ರಾಜ್ಯದಂತ 1ನೇ ಗ್ಯಾರಂಟಿ ಜಾರಿ; ನುಡಿದಂತೆ ನಡೆದಿದ್ದೇವೆ - ಪ್ರಿಯಾಂಕ ಖರ್ಗೆ
ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರ 5 ಉಚಿತ ಗ್ಯಾರಂಟಿ ಯೋಜನೆ ಜಾರಿಗೆ ಈಗಾಗಲೆ ಆದೇಶ ಹೊರಡಿಸಿದ್ದು, ಲಿಂಗ ಬೇಧವಿಲ್ಲದೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿ ಕೇಂದ್ರ ಬಸ್ನಿಲ್ದಾಣದಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಆಯೋಜಿಸಿದ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣಾ ಪೂರ್ವ ನೀಡಿದ ವಾಗ್ಧಾನದಂತೆ ಇಂದು ಮಹಿಳೆಯರು ಸಾರಿಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ನುಡಿದಂತೆ ನಡೆದಿದ್ದೇವೆ, ಗ್ಯಾರಂಟಿಗಳ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಮೊದಲ ಪ್ರಯತ್ನವಾಗಿ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 1.40 ಲಕ್ಷ ಸೇರಿದಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಪ್ರತಿನಿತ್ಯ 7.35 ಲಕ್ಷ ಮಹಿಳಾ ಪ್ರಯಾಣಿಕರು ಇದರ ಸೌಲಭ್ಯ ಪಡೆಯಲಿದ್ದಾರೆ ಎಂದರು. ಉಳಿದ ನಾಲ್ಕು ಗ್ಯಾರಂಟಿಗಳಾದ ಯುವ ನಿಧಿ, ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯನಿಗೆ 10 ಕೆ.ಜಿ. ಆಹಾರ ಧಾನ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆ ಜಾರಿಗೆ ತರಲಾಗುತ್ತಿದ್ದು, ಬರುವಂತಹ ದಿನದಲ್ಲಿ ಈ ಯೋಜನೆಯ ಲಾಭ ರಾಜ್ಯದ ಜನತೆ ಪಡೆಯಲಿದ್ದಾರೆ. ರಾಜ್ಯದಲ್ಲಿ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಸಹ ಭರ್ತಿ ಮಾಡಲು ಚಿಂತನೆ ನಡೆದಿದೆ ಎಂದರು.
ಮ್ಮ ಸರ್ಕಾರ ಬಂದು 1 ತಿಂಗಳೊಳಗೆ ಐದು ಗ್ಯಾರಂಟಿಗಳನ್ನು ಯೋಜನೆ ಜಾರಿಗೆ ತಂದಿದ್ದೇವೆ. ಈ ಯೋಜನೆಗಳಿಗೆ ವಾರ್ಷಿಕ 50 ಸಾವಿರ ಕೋಟಿ ರು. ಹೊರೆಯಾದರು ಸಹ ಜನರ ಜೀವನ ಸುಧಾರಣೆ ಮತ್ತು ಕಲ್ಯಾಣದ ನಿಟ್ಟಿನಲ್ಲಿ ಜಾರಿಗೆ ತರಲಾಗುತ್ತಿದೆ. ಈ ಆರ್ಥಿಕ ಹೊರೆಯನ್ನು ನಿಭಾಯಿಸುವ ಶಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗಿದ್ದು, ಈಗಾಗಲೇ ಈ ಯೋಜನೆಗಳ ಜಾರಿಗೆ ಬೇಕಾಗುವ ಹಣಕಾಸು ಹೊಂದಾಣಿಕೆಗೆ ಪರ್ಯಾಯ ಮಾರ್ಗ ಕೂಡಾ ಕಂಡುಹಿಡಿಯಲಾಗಿದೆ. ಒಟ್ಟಾರೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ದೇಶದಲ್ಲಿಯೇ ಕರ್ನಾಟಕ ನಂ-1 ರಾಜ್ಯ ಮಾಡುವ ಗುರಿ ಹೊಂದಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು.
ಶಕ್ತಿ ಯೋಜನೆಗೆ ಚಾಲನೆ ನೀಡಿದ ನಂತರ ಸಚಿವ ಪ್ರಿಯಾಂಕ್ ಖರ್ಗೆ ಹೂವು ಮತ್ತು ಬಲೂನ್ಗಳಿಂದ ಅಲಂಕೃತಗೊಂಡ ಕಲಬುರಗಿ-ಆಳಂದ, ಕಲಬುರಗಿ-ಸೇಡಂ ಮಾರ್ಗದ ಬಸ್ ಹತ್ತಿದ ಅವರು, ಕಂಡಕ್ಟರ್ ಬಳಿ ಇದ್ದ ಇಟಿಎಂ ಮಶಿನ್ ಪಡೆದು ತಾವೇ ಖುದ್ದಾಗಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸಿ ಇನ್ಮುಂದೆ ರಾಜ್ಯದಲ್ಲಿನ ಸಾರಿಗೆ ಬಸ್ಗಳಲ್ಲಿ ಪ್ರಯಾಣಕ್ಕೆ ಮಹಿಳೆಯರು, ವಿದ್ಯಾರ್ಥಿನಿಯರು ಹಣ ಪಾವತಿಸಬೇಕಿಲ್ಲ. ಉಚಿತ ಟಿಕೆಟ್ ಪಡೆದು ಪ್ರಯಾಣಿಸಬಹುದು ಎಂದು ಹೇಳಿ ಪ್ರಯಾಣಕ್ಕೆ ಶುಭ ಕೋರಿದರು.
ಇದಕ್ಕು ಮುನ್ನ ಪ್ರಸ್ತಾವಿಕವಾಗಿ ಮಾತನಾಡಿದ ಕೆಕೆಆರ್ಟಿಸಿ ಎಂ.ಡಿ. ಎಂ.ರಾಚಪ್ಪ, ಕೆಕೆಆರ್ಟಿಸಿ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಗರ ಸಾರಿಗೆ-202, ಸಾಮಾನ್ಯ ಸಾರಿಗೆ-1,533, ವೇಗದೂತ-1,427, ಆಯ್ದ ಅಂತರ ರಾಜ್ಯ-216 ಸೇರಿದಂತೆ ಒಟ್ಟು 3,378 ಬಸ್ಗಳಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಸರ್ಕಾರಿ ಮಾನ್ಯತೆ ಪಡೆದಿರುವ ಗುರುತಿನ ಚೀಟಿಗಳಾದ ಆಧಾರ್ ಕಾರ್ಡ್, ವೋಟರ್ ಐಡಿ, ವಾಸಸ್ಥಳದ ಗುರುತಿನ ಚೀಟಿ ತೋರಿಸಿ ಶೂನ್ಯ ಟಿಕೆಟ್ ಪಡೆದು ಉಚಿತ ಪ್ರಯಾಣ ಬೆಳೆಸಬಹುದಾಗಿದೆ ಎಂದು ತಿಳಿಸಿದರು.