ಲಿಫ್ಟ್ ಕಾಮಗಾರಿಗೆ ತೋಡಿದ್ದ ಗುಂಡಿಗೆ ಬಿದ್ದು ಬಾಲಕ ಸಾವು
ಬೆಂಗಳೂರು: ಬೆಂಗಳೂರಿನ ಕಾಡುಗೋಡಿಯಲ್ಲಿ ಲಿಫ್ಟ್ ಕಾಮಗಾರಿಗೆಂದು ತೋಡಲಾಗಿದ್ದ ಗುಂಡಿಯಲ್ಲಿ ಮಳೆ ನೀರು ತುಂಬಿತ್ತು. ಆಟವಾಡುವಾಗ ಈ ಗುಂಡಿಗೆ ಬಿದ್ದ 7 ವರ್ಷದ ಸುಹಾಸ್ ಗೌಡ ಎಂಬ ಬಾಲಕ ಮೃತಪಟ್ಟಿದ್ದಾನೆ. ಡೇರಿ ಅಧ್ಯಕ್ಷ ಸೊಣ್ಣಪ್ಪ, ಸೆಕ್ರೆಟರಿ ಸುನೀಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಾಲಿನ ಡೇರಿ ಕಟ್ಟಡ ನಿರ್ಮಿಸುತ್ತಿದ್ದ ಸೊಣ್ಣಪ್ಪ ಪುತ್ರ ರವಿಕುಮಾರ್ ಲಿಫ್ಟ್ ನಿರ್ಮಾಣಕ್ಕೆ ಗುಂಡಿಯನ್ನು ಅಗೆಸಿದ್ದರು. ಆಟವಾಡುವಾಗ ಕಾಲು ಜಾರಿ ಬಾಲಕ ಆ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಭಾರೀ ಮಳೆಯಿಂದ ಆ ಗುಂಡಿಯಲ್ಲಿ ನೀರು ತುಂಬಿದ್ದರೂ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸದ ಹಿನ್ನೆಲೆಯಲ್ಲಿ ಒಂದು ಜೀವ ಬಲಿಯಾಗಿದೆ.
ಇದುವರೆಗೆ ನೊಂದ ಕುಟುಂಬಕ್ಕೆ ಸಾಂತ್ವನ ಹೇಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಶ್ರೀಕನ್ಯಾ ಹಾಗೂ ಮುನಿರಾಜು ದಂಪತಿ ಪುತ್ರ ಸುಹಾಸ್ ಗೌಡ ಸಾವನ್ನಪ್ಪಿದ್ದಾನೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಕನ್ನಮಂಗಲದ ನಿರ್ಮಾಣ ಹಂತದ ಹಾಲಿನ ಡೇರಿ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದೇ ತಿಂಗಳ 23ನೇ ತಾರೀಖು ಬೆಳಗ್ಗೆ 9.30 ಗಂಟೆ ವೇಳೆ ನಡೆದಿರೋ ಘಟನೆಯಿದು. ಕನ್ನಮಂಗಲದ ಮಿಲ್ಕ್ ಡೈರಿ ಕಟ್ಟಡ ಕಾಮಗಾರಿ ನಡೆಸಲಾಗ್ತಿತ್ತು. ಆ ಕಟ್ಟಡದಲ್ಲಿ ಲಿಪ್ಟ್ ಗಾಗಿ 5 ಅಡಿ ಗುಂಡಿ ತೋಡಲಾಗಿತ್ತು. ಆ ಗುಂಡಿಯಲ್ಲಿ ನೀರು ತುಂಬಿಕೊಂಡಿದ್ದು, ಯಾವುದೇ ಮುನ್ನೆಚ್ಚರಿಕೆ ವಹಿಸದ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಮನೆ ಮುಂಭಾಗ ಆಟವಾಡುವ ವೇಳೆ ಬಾಲಕ ಆಯತಪ್ಪಿ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ಕಟ್ಟಡ ಕುಸಿತ ದುರಂತ ಸ್ಥಳಕ್ಕೆ ಸಿಎಂ ಭೇಟಿ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ:
ಬೆಂಗಳೂರು: ನಗರದ ಬಾಬುಸಾಬ್ ಪಾಳ್ಯದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಮೃತಪಟ್ಟ 8 ಮಂದಿಯ ಕುಟುಂಬಸ್ಥರಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಹೆಣ್ಣೂರು ಬಳಿಯ ಬಾಬುಸಾಬ್ ಪಾಳ್ಯದಲ್ಲಿ 6 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದು ಎಂಟು ಮಂದಿ ಮೃತಪಟ್ಟಿದ್ದರು. ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ ಘೋಷಣೆ ಮಾಡಿದ್ದಾರೆ.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ನಿನ್ನೆ ವೈಯಾನಡ್‌ಗೆ ಹೋಗಿದ್ದೆ. ಹಾಗಾಗಿ ಇಲ್ಲಿಗೆ ಬರುವುದು ತಡವಾಗಿದೆ. ಕಟ್ಟಡ ಕುಸಿತ ದುರಂತದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಆರು ಮಂದಿಗೆ ಗಾಯಳಾಗಿವೆ ಅವರ ಆಸ್ಪತ್ರೆ ಖರ್ಚು ಸರ್ಕಾರ ಭರಿಸುತ್ತದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವಾಗಿ 5 ಲಕ್ಷ ನೀಡಲಾಗುವುದು. ಕಾರ್ಮಿಕ ಇಲಾಖೆಯಿಂದ ಎರಡು ಲಕ್ಷ ನೀಡಲಾಗುತ್ತದೆ. ಬಿಬಿಎಂಪಿಯಿಂದ ಮೂರು ಲಕ್ಷ ಪರಿಹಾರ ಘೋಷಿಸಿದೆ ಎಂದು ತಿಳಿಸಿದರು.
