುಕಿಕೊಂಡ ದೋಣಿ
ಕುಂದಾಪುರ:ಮಲ್ಪೆ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಚುಕ್ಕಾಣಿ ಹಿಡಿಯುವವರ ನಿದ್ರಾಹೀನತೆಯಿಂದ ದಾರಿ ತಪ್ಪಿ ಬೀಜಾಡಿ ಕಡಲತೀರಕ್ಕೆ ಬಂದು ಮರಳಿನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.
ಎ. 30ರ ಮಧ್ಯರಾತ್ರಿ ಮಲ್ಪೆ ಬಂದರಿನಿಂದ ಬೋಟ್ ಹೊರಟಿತ್ತು.ಏಳು ಮೀನುಗಾರರು ದೋಣಿಯಲ್ಲಿದ್ದರು. ಆದರೆ, ಅವರೆಲ್ಲ ನಿದ್ದೆಗೆ ಜಾರಿದ್ದು, ಮೇ 1ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗ್ಲೂ ಕ್ಲಿಚ್ ಕಾಟೇಜ್ ಬಳಿಯ ಬೀಜಾಡಿ ಸಮುದ್ರ ತೀರಕ್ಕೆ ದೋಣಿ ತಲುಪಿತು. ಭಾರೀ ಗಾಳಿಯಿಂದಾಗಿ ದಿಕ್ಕು ಕೂಡ ಬದಲಾಗಿರಬಹುದು ಎಂದು ಶಂಕಿಸಲಾಗಿದೆ.
ಬೆಳಗಾಗುತ್ತಿದ್ದಂತೆಯೇ ದೋಣಿ ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ದೋಣಿಯಲ್ಲಿ ಮೀನುಗಾರರು ಯಾರೂ ಕಾಣದ ಕಾರಣ ಇದು ಬೇಹುಗಾರಿಕಾ ದೋಣಿಯೇ ಎಂಬ ಶಂಕೆಯೂ ವ್ಯಕ್ತವಾಗಿತ್ತು. ನಂತರ ಬೋಟ್ ಕೋಡಿಬೆಂಗ್ರೆಯ ವ್ಯಕ್ತಿಯೊಬ್ಬರಿಗೆ ಸೇರಿದ್ದು, ಆರರಿಂದ ಏಳು ಮಂದಿ ಪಾಲುದಾರರು ಬೋಟ್ ಹೊಂದಿರುವುದು ಬೆಳಕಿಗೆ ಬಂದಿದೆ.
ದುರ್ಘಟನೆಯಿಂದಾಗಿ ಹತ್ತಿರದ ರೆಸಾರ್ಟ್‌ನಲ್ಲಿ ನೆಲೆಸಿರುವ ಪ್ರವಾಸಿಗರು ಹತ್ತಿರದಿಂದ ದೋಣಿಯನ್ನು ನೋಡುವ ಅವಕಾಶವನ್ನು ಪಡೆದರು.ದೋಣಿ ಮರಳಿನಲ್ಲಿ ಸಿಲುಕಿದ್ದರಿಂದ ಬೋಟ್‌ನ ಫ್ಯಾನ್‌ನ ಬ್ಲೇಡ್‌ಗಳು ಹಾನಿಗೊಳಗಾಗಿವೆ. ಅದನ್ನು ಸರಿಪಡಿಸಿ ಎರಡು ಜೆಸಿಬಿ ಹಾಗೂ ಎರಡು ಬೋಟ್‌ಗಳ ಸಹಾಯದಿಂದ ಬೋಟನ್ನು ಮತ್ತೆ ಆಳ ಸಮುದ್ರಕ್ಕೆ ಕೊಂಡೊಯ್ದು ಬುಧವಾರ ಮಧ್ಯಾಹ್ನ ಮಲ್ಪೆ ಬಂದರಿಗೆ ಕೊಂಡೊಯ್ಯಲಾಯಿತು.