ರಾಹುಲ್ ದ್ರಾವಿಡ್ ವಿಶೇಷ ಸಂದೇಶ ಕಳುಹಿಸುತ್ತಿದ್ದಂತೆ ಗೌತಮ್ ಗಂಭೀರ್ ಭಾವುಕ!
ಭಾರತದ ಮುಖ್ಯ ಕೋಚ್ ಆಗಿ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಗೌತಮ್ ಗಂಭೀರ್ ಅವರು ರಾಹುಲ್ ದ್ರಾವಿಡ್ ಅವರಿಂದ ವಿಶೇಷ ಸಂದೇಶವನ್ನು ಪಡೆದರು.
ಭಾರತ ಮತ್ತು ಶ್ರೀಲಂಕಾ ನಡುವಣ ಟಿ20 ಸರಣಿಯು ಇಂದಿನಿಂದ (ಜುಲೈ 27) ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೂರು ಟಿ20 ಪಂದ್ಯಗಳನ್ನಾಡಲಿದೆ. ವಿಶೇಷ ಎಂದರೆ ಈ ಸರಣಿಯ ಮೂಲಕ ಭಾರತ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಹೊಸ ಇನಿಂಗ್ಸ್ ಆರಂಭಿಸಲಿದ್ದು, ಇದರ ಜೊತೆಗೆ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಪದಗ್ರಹಣ ಮಾಡಲಿದ್ದಾರೆ.
ಶನಿವಾರ (ಜುಲೈ 27) ನಡೆಯಲಿರುವ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದ ಮೂಲಕ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಹುದ್ದೆಯ ಪದಗ್ರಹಣಕ್ಕೂ ಮುನ್ನ ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ವಿಶೇಷ ಸಂದೇಶ ರವಾನಿಸಿದ್ದಾರೆ. ಬಿಸಿಸಿಐ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಈ ಸಂದೇಶದ ಸಾರಾಂಶ ಇಲ್ಲಿದೆ…
“ನಮಸ್ಕಾರ.. ಗೌತಮ್, ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರಾಗಿ ವಿಶ್ವದ ಅತ್ಯಂತ ರೋಮಾಂಚಕಾರಿ ಕೆಲಸಕ್ಕೆ ಸ್ವಾಗತ. ಭಾರತ ತಂಡದೊಂದಿಗಿನ ನನ್ನ ಅಧಿಕಾರಾವಧಿ ಮುಗಿದು 3 ವಾರಗಳಾಗಿವೆ. ನನ್ನ ಕೋಚಿಂಗ್ ಅವಧಿಯನ್ನು ನಾನು ಮೊದಲು ಬಾರ್ಬಡೋಸ್‌ನಲ್ಲಿ ಕೊನೆಗೊಳಿಸಿದ ರೀತಿ ಅದ್ಭುತವಾಗಿತ್ತು. ಇದಾದ ಬಳಿಕ ಮುಂಬೈನಲ್ಲಿ ಮರೆಯಲಾಗದ ಸಂಜೆ. ಅಂತಹದೊಂದು ವಿದಾಯವನ್ನು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಾನು ತಂಡದೊಂದಿಗೆ ಅನೇಕ ನೆನಪುಗಳು ಮತ್ತು ಅತ್ಯುತ್ತಮ ಸ್ನೇಹವನ್ನು ಸಂಪಾದಿಸಿದ್ದೇನೆ. ಭಾರತದ ಕೋಚ್ ಪಾತ್ರವನ್ನು ವಹಿಸಿಕೊಳ್ಳುತ್ತಿರುವ ನಿಮಗೂ ಇವೆಲ್ಲವೂ ಸಿಗಲಿ ಎಂದು ಹಾರೈಸುತ್ತೇನೆ.
