ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ಶೇರಾ ಹಾಗೂ ಕಾರ್ಲ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ
ಬಂಟ್ವಾಳ: ದೇಶದ ಭವಿಷ್ಯ ಶಾಲೆಯ ನಾಲ್ಕು ಕೋಣೆಯ ಮಧ್ಯೆ ನಿರ್ಧಾರ ವಾಗುತ್ತದೆ. ಸರಕಾರಿ ಶಾಲೆಗೆ ಸಹಕಾರ ನೀಡಿ ಅಲ್ಲಿ ಕಲಿಯುವ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವುದು ನಮ್ಮ ಕರ್ತವ್ಯ ಎಂದು ರೋಟರಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್ ಹೇಳಿದರು.
ರೋಟರಿ ಕ್ಲಬ್ ಬಂಟ್ವಾಳದ ವತಿಯಿಂದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಶೇರಾ ಹಾಗೂ ಪೆರ್ನೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕಾರ್ಲ ಇಲ್ಲಿಗೆ ಕೊಡುಗೆಯಾಗಿ ನೀಡಲಾದ ಕಂಪ್ಯೂಟರ್ ಉದ್ಘಾಟಿಸಿ ಮಾತನಾಡಿದರು. ರೋಟರಿ ಕ್ಲಬ್ ಬಂಟ್ವಾಳ ಗ್ರಾಮೀಣ ಭಾಗದ ಶಾಲೆಗೆ ಸವಲತ್ತು ನೀಡಿರುವುದು ಸಂತೃಪ್ತಿ ನೀಡಿದೆ, ಶಾಲೆಗೆ ನೀಡಲಾದ ಈ ಕೊಡುಗೆಯನ್ನು ಸುಸ್ಥಿಯಲಿಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಭಾಗ್ಯವಂತರು. ಪರಿಣಿತ ಶಿಕ್ಷಕರಿಂದ ಶಿಕ್ಷಣ ಪಡೆಯುವ ಅವಕಾಶದೊಂದಿಗೆ ಶಾಲೆಯ ವಾತಾವರಣ ವಿದ್ಯಾರ್ಥಿಯ ಕಲಿಕೆ ಹಾಗೂ ಬೌದ್ಧಿಕ ವಿಕಾಸಕ್ಕೆ ಪೂರಕವಾಗಿರುತ್ತದೆ ಎಂದರು.
ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಮಾತನಾಡಿ ಗ್ರಾಮೀಣ ಭಾಗದ ಶಾಲೆಗಳ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾಗುವಂತಹ ಕೊಡುಗೆಗಳನ್ನು ರೋಟರಿ ಕ್ಲಬ್ ಬಂಟ್ವಾಳ ನಿರಂತರವಾಗಿ ನೀಡುತ್ತಾ ಬಂದಿದೆ. ಈ ಶಾಲೆಯ ಶಿಕ್ಷಕರ ಬೇಡಿಕೆಗೆ ಅನುಗುಣವಾಗಿ ಕಂಪ್ಯೂಟರ್ ನೀಡಲಾಗಿದೆ ಎಂದು ತಿಳಿಸಿದರು.
ಶೇರಾ ಸರಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಡೇಶಿವಾಲಯ ಗ್ರಾ.ಪಂ. ಅಧ್ಯಕ್ಷ. ಸುರೇಶ್ ಬನಾರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ರೈ ದೂರದರ್ಶನವನ್ನು ಉದ್ಘಾಟಿಸಿದರು. ರೋಟರಿ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷ ಪ್ರಕಾಶ್ ಬಾಳಿಗ, ಮಾಣಿ ಗ್ರಾ.ಪಂ. ಸದಸ್ಯ ಮೆಲ್ವಿನ್ ಕಿಶೋರ್, ಎಸ್‌ಡಿಎಂಸಿ ಅಧ್ಯಕ್ಷ ಕೇಶವ ಕೆ. ಉಪಾಧ್ಯಕ್ಷ ಹಬೀಬ್, ವಿದ್ಯಾಧರ ರೈ ಪೆರ್ಲಾಪು, ಉದ್ಯಮಿ ನೂತನ್ ಶೇರಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕೋಮಲಾಂಗಿ ಜಿ. ಸ್ವಾಗತಿಸಿದರು. ಸಹಶಿಕ್ಷಕಿ ಜಯಲಕ್ಷ್ಮಿ ವಂದಿಸಿದರು. ಸುವರ್ಣ ಲತಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಮುಖ್ಯ ಶಿಕ್ಷಕಿ ಜಾನಕಿ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ತಿಮ್ಮಪ್ಪ ಕೆ ಪ್ರಾಸ್ತವಿಕವಾಗಿ ಮಾತನಾಡಿದರು. ಗೌರವ ಶಿಕ್ಷಕಿ ಅನುಪಮ ವಂದಿಸಿದರು, ಸಹಶಿಕ್ಷಕಿ ಯಶೋಧ ನಿರೂಪಿಸಿದರು.