ವರನ ಹೆಸರಿನ ಬದಲು ಈ ವಧು ಮೆಹಂದಿಯಲ್ಲಿ ಬರೆದುಕೊಂಡಿದ್ದೇ ಬೇರೆ!?
ವರ್ಷಕ್ಕೊಮ್ಮೆ ಬರುವ ಹುಟ್ಟುಹಬ್ಬದಂತಲ್ಲ ಮದುವೆ. ಜೀವನದಲ್ಲಿ ಒಂದೇ ಬಾರಿ ಆಗುವಂತಹದ್ದು. ಹಾಗಾಗಿ ಅದನ್ನು ಅವಿಸ್ಮರಣೀಯ ಮಾಡಲು ಜನರು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಮದುವೆ ಪ್ರತಿಯೊಬ್ಬರ ಜೀವನದಲ್ಲೂ ವಿಶೇಷವಾಗಿರುತ್ತದೆ. ಈಗಿನ ದಿನಗಳಲ್ಲಿ ಮದುವೆ ಒಂದು ರೀತಿಯಲ್ಲಿ ಟ್ರೆಂಡ್ ಆಗಿದೆ. ಸಂಪ್ರದಾಯದಂತೆ ಮದುವೆಗಳು ನಡೆಯುತ್ತಿದ್ದ ಪ್ರದೇಶದಲ್ಲೂ ಹಾಡು, ಡಾನ್ಸ್, ಮೆಹಂದಿ, ಡ್ರೆಸ್ ಕೋಡ್, ಥೀಮ್ ಗಳು ಕಾಲಿಟ್ಟಿವೆ. ಮದುವೆಯ ಅಲಂಕಾರದಿಂದ ಆಂತ್ಯದವರೆಗೆ ಎಲ್ಲವನ್ನೂ ಸ್ಪೇಷಲ್ ಆಗಿ ಆಚರಿಸಲು ಜನರು ಮುಂದಾಗ್ತಾರೆ.
ಈಗಿನ ಮದುವೆ (Marriage) ಗಳಲ್ಲಿ ಭಿನ್ನತೆಯನ್ನು ನೀವು ನೋಡ್ಬಹುದು. ಮದುವೆ ಕಾರ್ಡ್ ತಯಾರಿಯಿಂದ ಹಿಡಿದು, ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ವಿಡಿಯೋದವರೆಗೆ ಎಲ್ಲದರಲ್ಲೂ ಭಿನ್ನತೆಯನ್ನು ಜನರು ಬಯಸ್ತಾರೆ. ತಮ್ಮ ಮದುವೆ ಆಕರ್ಷಕವಾಗಿರಬೇಕೆಂಬ ಕಾರಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಸಿದ್ಧವಿರ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈಗಿನ ದಿನಗಳಲ್ಲಿ ಅನೇಕ ಮದುವೆ ವಿಡಿಯೋಗಳು ವೈರಲ್ ಆಗ್ತಿವೆ. ಈಗ ಮತ್ತೊಂದು ಇನ್ಸ್ಟಾಗ್ರಾಮ್ (Instagram) ವಿಡಿಯೋ ಎಲ್ಲರ ಗಮನ ಸೆಳೆದಿದೆ.
ಮದುವೆ ಅಂದ್ಮೇಲೆ ಮೆಹಂದಿ ಇರಲೇಬೇಕು. ವಧು ಕೈ ತುಂಬಾ ಮೆಹಂದಿ ಹಾಕಿಕೊಳ್ತಾಳೆ. ಮೆಹಂದಿ (Mehndi) ಮಧ್ಯೆ ವರನ ಹೆಸರು ಬರೆದು ಹೆಸರು ಹುಡುಕುವ ಶಾಸ್ತ್ರ ಕೂಡ ಕೆಲವೆಡೆ ಇದೆ. ಇನ್ನು ಕೆಲವರು ಮೆಹಂದಿಯಲ್ಲೇ ವಿಶೇಷ ಡಿಸೈಜ್ ಮಾಡಿಕೊಳ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆದ ವಿಡಿಯೋದಲ್ಲಿ ವಧು, ಕೈಗೆ ಮೆಹಂದಿ ಹಾಕಿಕೊಳ್ಳುವ ಬದಲು ಏನೋ ಬರೆದುಕೊಂಡಿದ್ದಾಳೆ.