ಪ್ರತಿ ತಂಡದಲ್ಲೂ ನಿಮಗೆ ಸಂಪೂರ್ಣ ಫಿಟ್ ಆಗಿರುವ ಆಟಗಾರರು ಸಿಗಲಿ ಎಂದು ಆಶಿಸುತ್ತೇನೆ. ಹಾಗೆಯೇ ಅದೃಷ್ಟವು ನಿಮಗೆ ಅನುಕೂಲಕರವಾಗಿರಲಿ ಎಂದು ಬಯಸುತ್ತೇನೆ. ಏಕೆಂದರೆ ಇದು ತುಂಬಾ ಅಗತ್ಯ ಎಂಬುದು ನನ್ನ ಭಾವನೆ. ನಾವು ಒಟ್ಟಿಗೆ ಆಡುವಾಗ, ನೀವು ತಂಡಕ್ಕಾಗಿ ಎಲ್ಲವನ್ನೂ ನೀಡಿರುವುದನ್ನು ನಾ ಕಂಡಿದ್ದೇನೆ. ಬ್ಯಾಟಿಂಗ್ ಮಾಡುವಾಗ, ಫೀಲ್ಡಿಂಗ್ ಮಾಡುವಾಗ ಎಂದಿಗೂ ಎದುರಾಳಿಗಳಿಗೆ ಶರಣಾಗುತ್ತಿರಲಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ.
ಅನೇಕ ಐಪಿಎಲ್ ಸೀಸನ್‌ಗಳಲ್ಲಿ ನಿಮ್ಮ ಗೆಲುವಿನ ಬಯಕೆ, ಕಿರಿಯ ಆಟಗಾರರೊಂದಿಗೆ ಕೆಲಸ ಮಾಡಲು ನಿಮ್ಮ ಉತ್ಸಾಹ. ನಿಮ್ಮ ತಂಡದಿಂದ ಉತ್ತಮವಾದುದನ್ನು ಹೊರತೆಗೆಯಲು ಪ್ರಯತ್ನವನ್ನು ನಾನು ಗಮನಿಸಿದ್ದೇನೆ. ನೀವು ಭಾರತೀಯ ಕ್ರಿಕೆಟ್ ಬಗ್ಗೆ ಎಷ್ಟು ಸಮರ್ಪಿತ ಮತ್ತು ಭಾವೋದ್ರಿಕ್ತ ವ್ಯಕ್ತಿ ಎಂಬುದು ನನಗೆ ತಿಳಿದಿದೆ. ನೀವು ಈ ಎಲ್ಲಾ ಗುಣಗಳನ್ನು ಈ ಹೊಸ ಕೆಲಸದಲ್ಲಿ ತರುತ್ತೀರಿ ಎಂದು ನನಗೆ ಖಾತ್ರಿಯಿದೆ.
ನಿಮಗೆ ತಿಳಿದಿರುವಂತೆ, ಹೊಸ ಹುದ್ದೆಯೊಂದಿಗೆ ನಿರೀಕ್ಷೆಗಳು ಹೆಚ್ಚಿರುತ್ತವೆ. ಆದರೆ ಕೆಟ್ಟ ಸಮಯದಲ್ಲೂ ನೀವು ಒಬ್ಬಂಟಿಯಾಗಿರುವುದಿಲ್ಲ. ಆಟಗಾರರು, ಸಹಾಯಕ ಸಿಬ್ಬಂದಿ, ನಿರ್ವಹಣೆ ಮತ್ತು ಹಿಂದಿನ ನಾಯಕರ ಬೆಂಬಲವನ್ನು ನೀವು ಪಡೆಯುತ್ತೀರಿ.
