ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್ಡಿ ರೇವಣ್ಣಗೆ ಜಾಮೀನು ಮಂಜೂರು..!
ಬೆಂಗಳೂರು, ಮೇ 20: ಮನೆಯ ಕೆಲಸದಾಕೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna). ತಂದೆ, ಮಾಜಿ ಸಚಿವ ಹೆಚ್ಡಿ ರೇವಣ್ಣ (HD Revanna) ಅವರಿಗೆ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮೆಜಿಸ್ಟ್ರೇಟ್ ಕೋರ್ಟ್ (ಎಸಿಎಂಎಂ) ಜಾಮೀನು ಮಂಜೂರು ಮಾಡಿದೆ. ಐದು ಲಕ್ಷ ಬಾಂಡ್, ಒಬ್ಬ ಶ್ಯೂರಿಟಿ ಒದಗಿಸುವಂತೆ ಹೇಳಿ ನ್ಯಾ. ಜೆ ಪ್ರೀತ್ ಅವರಿದ್ದ ಪೀಠ ಷರತ್ತುಬದ್ಧ ಜಾಮೀನು ನೀಡಿದೆ. ಈ ಹಿಂದೆ ಶಿವರಾಜ್ ಎಂಬುವರ ಶ್ಯೂರಿಟಿ ಸಲ್ಲಿಸಲಾಗಿತ್ತು. ಇದನ್ನು ಪರಿಗಣಿಸಿದ ನ್ಯಾಯಪೀಠ ಸೆಕ್ಷನ್ 354ಎ, 354ಡಿ, 506, 509 ಅಡಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಹಾಗೆ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಬಹುದು ಎಂದು 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶೆ ಜೆ.ಪ್ರೀತ್ ಹೇಳಿದ್ದಾರೆ.
ಮನೆಯ ಮಹಿಳಾ ಕೆಲಸದಾಳುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಪ್ರಜ್ವಲ್ ಹಾಗೂ ಅವರ ತಂದೆ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಏಪ್ರಿಲ್ 28 ರಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (SIT) ನೇಮಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿರುವ ಸಂತ್ರಸ್ತೆಯ ಹೇಳಿಕೆ ಪಡೆಯಿತು. ಈ ವೇಳೆ ಸಂತ್ರಸ್ತೆ ಹೇಳಿಕೆ ಆಧರಿಸಿ ಪ್ರಜ್ವಲ್ ರೇವಣ್ಣ ಅವರ ಮೇಲೆ 376 ರಡಿ (ಅತ್ಯಾಚಾರ) ಸೆಕ್ಷನ್ ಅನ್ನು ಸಹ ಎಸ್‌ಐಟಿ ಸೇರಿಸಿತ್ತು. ಸದ್ಯ ಈ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಗೆ ಜಾಮೀನು ಮಂಜೂರು ಆಗಿದೆ.
ಅಪರಹಣ ಪ್ರಕರಣದಲ್ಲಿ ಜಾಮೀನು
ಹೆಚ್ಡಿ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆಯನ್ನು ಅಪಹರಿಸಿದ್ದ ಆರೋಪದಲ್ಲಿ ಮೇ 2ರ ತಡರಾತ್ರಿ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ದೂರು ನೀಡಿದ್ದರು. ಪ್ರಕರಣ ಸಂಬಂಧ ರೇವಣ್ಣ ಪತ್ನಿ ಭವಾನಿಯವರ ಸಂಬಂಧಿಯೂ ಆಗಿರುವ ಸತೀಶ್ ಬಾಬು ಎಂಬವರನ್ನು ಈಗಾಗಲೇ ಎಸ್‌ಐಟಿ ಬಂಧಿಸಿದೆ. ಇವರನ್ನು ಆರೋಪಿ ಸಂಖ್ಯೆ 2 ಎಂದು ಎಸ್‌ಐಟಿ ಗುರುತಿಸಿದೆ. ರೇವಣ್ಣ ಮೊದಲ ಆರೋಪಿಯಾಗಿದ್ದಾರೆ.
ಮಹಿಳೆಯ ಪತ್ತೆಗಾಗಿ ನಂತರ ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳು ಮತ್ತು ಬೆಂಗಳೂರು ನಗರ ಸೇರಿದಂತೆ ವಿವಿಧಡೆ ಪರಿಶೀಲನೆ ನಡೆಸಲಾಗಿತ್ತು. ಸಂತ್ರಸ್ತೆ ಹೆಚ್ಡಿ ರೇವಣ್ಣ ಅವರ ಆಪ್ತನ ತೋಟದ ಮನೆಯಲ್ಲಿ ಪತ್ತೆಯಾಗಿದ್ದರು. ಬಳಿಕ ಮೇ 03ರ ಸಂಜೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ರೇವಣ್ಣಗೆ ಎಸ್‌ಐಟಿ ಮೂರನೇ ನೋಟಿಸ್ ನೀಡಿತ್ತು.
ಎಸ್‌ಐಟಿ ನೋಟಿಸ್ ನೀಡುತ್ತಿದ್ದಂತೆ ಮಾಜಿ ಹೆಚ್ಡಿ ರೇವಣ್ಣ ವಕೀಲರ ಮೊರೆ ಹೋಗಿದ್ದು, ಮಧ್ಯಂತರ ನಿರೀಕ್ಷಣಾ ಜಾಮೀನಿಗೆ ಜಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಸಿದ್ದರು. ಆದರೆ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಬಳಿಕ ಎಸ್‌ಐಟಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿತ್ತು. ಸೋಮವಾರ (ಮೇ 13) ರಂದು ಜಾಮೀನು ಅರ್ಜಿ ಪುರಸ್ಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಹೆಚ್ಡಿ ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿದೆ. ಮೇ 14 ಮಂಗಳವಾರದಂದು ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳು ಮುಗಿದ ಮೇಲೆ ಹೆಚ್ಡಿ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಯ್ತು.