ರಾಜ್ಯದ ಹಲವೆಡೆ ಮುಂದಿನ 5 ದಿನ ಮಳೆ ಸಾಧ್ಯತೆ
ಬೆಂಗಳೂರು: ಬೇಸಿಗೆ ಬೇಗೆಯಿಂದ ಕಂಗೆಟ್ಟಿದ್ದ ಕರುನಾಡ ಜನತೆಗೆ ಮಳೆರಾಯ ಗುಡ್‍ನ್ಯೂಸ್‍ನ ಸುಳಿವು ನೀಡಿದ್ದು, ಮುಂದಿನ 5 ದಿನ ರಾಜ್ಯದಾದ್ಯಂತ ಮಳೆ (Rain) ಯಾಗುವ ಬಗ್ಗೆ ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಬೇಸಿಗೆ ಆರಂಭದಲ್ಲೇ ಜನ ಬಿಸಿಲ ಬೇಗೆಗೆ ಕಂಗೆಟ್ಟಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸುಡು ಬಿಸಿಲಿಗೆ ಬೆಂದಂತಾಗಿರೋ ಜನಸಾಮಾನ್ಯನಿಗೆ ಸದ್ಯ ಮಳೆಯ ಮುನ್ಸೂಚನೆ ಸಿಕ್ಕಿದ್ದು, ಮುಂದಿನ 5 ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿಗೆ ಹವಾಮಾನ ಇಲಾಖೆ ಮಳೆಯ ಸೂಚನೆ ನೀಡಿದೆ.
ಮಧ್ಯಪ್ರದೇಶದಿಂದ ತಮಿಳುನಾಡಿ (Tamilnadu) ನಲ್ಲಿ 9 ಮೀಟರ್ ಗಾಳಿಯ ದಿಕ್ಕಿನ ಬದಲಾವಣೆ ಹಿನ್ನೆಲೆ ರಾಜ್ಯದ ದಕ್ಷಿಣ ಒಳನಾಡಿಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿಗೆ ಇಂದಿನಿಂದ 5 ದಿನಕಾಲ ಮಳೆ ಇರಲಿದ್ದು, ಮಂಡ್ಯ, ಮೈಸೂರು, ಕೋಲಾರ, ಹಾಸನ, ಕೊಡಗು, ಚಾಮರಾಜನಗರ, ಸೇರಿದಂತೆ ಹಲವೆಡೆ ಮಳೆಯಾಗಲಿದೆ. ಅದೇ ರೀತಿಯಾಗಿ ಉತ್ತರ ಒಳನಾಡಿನಲ್ಲಿ ಇಂದಿನಿಂದ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಒಣಹವೆ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮೋಡ ಕವಿದ ವಾತಾವರಣ ಹಾಗೂ ಗಾಳಿಯ ಪ್ರಮಾಣ ಹೆಚ್ಚಾಗಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಬೆನ್ನಲ್ಲೆ ಬುಧವಾರ ರಾತ್ರಿ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ ಭಾಗದ ಅನೇಕ ಕಡೆ ಜೋರು ಮಳೆಯಾಗಿದೆ. ಇದರ ಜೊತೆಗೆ ಮುಂದಿನ ಎರಡು ದಿನ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.