ಒಬ್ಬ ಭಾರತೀಯ ತಂಡದ ತರಬೇತುದಾರ ನೀಡಬಹುದಾದ ಅತ್ಯುತ್ತಮ ಸಂದೇಶವೆಂದರೆ ಕಠಿಣ ಸಮಯದಲ್ಲೂ ಒಂದು ಹೆಜ್ಜೆ ಹಿಂದಕ್ಕೆ ಇರಿಸಿ, ಎಲ್ಲವನ್ನು ನಗುಮುಖದೊಂದಿಗೆ ಎದುರಿಸುವುದು. ಅಲ್ಲದೆ ಗೆಲುವಿನ ಮೂಲಕವೇ ಎಲ್ಲರನ್ನು ನಿಬ್ಬೆರಗಾಗಿಸಬೇಕು. ಇವೆಲ್ಲದರ ಮೂಲಕ ನೀವು ಭಾರತೀಯ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂದು ನನಗೆ ಖಾತ್ರಿಯಿದೆ ಎಂದು ರಾಹುಲ್ ದ್ರಾವಿಡ್ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ಭಾವುಕರಾದ ಗಂಭೀರ್:
ರಾಹುಲ್ ದ್ರಾವಿಡ್ ಅವರ ಈ ವಾಯ್ಸ್ ನೋಟ್ ಕೇಳಿದ ನಂತರ ಗೌತಮ್ ಗಂಭೀರ್ ಭಾವುಕರಾಗಿ ಕಾಣಿಸಿಕೊಂಡರು. ಈ ಸಂದೇಶಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಿಲ್ಲ. ಆದರೆ ಈ ಸಂದೇಶ ನನ್ನ ಪಾಲಿಗೆ ತುಂಬಾ ಅರ್ಥಪೂರ್ಣ. ಏಕೆಂದರೆ ಈ ಸಂದೇಶ ಬಂದಿರುವುದು ಯಶಸ್ವಿ ಕೋಚ್ ಒಬ್ಬರಿಂದ. ಅದಕ್ಕಿಂತಲೂ ಹೆಚ್ಚಾಗಿ, ನಾನು ಯಾವಾಗಲೂ ಎದುರು ನೋಡುತ್ತಿದ್ದ ವ್ಯಕ್ತಿಯಿಂದ ಈ ಸಂದೇಶ ಬಂದಿದೆ. ಈ ಹಿಂದಿನ ಅನೇಕ ಸಂದರ್ಶನಗಳಲ್ಲಿ ಹೇಳಿರುವಂತೆ ರಾಹುಲ್ ದ್ರಾವಿಡ್ ಭಾರತೀಯ ಕ್ರಿಕೆಟ್ ಕಂಡಂತಹ ನಿಸ್ವಾರ್ಥ ವ್ಯಕ್ತಿ. ಹೀಗಾಗಿ ಈ ಮೆಸೇಜ್ ನನ್ನ ಪಾಲಿಗೆ ತುಂಬಾ ಮಹತ್ವದ್ದು.
ರಾಹುಲ್ ದ್ರಾವಿಡ್‌ನಿಂದ ಕಲಿಯಲು ಬಹಳಷ್ಟು ಇದೆ ಎಂದು ನಾನು ಭಾವಿಸುತ್ತೇನೆ. ನನಗಷ್ಟೇ ಅಲ್ಲ ಮುಂದಿನ ಪೀಳಿಗೆ ಮತ್ತು ಈಗಿನ ಪೀಳಿಗೆಗೂ ಸಹ. ಸಾಮಾನ್ಯವಾಗಿ ನಾನು ಭಾವುಕನಾಗುವುದಿಲ್ಲ. ಆದರೆ ಈ ಸಂದೇಶವು ನನ್ನನ್ನು ನಿಜವಾಗಿಯೂ ಭಾವನಾತ್ಮಕವಾಗಿ ಮಾಡಿದೆ. ನಾನು ರಾಹುಲ್ ದ್ರಾವಿಡ್ ಬಿಟ್ಟು ಹೋಗಿರುವ ದೊಡ್ಡ ಸ್ಥಾನವನ್ನು ತುಂಬಬೇಕಿದೆ. ಇದಕ್ಕಾಗಿ ನಾನು ಸಂಪೂರ್ಣ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಆಶಾದಾಯಕವಾಗಿ ಕಾರ್ಯ ನಿರ್ವಹಿಸಲು ಪ್ರಯತ್ನಿಸುವೆ. ಈ ಮೂಲಕ ಭಾರತ ಮತ್ತು ರಾಹುಲ್ ಭಾಯ್ ಹೆಮ್ಮೆಪಡುವಂತೆ ಮಾಡುತ್ತೇನೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.