ರಶೀದ್ ಖಾನ್ 10 ಸಿಕ್ಸರ್‌ಗೆ ಬೆಚ್ಚಿದ ಮುಂಬೈ, ಆದರೂ ಮುಂಬೈಗೆ 27 ರನ್‌ಗಳ ಜಯ!
ಮುಂಬೈ: ಸೂರ್ಯಕುಮಾರ್ ಯಾದವ್ (SuryaKumar Yadav) ಅವರ ಸ್ಫೋಟಕ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians) ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ 27 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಗೆಲ್ಲಲು 219 ರನ್‌ಗಳ ಕಠಿಣ ಸವಾಲು ಪಡೆದ ಗುಜರಾತ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಮುಂಬೈ 14 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದರೆ ಗುಜರಾತ್ 16 ಅಂಕ ಪಡೆದು ಮೊದಲ ಸ್ಥಾನದಲ್ಲೇ ಮುಂದುವರಿದಿದೆ.
ಆರಂಭದಿಂದಲೇ ವಿಕೆಟ್ ಕಳೆದುಕೊಂಡ ಗುಜರಾತ್ 55 ರನ್‌ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ವಿಜಯ್ ಶಂಕರ್ 29 ರನ್(14 ಎಸೆತ, 6 ಬೌಂಡರಿ), ಡೇವಿಡ್ ಮಿಲ್ಲರ್ 41 ರನ್(26 ಎಸೆತ, 4 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು.
103 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಾಗ ಗುಜರಾತ್ ಸುಲಭವಾಗಿ ಆಲೌಟ್ ಆಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಕೊನೆಯಲ್ಲಿ ರಶೀದ್ ಖಾನ್ ಸ್ಫೋಟಕ ಅರ್ಧಶತಕ ಸಿಡಿಸಿ ಸೋಲಿನ ಅಂತರವವನ್ನು ಕಡಿಮೆ ಮಾಡಿದರು. ಮುರಿಯದ 9ನೇ ವಿಕೆಟಿಗೆ ರಶೀದ್ ಖಾನ್ ಮತ್ತು ಜೋಸೆಫ್ 40 ಎಸೆತಗಳಲ್ಲಿ 88 ರನ್ ಜೊತೆಯಾಟವಾಡಿದರು. ರಶೀದ್ ಖಾನ್ ಔಟಾಗದೇ 79 ರನ್(32 ಎಸೆತ, 3 ಬೌಂಡರಿ, 10 ಸಿಕ್ಸರ್) ಚಚ್ಚಿದರು.
ರಶೀದ್ ಖಾನ್ ಸಿಕ್ಸರ್ ಹೊಡೆತಕ್ಕೆ ಮುಂಬೈ ಇಂಡಿಯನ್ಸ್ ಒಂದು ಕ್ಷಣ ಬೆಚ್ಚಿ ಬಿದ್ದಿತ್ತು. ಬರೋಬ್ಬರಿ 10 ಸಿಕ್ಸರ್ ಸಿಡಿಸುವ ಮೂಲಕ ಮುಂಬೈ ಭರ್ಜರಿ ಗೆಲುವಿನ ಲೆಕ್ಕಾಚಾರ ಉಲ್ಟಾ ಮಾಡಿದರು. ಬರೋಬ್ಬರಿ 10 ಸಿಕ್ಸರ್ ಸಿಡಿಸಿದ ರಶೀದ್ ಖಾನ್ ಗುಜರಾತ್ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಮೊದಲು ಬ್ಯಾಟ್ ಮಾಡಿದ ಮುಂಬೈ ಉತ್ತಮ ಆರಂಭ ಪಡೆಯಿತು. ಇಶನ್ ಕಿಶನ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟಿಗೆ 61 ರನ್‌ಗಳ ಜೊತೆಯಾಟವಾಡಿದರು. ರೋಹಿತ್ ಶರ್ಮಾ 29 ರನ್ (18 ಎಸೆತ, 3 ಬೌಂಡರಿ, 2 ಸಿಕ್ಸರ್) ಸಿಡಿಸಿದರೆ ಕಿಶನ್ ಕಿಶನ್ 31 ರನ್(20 ಎಸೆತ, 4 ಬೌಂಡರಿ, 1 ಸಿಕ್ಸರ್) ಚಚ್ಚಿದರು.
ಸೂರ್ಯಕುಮಾರ್ ಆರಂಭದಿಂದಲೇ ಅಬ್ಬರಿಸಲು ಆರಂಭಿಸಿದರು. ಪರಿಣಾಮ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸೂರ್ಯ 49 ಎಸೆತಗಳಲ್ಲಿ ಶತಕ ಹೊಡೆದರು. ಸೂರ್ಯಕುಮಾರ್ ಮತ್ತು ವಿಷ್ಣು ವಿನೋದ್ 4ನೇ ವಿಕೆಟಿಗೆ 42 ಎಸೆತಗಳಲ್ಲಿ 65 ರನ್ ಹೊಡೆದರೆ ಮುರಿಯದ 5ನೇ ವಿಕೆಟಿಗೆ ಕ್ಯಾಮರೂನ್ ಗ್ರೀನ್ ಜೊತೆ 18 ಎಸೆತಗಳಲ್ಲಿ 54 ರನ್ ಚಚ್ಚಿದರು. 54 ರನ್‌ಗಳಲ್ಲಿ ಗ್ರೀನ್ ಮೂರು ಎಸೆತಗಳಲ್ಲಿ3 ರನ್ ಮಾತ್ರ ಹೊಡೆದಿದ್ದರು. 20ನೇ ಓವರಿನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಸೂರ್ಯ ಶತಕ ಸಿಡಿಸಿದರು.