ಮೃತದೇಹ ಕಳುಹಿಸುವ ಕೆಲಸ ಆಗುತ್ತದೆ. ಅನಧಿಕೃತವಾಗಿ ಕಟ್ಟಿದ ಕಟ್ಟಡಗಳಿಗೆ ನೊಟೀಸ್ ಕೊಟ್ಟಿದ್ದಾರೆ. ಆದರೂ ಕಟ್ಟಿದ್ದಾರೆ. ಜೋನ್ ನ ಐಎಎಸ್ ಅಫೀಸ್ ಮತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ನೋಟೀಸ್ ಕೊಡಲು ಹೇಳಲಾಗಿದೆ. ಕಾನೂನು ಪ್ರಕಾರ ಮನೆ ಕಟ್ಟಬೇಕು ಎಂದು ಜನರಿಗೆ ಮನವಿ ಮಾಡುತ್ತೇನೆ. ಕಳಪೆ ಕಾಮಗಾರಿಯಿಂದ ಈ ಕಟ್ಟಡ ಬಿದ್ದಿದೆ. ಅನಧಿಕೃತವಾಗಿ ಮನೆ ಕಟ್ಟಲು ಬಿಡಬಾರದು. ಇದಕ್ಕೆಲ್ಲಾ ಅಧಿಕಾರಿಗಳು ಹೊಣೆ ಹಾಗಾಗಿ ಕಮಿಷನರ್‌ಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಯುವಕ ಕೆರೆಯಲ್ಲಿ ಮುಳುಗಿ ಸಾವು:
ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆಯಾದ ಘಟನೆ ಜಿಲ್ಲೆಯ (Chikkamagaluru) ಎಸ್.ಬಿದರೆ ಗ್ರಾಮದಲ್ಲಿ ನಡೆದಿದೆ. ಮಂಡ್ಯದ (Mandya) ಮದ್ದೂರೂ ಮೂಲದ ಪುನೀತ್ (23) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ. ಪುನೀತ್ ಸಂಬಂಧಿಕರ ಮನೆಗೆ ಹಬ್ಬಕ್ಕೆ ಬಂದಿದ್ದ. ಈ ವೇಳೆ ಮತ್ತೋರ್ವ ಯುವಕನ ಜೊತೆ ಕೆರೆಯಲ್ಲಿ ಈಜಲು ತೆರಳಿದ್ದ. ಆದರೆ ಕೆರೆಯಿಂದ ಓರ್ವ ಯುವಕ ಮಾತ್ರ ಮೇಲೆ ಬಂದಿದ್ದು, ಪುನೀತ್ ನಾಪತ್ತೆಯಾಗಿದ್ದಾನೆ. ಎತ್ತಿನಹೊಳೆ ಯೋಜನೆ ನೀರು ಹಾಗೂ ಮಳೆಯಿಂದ ತುಂಬಿದ್ದ ಕೆರೆ ತುಂಬಿತ್ತು.