ವಧುವಿನ ಅಂಗೈನಲ್ಲಿ ಏನಿದೆ ಗೊತ್ತಾ? : ಅರೇಂಜ್ ಮ್ಯಾರೇಜ್ ಗಿಂತ ಲವ್ ಮ್ಯಾರೇಜ್ ನಲ್ಲಿ ನೆನಪುಗಳು ಹೆಚ್ಚು. ಇಬ್ಬರು ಒಟ್ಟಿಗೆ ಕಳೆದ ದಿನಗಳು ಹೆಚ್ಚಿರುತ್ತವೆ. ಪ್ರೇಮ ವಿವಾಹವಾಗುವ ಜೋಡಿ ಮದುವೆಯನ್ನು ಮತ್ತಷ್ಟು ಭಿನ್ನವಾಗಿಸುವ ಪ್ರಯತ್ನ ನಡೆಸ್ತಾರೆ. ಈಗ ಮೆಹಂದಿ ಬೈ ಅಂಕು ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಟ್ಸ್ ಕ್ಯೂಟ್ ಲವ್ ಮ್ಯಾರೇಜ್ ಎಂದು ಶೀರ್ಷಿಕೆ ಹಾಕಲಾಗಿದೆ. ವಿಡಿಯೋದಲ್ಲಿ ವಧುವಿನ ಕೈ ಮೇಲೆ ಮೆಹಂದಿ ಹಾಕಲಾಗ್ತಿದೆ. ಕೈ ತುಂಬಾ ಮೆಹಂದಿ ಡಿಸೈನ್ ಇದ್ರೆ ಅಂಗೈ ಮೇಲೆ ಡಿಸೈನ್ ಬದಲು ದಿನಾಂಕ ಬರೆಯಲಾಗಿದೆ. ಇನ್ಸ್ಟಾಗ್ರಾಮ್ 5-12-2021, ಪ್ರಪೋಸಲ್ 19-1-22, ಫಸ್ಟ್ ಮೀಟ್ 25-4-22 ಮದುವೆ 31-1-23 ಎಂದು ಬರೆಯಲಾಗಿದೆ. ಅಂದ್ರೆ ಇನ್ಸ್ಟಾಗ್ರಾಮ್ ನಲ್ಲಿ ಇಬ್ಬರು ಮೊದಲು ಪರಿಚಯವಾದ ದಿನಾಂಕ, ಪ್ರೇಮ ನಿವೇದನೆ ಮಾಡಿದ ದಿನಾಂಕ, ಭೇಟಿಯಾದ ದಿನಾಂಕ ಮತ್ತು ಮದುವೆ ದಿನಾಂಕವನ್ನು ಇಲ್ಲಿ ಬರೆಯಲಾಗಿದೆ.
ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಪೋಸ್ಟ್ ಆದ ಮೇಲೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಹಲವರು ತಮಾಷೆ ಮಾಡುತ್ತಿದ್ದಾರೆ. ಕೆಲವರು ಮದುವೆಗೆ ಶುಭಾಶಯ ಕೋರುತ್ತಿದ್ದಾರೆ. ಕೆಲವರು ವಿಚ್ಛೇದನದ ದಿನಾಂಕವನ್ನು ಹೇಳುತ್ತಿದ್ದಾರೆ. ಅಷ್ಟಕ್ಕೂ ಮದುವೆಯಾಗಲು ಆತುರ ಏನಿತ್ತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಏಳು ವರ್ಷವಾಯ್ತು, ಮನೆಯವರನ್ನು ಒಪ್ಪಿಸಲಾಗ್ಲಿಲ್ಲ. ಬಿಟ್ಟು ಹೋದ್ಲು ಎಂದು ಬಳಕೆದಾರನೊಬ್ಬ ತನ್ನ ನೋವನ್ನೂ ಇಲ್ಲಿ ತೋಡಿಕೊಂಡಿದ್ದಾನೆ. 7 -8 ತಿಂಗಳಲ್ಲೇ ಮದುವೆಯಾಯ್ತಾ? ನಾನು ಪ್ರೀತಿ ಮಾಡ್ತಾ 4 ವರ್ಷವಾಯ್ತು. ಇನ್ನೂ ಹುಡುಗಿ ಮನೆಗೆ ಹೋಗಲು ಧೈರ್ಯವಿಲ್ಲ. ನಿಮಗೆ ಮದುವೆ ಶುಭಾಶಯ ಎಂದು ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ. ಒಟ್ಟಾರೆ ಈ ಮೆಹಂದಿ ವಿನ್ಯಾಸವನ್ನು ಕೆಲವರು ಇಷ್ಟಪಟ್ಟಿದ್ದರೆ ಮತ್ತೆ ಕೆಲವರು ತಮ್ಮ ಪ್ರೇಮ ಕಥೆ, ನೋವನ್ನು ಹಂಚಿಕೊಂಡಿದ್ದಾರೆ. ಪರಿಚಯ, ಭೇಟಿ, ಪ್ರೀತಿ, ಮದುವೆ ಇಷ್ಟು ಬೇಗ ಆಗೋಕೆ ಸಾಧ್ಯವ ಎಂಬ ಪ್ರಶ್ನೆ ಕೆಲವರ ತಲೆ ತಿನ್ನುತ್ತಿದೆ.