ಚಿಕ್ಕಮಗಳೂರು ತಾಲೂಕಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಆನೆ ಸ್ನಾನ ಮಾಡಿಸುವಾಗ ಕೆರೆಯಲ್ಲಿ ಮುಳುಗಿ ಕಾವಾಡಿ ಸಾವು
ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆ ಸ್ನಾನ ಮಾಡುತ್ತಿದ್ದ ವೇಳೆ ಕಾವಾಡಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಕಾವಾಡಿ ಗೋಪಾಲ್ ಎಂಬವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆನೆ ಪಾಲನಾ ಕೇಂದ್ರ ಪ್ರದೇಶದ ಸೀಗೆಕಟ್ಟೆ ಕೆರೆಯಲ್ಲಿ 10 ವರ್ಷದ ಸಂಪತ್ ಎಂಬ ಆನೆಯನ್ನು ಸ್ವಚ್ಛಗೊಳಿಸುವ ವೇಳೆ ಘಟನೆ ನಡೆದಿದೆ.
ಆನೆಯ ಮೈತೊಳೆಯುವಾಗ ಆಕಸ್ಮಿಕವಾಗಿ ಆನೆಯು ಗಾಬರಿಗೊಂಡು ಕೆರೆಯ ಆಳಕ್ಕೆ ಇಳಿದ ಪರಿಣಾಮ ಕೆರೆಯ ಆಳದಲ್ಲಿ ಮುಳುಗಿ ಕಾವಾಡಿಗ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿಯೇ ಇದ್ದ ಇತರೆ ಸಿಬ್ಬಂದಿ ಅವರನ್ನು ರಕ್ಷಿಸಿಸಲು ಪ್ರಯತ್ನಿಸಿದರೂ, ಸಫಲವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಉದ್ಯಾನದ ಸಿಬ್ಬಂದಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬನ್ನೇರುಘಟ್ಟ ಪೊಲೀಸರು, ಈಜು ತಜ್ಞರು, ಅಗ್ನಿ ಶಾಮಕ ದಳದ ಸಿಬ್ಬಂದಿ ಮೂರು ತಾಸು ಕಾರ್ಯಾಚರಣೆ ನಡೆಸಿ ಗೋಪಾಲ್ ಮೃತದೇಹ ಹೊರತೆಗೆದರು. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬಿಬಿಪಿ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಮಾತನಾಡಿ, ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಆನೆಗಳು ಆಡುವ ಮತ್ತು ಸ್ನಾನ ಮಾಡುವ ಸರೋವರವು ಆಳವಾಗಿದೆ ಮತ್ತು ಯಾವಾಗಲೂ ತುಂಬಿರುತ್ತದೆ. ಆದರೆ, ಇಂದು ಕೆರೆ ಕೆಸರುಮಯವಾಗಿತ್ತು. ಇದು ಗೋಪಾಲ್ ಅವರ ಮೊದಲ ಕೆಲಸವೂ ಆಗಿತ್ತು. ಜೈನು ಕುರುಬ ಕುಟುಂಬಕ್ಕೆ ಸೇರಿದ ಅವರ ಸಹೋದರ ಸಹ ಬಿಬಿಪಿಯಲ್ಲಿ ಕಾವಾಡಿ ಮತ್ತು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಗೋಪಾಲ್ ಕಳೆದ ಎರಡು ವರ್ಷಗಳಿಂದ BBP ಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಉತ್ತಮ ದಾಖಲೆಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.
ಇಂತಹ ಘಟನೆ ಸಂಭವಿಸುವುದು ಅಸಾಮಾನ್ಯವಾಗಿದೆ. ಸಂಪತ್ ತುಂಬಾ ಶಾಂತವಾದ ಆನೆಯಾಗಿದ್ದು, ಮಾವುತ ಅಥವಾ ಕಾವಡಿ ಇಲ್ಲದಿದ್ದರೂ ಜನರು ಅವನ ಹತ್ತಿರ ಹೋಗಬಹುದು. ಅವನು ತನ್ನ ಶಾಂತತೆಯನ್ನು ಹೇಗೆ ಕಳೆದುಕೊಂಡನು ಎಂಬುದು ಆಶ್ಚರ್ಯಕರವಾಗಿದೆ. ಆನೆ ಆಹಾರ ಸಾಗಿಸುತ್ತಿದ್ದ ಟ್ರಕ್ ಶಿಬಿರದ ಸ್ಥಳಕ್ಕೆ ಬಂದಾಗ ಈ ಘಟನೆ ನಡೆದಿದೆ. ಆನೆಯನ್ನು ಸಾಮಾನ್ಯವಾಗಿ ಕನಿಷ್ಠ 2-3 ಜನರು ಸ್ನಾನ ಮಾಡಿಸುತ್ತಾರೆ ಎಂದು ಪಶುಪಾಲಕರು ಮತ್ತು ಪಶುವೈದ್ಯರು ಹೇಳಿದ್ದಾರೆ.